Site icon Vistara News

IND vs SA: ದ್ವಿತೀಯ ಪಂದ್ಯಕ್ಕೆ ಜಡೇಜಾ ಲಭ್ಯ; ಆಡುವ ಬಳಗದಲ್ಲಿ ಬದಲಾವಣೆ

ravindra jadeja

ಕೇಪ್​ಟೌನ್​: ಬೆನ್ನುನೋವಿನ ಸಮಸ್ಯೆಯಿಂದ ಮೊದಲ ಟೆಸ್ಟ್​ ಪಂದ್ಯದಿಂದ ಹೊರಗುಳಿದಿದ್ದ ಸ್ಟಾರ್​ ಆಲ್​ರೌಂಡರ್​ ರವೀಂದ್ರ ಜಡೇಜಾ(Ravindra Jadeja) ಅವರು ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಟೆಸ್ಟ್(india vs south africa 2nd test)​ ಪಂದ್ಯದಲ್ಲಿ ಆಡಲಿದ್ದಾರೆ ಎಂದು ತಿಳಿದುಬಂದಿದೆ. ಜಡೇಜಾ ಅವರ ಕಮ್​ಬ್ಯಾಕ್​ನಿಂದ ತಂಡ ಬಲಿಷ್ಠಗೊಳ್ಳಲಿದೆ.

ರವೀಂದ್ರ ಜಡೇಜಾ ಸಂಪೂರ್ಣವಾಗಿ ಫಿಟ್​ ಆಗಿದ್ದು ದ್ವಿತೀಯ ಪಂದ್ಯದಲ್ಲಿ ಕಣಕ್ಕಿಳಿಯುವು ಬಹುತೇಕ ಖಚಿತ ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದಾಗಿ ಟೈಮ್ಸ್​ ಆಫ್​ ಇಂಡಿಯಾ ವರದಿ ಮಾಡಿದೆ. ಮೊದಲ ಪಂದ್ಯದಲ್ಲಿ ಜಡೇಜಾ ಅನುಪಸ್ಥಿತಿಯಲ್ಲಿ ರವಿಚಂದ್ರ ಅಶ್ವಿನ್​ ಅವಕಾಶ ಪಡೆದಿದ್ದರು. ಆದರೆ ಅವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲರಾಗಿದ್ದರು. 2 ಇನಿಂಗ್ಸ್​ ಸೇರಿ ಕಢವಲ ಒಂದು ವಿಕೆಟ್​ ಮಾತ್ರ ಕಬಳಿಸಿದ್ದರು. ಬ್ಯಾಟಿಂಗ್​ನಲ್ಲಿಯೂ ಶೂನ್ಯ ಮತ್ತು 8 ರನ್​ ಗಳಿಸಿದ್ದರು.

ಜಡೇಜಾ ದ್ವಿತೀಯ ಪಂದ್ಯಕ್ಕೆ ಮರಳಿದರೆ ಆಗ ಅಶ್ವಿನ್​ ಆಡುವ ಬಳಗದಿಂದ ಹೊರಬೀಳಲಿದ್ದಾರೆ. ಜಡೇಜಾ ಸ್ಪಿನ್​ ಜತೆಗೆ ಬ್ಯಾಟಿಂಗ್​ ಕೂಡ ಮಾಡಬಲ್ಲರು. ಇದು ತಂಡಕ್ಕೆ ಹೆಚ್ಚು ಪ್ಲಸ್​ ಪಾಯಿಂಟ್​ ಆಗಲಿದೆ. ಈ ವರ್ಷದಲ್ಲಿ ಜಡೇಜಾ ಭಾರತ ತಂಡದ ಪರ ಬ್ಯಾಟಿಂಗ್​ ಮತ್ತು ಬೌಲಿಂಗ್​ ಎರಡೂ ವಿಭಾದಲ್ಲಿಯೂ ಶ್ರೇಷ್ಠ ನಿರ್ವಹಣೆ ತೋರಿದ್ದರು.

