ಮುಂಬಯಿ : ಟೆಸ್ಟ್ ನಾಯಕತ್ವ ತ್ಯಜಿಸಿದ ವೇಳೆ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯನ್ನು ಹೊರತುಪಡಿಸಿ ಇನ್ಯಾರೂ ಬೆಂಬಲಕ್ಕೆ ನಿಂತಿಲ್ಲ ಎಂದು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಯ ಹೇಳಿಕೆ, ಬಿಸಿಸಿಐ ಹಾಗೂ ಅವರ ನಡುವಿನ ಮತ್ತೊಂದು ಶೀತಲ ಸಮರಕ್ಕೆ ಕಾರಣವಾಗುವ ಸಾಧ್ಯತೆಗಳಿವೆ. ವಿರಾಟ್ ಕೊಹ್ಲಿಯನ್ನು ಏಕ ದಿನ ತಂಡದ ನಾಯಕತ್ವದಿಂದ ಇಳಿಸಿದ್ದ ಸಂದರ್ಭದಲ್ಲಿಯೂ ಇದೇ ರೀತಿಯ ಪ್ರಸಂಗ ನಡೆದಿತ್ತು.
ಭಾನುವಾರ ನಡೆದ ಏಷ್ಯಾ ಕಪ್ ಟೂರ್ನಿಯ ಸೂಪರ್-೪ ಹಂತದಲ್ಲಿ ಪಾಕಿಸ್ತಾನ ವಿರುದ್ಧ ವಿರಾಟ್ ಕೊಹ್ಲಿ ಅರ್ಧ ಶತಕ ಬಾರಿಸಿದ್ದರು. ಈ ವಿಶ್ವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಅವರು, “ತಾವು ಟೆಸ್ಟ್ ತಂಡದ ನಾಯಕತ್ವ ತ್ಯಜಿಸಿದ್ದ ವೇಳೆ ಧೋನಿ ಬಿಟ್ಟು ಇನ್ಯಾರೂ ಬೆಂಬಲಕ್ಕೆ ನಿಂತಿಲ್ಲ. ಉಳಿದವರೆಲ್ಲರೂ ಟಿವಿ ಮುಂದೆ ಸಲಹೆ ಕೊಟ್ಟವರು,” ಎಂದು ಹೇಳಿದ್ದರು. ಇದು ಬಿಸಿಸಿಐ ಅಧಿಕಾರಿಗಳ ಬೇಸರವಾಗಿದ್ದು, ಹೆಸರು ಹೇಳದ ಅಧಿಕಾರಿಯೊಬ್ಬರು ಕೊಹ್ಲಿ ಸುಳ್ಳು ಹೇಳುತ್ತಿದ್ದಾರೆ ಎಂದಿದ್ದಾರೆ.
“ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವ ಬಿಟ್ಟ ವೇಳೆ ಎಲ್ಲರೂ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಬಿಸಿಸಿಐನಿಂದ ಹಿಡಿದು ಎಲ್ಲ ಆಟಗಾರರು ಅವರಿಗೆ ಶುಭಾಶಯ ತಿಳಿಸಿದ್ದಾರೆ. ಬೆಂಬಲ ದೊರಕಿಲ್ಲ ಎಂದು ಅವರು ಹೇಳುತ್ತಿರುವುದು ಸುಳ್ಳು. ಅವರಿಗೆ ಪುನಶ್ಚೇತನಕ್ಕಾಗಿ ವಿಶ್ರಾಂತಿ ನೀಡಲಾಗಿದೆ. ಬಿಸಿಸಿಐ ಕೂಡ ಅವರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಶುಭಾಶಯ ಕೋರಿದೆ. ಅವರೇನು ಮಾತನಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ,” ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ | Virat kohli | ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಅರ್ಧ ಶತಕಗಳು ಬಾರಿಸಿದ ವಿರಾಟ್ ಕೊಹ್ಲಿ