Site icon Vistara News

ಹುಚ್ಚು ಸಾಹಸಕ್ಕೆ ಜಡೇಜಾಗೆ ಗಾಯ, ವಿಶ್ವ ಕಪ್‌ನಿಂದ ಹೊರಗುಳಿಯುವಂತಾದ ಆಲ್‌ರೌಂಡರ್‌ ಬಗ್ಗೆ ಅಸಮಾಧಾನ

team india

ಮುಂಬಯಿ : ಭಾರತ ತಂಡದ ಆಲ್‌ರೌಂಡರ್‌ ರವೀಂದ್ರ ಜಡೇಜಾ ಅವರಿಗೆ ಮಂಗಳವಾರ ಮಂಡಿ ಶಸ್ತ್ರ ಚಿಕಿತ್ಸೆ ನಡೆಸಿದೆ. ಹೀಗಾಗಿ ಅವರು ಮುಂದಿನ ಟಿ೨೦ ವಿಶ್ವ ಕಪ್‌ನಲ್ಲಿ ಆಡುವ ಅವಕಾಶ ಬಹುತೇಕ ಕಳೆದುಕೊಂಡಿದ್ದಾರೆ. ಆದರೆ, ಜಡೇಜಾ ಅವರಿಗೆ ಆಗಿರುವುದು ಆಟದ ಸಂದರ್ಭದಲ್ಲಿನ ಗಾಯವಲ್ಲ. ಅನಗತ್ಯ ಸಮಸ್ಯೆ ಎಂಬುದು ತಿಳಿದು ಬಂದಿದ್ದು, ಈ ಬಗ್ಗೆ ಬಿಸಿಸಿಐ ಆಂತರಿಕ ವಲಯದಲ್ಲಿ ಅಸಮಾಧಾನ ಸೃಷ್ಟಿಯಾಗಿದೆ ಎನ್ನಲಾಗಿದೆ.

ಗುಂಪು ಹಂತದ ಪಂದ್ಯಗಳು ಮುಗಿದ ಬಳಿಕ ಭಾರತ ತಂಡದ ಆಟಗಾರರು ಮೋಜು- ಮಸ್ತಿಯಲ್ಲಿ ಭಾಗಿಯಾಗಿದ್ದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡಿದ್ದವು. ನಾಯಕ ರೋಹಿತ್‌ ಶರ್ಮ ಸೇರಿದಂತೆ ಎಲ್ಲರೂ ಈ ಸಾಹಸದಲ್ಲಿ ಪಾಲ್ಗೊಂಡಿದ್ದರು. ಸ್ಕೇಟ್‌ ಬೋರ್ಡ್‌ನಲ್ಲಿ ಸಾಹಸ ಮಾಡಲು ಹೋದ ಜಡೇಜಾ ಅವರು ಸಮತೋಲನ ತಪ್ಪಿ ನೆಲಕ್ಕೆ ಬಿದ್ದಿದ್ದರು. ಈ ವೇಳೆ ಅವರ ಮಂಡಿ ತಿರುಗಿ ಸಮಸ್ಯೆ ಉಂಟಾಗಿದೆ. ತಕ್ಷಣವೇ ಅವರು ಮುಂಬಯಿಗೆ ವಾಪಸಾಗಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ.

ಜಡೇಜಾ ಅವರ ಅನುಪಸ್ಥಿತಿ ಭಾರತ ಆಡುವ ಬಳಗದ ಸಮತೋಲನ ತಪ್ಪುವಂತೆ ಮಾಡಿತ್ತು. ಆ ಬಳಿಕ ಭಾರತ ತಂಡ ಸೂಪರ್‌-೪ ಹಂತದಲ್ಲಿ ಪಾಕಿಸ್ತಾನ ಹಾಗೂ ಶ್ರೀಲಂಕಾ ವಿರುದ್ಧ ಸೋಲು ಕಂಡಿತ್ತು. ಈ ಎರಡು ಸೋಲುಗಳು ಏಷ್ಯಾ ಕಪ್‌ ಚಾಂಪಿಯನ್‌ಪಟ್ಟ ಉಳಿಸಿಕೊಳ್ಳುವ ಭಾರತ ತಂಡದ ಅವಕಾಶವನ್ನು ಕಸಿದುಕೊಂಡಿತ್ತು.

ಟೂರ್ನಿಯ ನಡುವೆ ಮೋಜು ಯಾಕೆ?

ಏಷ್ಯಾ ಕಪ್‌ನ ಅರ್ಧದಲ್ಲಿ ಆಟಗಾರರು ಮೋಜು- ಮಸ್ತಿಗೆ ಹೋಗುವ ಅವಶ್ಯಕತೆ ಇರಲಿಲ್ಲ. ಇಂಥ ಸಾಹಸಕ್ಕೆ ಹೋದ ಕಾರಣ ಪ್ರಮುಖ ಆಲ್‌ರೌಂಡರ್‌ ಒಬ್ಬರು ಏಷ್ಯಾ ಕಪ್‌ ಹಾಗೂ ಮುಂದಿನ ಟಿ೨೦ ವಿಶ್ವ ಕಪ್‌ಗೆ ಅಲಭ್ಯರಾಗಿದ್ದಾರೆ. ಟೀಮ್ ಮ್ಯಾನೇಜ್ಮೆಂಟ್‌ ಇಂಥದ್ದಕ್ಕೆಲ್ಲ ಅವಕಾಶ ನೀಡಬಾರದಿತ್ತು ಎಂಬುದಾಗಿ ಬಿಸಿಸಿಐನ ಕೆಲವು ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ | Team India | ರವೀಂದ್ರ ಜಡೇಜಾಗೆ ಮಂಡಿ ಆಪರೇಷನ್‌ ಸಕ್ಸೆಸ್‌

Exit mobile version