ಈ ವರ್ಷ ಜಡೇಜಾ ಸಾಧನೆ

ರವೀಂದ್ರ ಜಡೇಜಾ ಈ ವರ್ಷ ಟೀಮ್ ಇಂಡಿಯಾ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿದ್ದಾರೆ. ಒಟ್ಟಾರೆಯಾಗಿ ಭಾರತ ಪರ 67 ಟೆಸ್ಟ್ ಪಂದ್ಯಗಳನ್ನು ಆಡಿರುವ ಜಡೇಜಾ 275 ವಿಕೆಟ್ ಪಡೆದಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ತಮಡಕ್ಕೆ ಆಸರೆಯಾಗಿ ನಿಂತು ಆಡಬಲ್ಲ ಸಾಮರ್ಥ್ಯ ಇವರಿಗಿದೆ. ಅದೆಷ್ಟೋ ಬಾರಿ ಇವರು ಅಗ್ರ ಕ್ರಮಾಂಕದ ಆಟಗಾರರು ನಾಟಕೀಯ ಕುಸಿತ ಕಂಡ ಬಳಿಕ ಮಧ್ಯಮ ಕ್ರಮಾಂಕದಲ್ಲಿ ಶ್ರೇಷ್ಠ ಬ್ಯಾಟಿಂಗ್​ ನಿರ್ವಹಣೆ ತೋರಿ ತಂಡವನ್ನು ಸೋಲಿನಿಂದ ಪಾರು ಮಾಡಿದ ಹಲವು ನಿದರ್ಶನಗಳಿವೆ.

ತಂಡ ಸೇರಿದ ಅವೇಶ್​ ಖಾನ್​

ದ್ವಿತೀಯ ಟೆಸ್ಟ್​ ಪಂದ್ಯಕ್ಕೂ ಮುನ್ನ ಟೀಮ್​ ಇಂಡಿಯಾ ವೇಗದ ಬೌಲರ್​ ಅವೇಶ್​ ಖಾನ್(avesh khan)​ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಮೊಹಮ್ಮದ್​ ಶಮಿ ಅವರ ಸ್ಥಾನಕ್ಕೆ ಅವೇಶ್​ರನ್ನು ಆಯ್ಕೆ ಮಾಡಲಾಗಿದೆ.

ಶಮಿ ಅವರು ಪಾದದ ನೋವಿನ ಕಾರಣದಿಂದ ಟೆಸ್ಟ್​ ಸರಣಿಯಿಂದ ಹೊರಬಿದ್ದಿದ್ದರು. ಆದರೆ ಅವರ ಸ್ಥಾನಕ್ಕೆ ಯಾವುದೇ ಬದಲಿ ಬೌಲರ್​ ಆಯ್ಕೆ ಮಾಡಿರಲಿಲ್ಲ. ಇದೀಗ ಮೊದಲ ಪಂದ್ಯದಲ್ಲಿ ಬೌಲಿಂಗ್​ ಕೊರತೆಯಿಂದಾಗಿ ಸೋಲು ಕಂಡ ಕಾರಣ ದ್ವಿತೀಯ ಪಂದ್ಯದಲ್ಲಿ ಬಲಿಷ್ಠ ಬೌಲಿಂಗ್​ ದಾಳಿ ಸಂಘಟಿಸಲು ಮುಂದಾಗಿರುವ ಟೀಮ್​ ಇಂಡಿಯಾ ಹೆಚ್ಚುವರಿಯಾಗಿ ಅವೇಶ್​ ಖಾನ್​ ಅವರನ್ನು ತಂಡಕ್ಕೆ ಆಯ್ಕೆ ಮಾಡಿಕೊಂಡಿದೆ.

ಇದನ್ನೂ ಓದಿ IND vs SA: ಸೋಲಿನ ಬೆನ್ನಲ್ಲೇ ಟೀಮ್​ ಇಂಡಿಯಾಕ್ಕೆ ಎಂಟ್ರಿ ಕೊಟ್ಟ ವೇಗಿ

ಬೌಲಿಂಗ್​ ಆಲ್​ರೌಂಡರ್​ ಆಗಿರುವ ಶಾರ್ದೂಲ್​ ಠಾಕೂರ್​ ಬ್ಯಾಟಿಂಗ್​ ಸೇರಿ ಬೌಲಿಂಗ್​ನಲ್ಲಿಯೂ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದರು. ಹೀಗಾಗಿ ಅವರನ್ನು ದ್ವಿತೀಯ ಪಂದ್ಯದಲ್ಲಿ ಆಡುವ ಬಳಗದಿಂದ ಕೈಬಿಟ್ಟು ಅವರ ಸ್ಥಾನಕ್ಕೆ ಅವೇಶ್​ ಖಾನ್​ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ. ದ್ವಿತೀಯ ಟೆಸ್ಟ್​ ಪಂದ್ಯ ಜನವರಿ 3ರಿಂದ ಕೇಪ್​ಟೌನ್​ನಲ್ಲಿ ಆರಂಭಗೊಳ್ಳಲಿದೆ. ಭಾರತ ಗೆದ್ದರೆ ಸರಣಿ ಡ್ರಾಗೊಳ್ಳಲಿದೆ.

Exit mobile version