Site icon Vistara News

INDvsSL | ಪಂದ್ಯ ಮುಗಿಯುವ ಮೊದಲೇ ಹ್ಯಾಂಡ್​ ಶೇಕ್​; ನಾಯಕ ಹಾರ್ದಿಕ್​ ಪಾಂಡ್ಯ ಮಾಡಿದ್ದು ತಪ್ಪೊ, ಸರಿಯೊ?

hardik pandya

ಪುಣೆ : ಪ್ರವಾಸಿ ಶ್ರೀಲಂಕಾ ವಿರುದ್ಧದ (INDvsSL) ಎರಡನೇ ಟಿ20 ಪಂದ್ಯದಲ್ಲಿ ಭಾರತ ತಂಡ 16 ರನ್​ಗಳ ಸೋಲಿಗೆ ಒಳಗಾಗಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿ 1-1 ಸಮಬಲದ ಸಾಧನೆ ಮಾಡಿದ್ದು, ಜನವರಿ 7ರಂದು ರಾಜ್​ಕೋಟ್​ನಲ್ಲಿ ನಡೆಯುವ ಮೂರನೇ ಪಂದ್ಯದಲ್ಲಿ ಸರಣಿ ವಿಜೇತರ ನಿರ್ಣಯವಾಗಲಿದೆ. ಏತನ್ಮಧ್ಯೆ, ಪುಣೆಯಲ್ಲಿ ಜನವರಿ 5ರಂದು ನಡೆದ ಹಣಾಹಣಿ ಅತ್ಯಂತ ರೋಚಕವಾಗಿತ್ತು. ಅಕ್ಷರ್ ಪಟೇಲ್​ (65) ಹಾಗೂ ಸೂರ್ಯಮಾರ್​ ಯಾದವ್​ (51) ಅವರ ದಿಟ್ಟ ಹೋರಾಟ ನಡೆಸುವ ಮೂಲಕ ಗೆಲುವಿನ ಭರವಸೆ ಮೂಡಿಸಿದ್ದರು. ಆದರೆ, 206 ರನ್​ಗಳ ದೊಡ್ಡ ಮೊತ್ತ ಪೇರಿಸಿದ್ದ ಶ್ರೀಲಂಕಾ ತಂಡ ಅರ್ಹ ಗೆಲುವು ದಾಖಲಿಸಿತ್ತು.

ಪಂದ್ಯದ ಕೊನೇ ಎಸೆತಕ್ಕೆ ಭಾರತ ತಂಡದ ಗೆಲುವಿಗೆ 17 ರನ್​ಗಳು ಬೇಕಾಗಿದ್ದವು. ಈ ವೇಳೆಯೇ ಟೀಮ್​ ಇಂಡಿಯಾ ನಾಯಕ ಹಾರ್ದಿಕ್​ ಪಾಂಡ್ಯ ತನ್ನ ಸಹ ಆಟಗಾರರಿಗೆ ಹ್ಯಾಂಡ್​ ಶೇಕ್​ ಮಾಡಿದ್ದರು. ಅದು ಪೋಸ್ಟ್​ ಮ್ಯಾಚ್​ ಹ್ಯಾಂಡ್​ಶೇಕ್​. ಎರಡೂ ಇನಿಂಗ್ಸ್​ ಮುಕ್ತಾಯಗೊಂಡ ಬಳಿಕ ಹ್ಯಾಂಡ್​ ಶೇಕ್​ ಮಾಡುವುದು ಪದ್ಧತಿ. ಆದರೆ, ಪಾಂಡ್ಯ ಕೊನೇ ಎಸೆತಕ್ಕೆ ಮೊದಲೇ ಕೈ ಕುಲುಕಿದ್ದಾರೆ. ಇದು ಕ್ರಿಕೆಟ್​ ಅಭಿಮಾನಿಗಳಿಗೆ ಹಿಡಿಸಿಲ್ಲ. ಅವರು ಪಾಂಡ್ಯ ವರ್ತನೆಯನ್ನು ಖಂಡಿಸಿದ್ದಾರೆ.

ಕೊನೇ ಎಸೆತಕ್ಕೆ 17 ರನ್​ಗಳನ್ನು ಮಾಡುವುದು ಸ್ಟೈಕ್​ನಲ್ಲಿ ಬ್ಯಾಟ್​ ಮಾಡುತ್ತಿದ್ದ ಶಿವಂ ಮಾವಿಗೆ ಸಾಧ್ಯವಿಲ್ಲ ಎಂಬುದು ಗೊತ್ತಿರುವ ವಿಚಾರ. ಆದರೆ, ಕ್ರಿಕೆಟ್​ನಲ್ಲಿ ಎಲ್ಲವೂ ಸಾಧ್ಯ ಎಂಬುದಕ್ಕೆ ಹಲವು ಉದಾಹರಣೆಗಳಿವೆ. ಹಾಗಿದ್ದರೂ ಹಾರ್ದಿಕ್​ ಪಾಂಡ್ಯ ಇನ್ನೊಂದು ಎಸೆತ ಬಾಕಿ ಇರುವಂತೆಯೇ ಹ್ಯಾಂಡ್​ ಶೇಕ್ ಮಾಡಿರುವುದು ಸರಿಯಾದ ಧೋರಣೆ ಅಲ್ಲ ಎಂಬುದು ಕ್ರಿಕೆಟ್​ ಅಭಿಮಾನಿಗಳ ವಾದ.

ಇಂದು ಪಾಂಡ್ಯನ ಯುಗ. ಈಗ ಏನು ಮಾಡಿದರೂ ಸರಿ. ಹಾರ್ದಿಕ್​ ಪಾಂಡ್ಯ ಓವರ್​ ಸ್ಮಾರ್ಟ್​. ಅವರು ಇಂಥದ್ದೆಲ್ಲ ಮಾಡುತ್ತಾರೆ ಎಂಬುದಾಗಿ ನವ್ಯಾ ಎಂಬುವರು ಬರೆದುಕೊಂಡಿದ್ದಾರೆ.

ಪಂದ್ಯದ ಬಳಿಕ ಮಾತನಾಡಿದ ಹಾರ್ದಿಕ್​ ಪಾಂಡ್ಯ, ಸೋಲು ನಮಗೆ ಆಘಾತ ತಂದಿದೆ. ನಾವು ಅಷ್ಟೊಂದು ತಪ್ಪುಗಳನ್ನು ಯಾವ ಕಾರಣಕ್ಕೂ ಮಾಡಬಾರದಿತ್ತು. ನಾವು ಏನು ಮಾಡಿದ್ದೇವೆ ಎಂಬುದು ಎಲ್ಲರಿಗೂ ಗೊತ್ತು. ಆ ತಪ್ಪುಗಳನ್ನು ಸರಿಪಡಿಸುವತ್ತ ಗಮನ ಹರಿಸುತ್ತೇವೆ ಎಂದು ಪಂದ್ಯದ ಬಳಿಕ ಹಾರ್ದಿಕ್​ ಹೇಳಿದ್ದಾರೆ.

ಇದನ್ನೂ ಓದಿ | IND VS SL | ಟಾಸ್​ ಬಳಿಕ ನಾಯಕ ಹಾರ್ದಿಕ್​ ಪಾಂಡ್ಯ ನೀಡಿದ ಪ್ರತಿಕ್ರಿಯೆ ವೈರಲ್​; ಪಾಂಡ್ಯ ಹೇಳಿದ ಉತ್ತರವಾದರೂ ಏನು?

Exit mobile version