ಚೆನ್ನೈ : ಭಾರತ ತಂಡದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ (Ravindra Jadeja) ಗಾಯದ ಸಮಸ್ಯೆಯಿಂದ ಸಂಪೂರ್ಣವಾಗಿ ಸುಧಾರಿಸಿಕೊಂಡಿದ್ದಾರೆ. ಆದರೆ. ಅವರ ಫಿಟ್ನೆಸ್ ಪರೀಕ್ಷೆಯ (Fitness Test) ವರದಿ ಇನ್ನೂ ಕೈ ಸೇರಿಲ್ಲ. ಆದಾಗ್ಯೂ ಅವರು ಟೀಮ್ ಇಂಡಿಯಾಗೆ (Team India) ಮರಳುವ ದಿನಗಳ ಎಣಿಕೆ ಶುರುವಾಗಿದೆ. ಏತನ್ಮಧ್ಯೆ ಅವರು ರಣಜಿ ಟ್ರೋಫಿಯಲ್ಲಿ (Ranji Trophy) ಸೌರಾಷ್ಟ್ರ ತಂಡದ ಪರವಾಗಿ ತಮಿಳುನಾಡು ವಿರುದ್ಧ ಆಡುತ್ತಿದ್ದಾರೆ. ಈ ಪಂದ್ಯದಲ್ಲಿ ಅವರು ಎದುರಾಳಿ ತಂಡದ ಏಳು ವಿಕೆಟ್ ಪಡೆಯುವ ಮೂಲಕ ಅದ್ಧೂರಿ ಮರುಪ್ರವೇಶ ಮಾಡಿದ್ದಾರೆ.
ಚೆನ್ನೈನ ಚೆಪಾಕ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರುವ ಹಣಾಹಣಿಯಲ್ಲಿ ಅವರು ತಮಿಳುನಾಡು ತಂಡದ ಎರಡನೇ ಇನಿಂಗ್ಸ್ನಲ್ಲಿ 53 ರನ್ಗಳಿಗೆ 7 ವಿಕೆಟ್ ಉರುಳಿಸಿದ್ದಾರೆ. ಅವರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿರುವ ತಮಿಳುನಾಡು ತಂಡ 133 ರನ್ಗಳಿಗೆ ಆಲ್ಔಟ್ ಆಗಿದೆ. ಅವರ ಸಾಧನೆಯ ನೆರವಿನಿಂದ ಸೌರಾಷ್ಟ್ರ ತಂಡದ ಗೆಲುವಿಗೆ 266 ರನ್ಗಳ ಗುರಿ ಎದುರಾಗಿದೆ.
ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ತಮಿಳುನಾಡು ತಂಡ 324 ರನ್ ಪೇರಿಸಿತ್ತು. ಪ್ರತಿಯಾಗಿ ಆಡಿದ್ದ ಸೌರಾಷ್ಟ್ರ 192 ರನ್ಗಳಿಗೆ ಆಲ್ಔಟ್ ಆಗಿ ಇನಿಂಗ್ಸ್ ಹಿನ್ನಡೆಗೆ ಒಳಗಾಗಿತ್ತು. ಇದೀಗ ತಮಿಳುನಾಡು ತಂಡವೂ 133 ರನ್ಗಳಿಗೆ ಆಲ್ಔಟ್ ಆಗಿರುವ ಕಾರಣ ಪಂದ್ಯ ಕುತೂಹಲ ಸೃಷ್ಟಿಸಿದೆ.
ಇದನ್ನೂ ಓದಿ : Ravindra Jadeja | ಫೆಬ್ರವರಿ 1ರಂದು ರವೀಂದ್ರ ಜಡೇಜಾ ಫಿಟ್ನೆಸ್ ರಿಪೋರ್ಟ್ ಬಿಡುಗಡೆ
ಸೌರಾಷ್ಟ್ರ ತಂಡದ ನಾಯಕರಾಗಿ ಆಡಿರುವ ರವೀಂದ್ರ ಜಡೇಜಾ ಅವರಿಗೆ ಇದು ಪ್ರಮುಖ ಪಂದ್ಯವಾಗಿದೆ. ಯಾಕೆಂದರೆ ಸುಮಾರು ನಾಲ್ಕು ತಿಂಗಳ ಬಳಿಕ ತಂಡಕ್ಕೆ ಮರಳುತ್ತಿರುವ ಅವರು ಆಯ್ಕೆಗಾರರಿಗೆ ವಿಶ್ವಾಸ ಮೂಡಿಸುವ ಕೆಲಸ ಮಾಡಬೇಕಾಗಿದೆ.