ಹೈದರಾಬಾದ್: ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ಧದ ಏಕ ದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ 12 ರನ್ಗಳ ವಿಜಯ ಸಾಧಿಸಿದೆ. ಹಾಗೆಂದು ಈ ಜಯ ಸುಲಭವಾಗಿರಲಿಲ್ಲ. ಯಾಕೆಂದರೆ ಶಾರ್ದೂಲ್ ಠಾಕೂರ್ ಎಸೆದ ಕೊನೇ ಓವರ್ನಲ್ಲಿ ಎದುರಾಳಿ ತಂಡದ ಗೆಲುವಿಗೆ 20 ರನ್ಗಳು ಬೇಕಾಗಿತ್ತು. ಮೊದಲ ಎಸೆತದಲ್ಲಿಯೇ ಬ್ರೇಸ್ವೆಲ್ ಸಿಕ್ಸರ್ ಬಾರಿಸಿದ್ದರು. ನಂತರದ ಎಸೆತ ವೈಡ್. ಹೀಗಾಗಿ ಕೊನೇ ಐದು ಎಸೆತಗಳಲ್ಲಿ 13 ರನ್ ಸಾಕಾಗಿತ್ತು. ಸ್ಫೋಟಕ ಬ್ಯಾಟರ್ ಬ್ರೇಸ್ವೆಲ್ 140 ರನ್ ಬಾರಿಸಿ ಸ್ಟ್ರೈಕ್ನಲ್ಲಿದ್ದರು. ಹೀಗಾಗಿ ಭಾರತಕ್ಕೆ ಸೋಲು ಖಚಿತವೆಂದೇ ಹೇಳಲಾಯಿತು. ಆದರೆ, ಠಾಕೂರ್ ಎಸೆದ ಎರಡನೇ ಎಸೆತಕ್ಕೆ ರಿವರ್ಸ್ ಸ್ವೀಪ್ ಮಾಡಲು ಮುಂದಾದ ಬ್ರೇಸ್ವೆಲ್ ಎಲ್ಬಿಡಬ್ಲ್ಯು ಬಲೆಗೆ ಬಿದ್ದರು. ನ್ಯೂಜಿಲ್ಯಾಂಡ್ ತಂಡ 337 ರನ್ಗಳಿಗೆ ಸರ್ವಪತನ ಕಂಡಿತು.
ಕೊನೇ ಹಂತದವರೆಗೂ ಭಾರತ ತಂಡದ ಬೌಲರ್ಗಳನ್ನು ಬೆಂಡೆತ್ತಿದ್ದ ಬ್ರೇಸ್ವೇಲ್ ಅವರನ್ನು ಶಾರ್ದೂಲ್ ಠಾಕೂರ್ ಎಲ್ಬಿಡಬ್ಲ್ಯು ಬಲೆಗೆ ಕೆಡವಿಚ್ದು ಅಚ್ಚರಿಯ ವಿಷಯ. ಆದರೆ, ಈ ತಂತ್ರವನ್ನು ಶಾರ್ದೂಲ್ಗೆ ಹೇಳಿ ಕೊಟ್ಟಿರುವುದು ವಿರಾಟ್ ಕೊಹ್ಲಿ. ಯಾರ್ಕರ್ ಎಸೆತ ಎಸೆಯುವ ಮೂಲಕ ಎಲ್ಬಿಡಬ್ಲ್ಯು ಬಲೆಗೆ ಬೀಳಿಸುವಂತೆ ವಿರಾಟ್ ಕೊಹ್ಲಿ ಹೇಳಿದ್ದರು. ಆ ಯೋಜನೆಯನ್ನು ಶಾರ್ದೂಲ್ ಕಾರ್ಯಗತಗೊಳಿಸಿದ್ದರು.
ಪಂದ್ಯದ ಮುಕ್ತಾಯದ ಬಳಿಕ ಮಾತನಾಡಿದ ಬೌಲರ್ ಶಾರ್ದೂಲ್ ಠಾಕೂರ್, ಯಾರ್ಕರ್ ಮೂಲಕ ಬ್ರೇಸ್ವೆಲ್ ಅವರನ್ನು ಎಲ್ಬಿಡಬ್ಲ್ಯು ಬಲೆಗೆ ಕೆಡವಲು ವಿರಾಟ್ ಕೊಹ್ಲಿ ಹೇಳಿಕೊಟ್ಟರು. ಅದರಂತೆ ಬೌಲಿಂಗ್ ಮಾಡಿದೆ. ಯೋಜನೆ ಕೆಲಸ ಮಾಡಿತು ಎಂಬುದಾಗಿ ಅವರು ಹೇಳಿದ್ದಾರೆ.
ಈ ಪಂದ್ಯದ ಗೆಲುವಿನ ಬಳಿಕ ಭಾರತ ತಂಡ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಜನವರಿ 21ರಂದು ಎರಡನೇ ಪಂದ್ಯ ನಡೆಯಲಿದ್ದು ಈ ಹಣಾಹಣಿಯಲ್ಲಿ ಗೆದ್ದರೆ ಭಾರತಕ್ಕೆ ಸರಣಿ ಗೆಲುವು ಖಚಿತ.
ಇದನ್ನೂ ಓದಿ | Shardul Thakur | ಫೆಬ್ರವರಿ 27ಕ್ಕೆ ಮದುವೆಯಾಗಲಿದ್ದಾರೆ ಟೀಮ್ ಇಂಡಿಯಾದ ಆಟಗಾರ ಶಾರ್ದೂಲ್ ಠಾಕೂರ್!