ಬೆಂಗಳೂರು : ಭಾರತ ತಂಡದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ (Ravindra Jadeja) ಅವರ ಫಿಟ್ನೆಸ್ ರಿಪೋರ್ಟ್ (Fitness Report) ಫೆಬ್ರವರಿ 1ರಂದು ಹೊರ ಬೀಳಲಿದೆ ಎಂಬುದಾಗಿ ಕ್ರಿಕ್ಬಜ್ (Crickbuzz) ವರದಿ ಮಾಡಿದೆ. ಬೆಂಗಳೂರಿನಲ್ಲಿರುವ ಎನ್ಸಿಎಗೆ ಭೇಟಿ ನೀಡಲಿರುವ ಅವರು ಪರೀಕ್ಷೆಗೆ ಒಳಪಡಲಿದ್ದು ಬಳಿಕ ಮುಂದಿನ ಬಾರ್ಡರ್- ಗವಾಸ್ಕರ್ ಟ್ರೋಫಿಗೆ ಲಭ್ಯರಾಗುತ್ತಾರೆಯೇ ಎಂಬುದು ಗೊತ್ತಾಗಲಿದೆ. ರಣಜಿ ಟ್ರೋಫಿಯಲ್ಲಿ ಆಡಿ ಮುಗಿಸಿದ ಬಳಿಕ ಅವರು ಪರೀಕ್ಷೆಗೆ ಒಳಪಡಲಿದ್ದಾರೆ ಎಂಬುದಾಗಿ ಬಿಸಿಸಿಐ ಮೂಲಗಳು ತಿಳಿಸಿವೆ.
2022ರ ಅಕ್ಟೋಬರ್ನಲ್ಲಿ ಏಷ್ಯಾ ಕಪ್ಗಾಗಿ ಯುಎಇಗೆ ತೆರಳಿದ್ದ ರವೀಂದ್ರ ಜಡೇಜಾ ಅವರು ಮಂಡಿ ನೋವಿನ ಸಮಸ್ಯೆ ಎದುರಿಸಿದ್ದರು. ಅಲ್ಲಿಂದ ಮುಂಬಯಿಗೆ ವಾಪಸಾದ ಅವರು ಶಸ್ತ್ರ ಚಿಕಿತ್ಸೆಗೆ ಒಳಪಟ್ಟಿದ್ದರು. ಬಳಿಕ ಅವರನ್ನು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (NCA) ಪುನಶ್ಚೇತನಕ್ಕೆ ಒಳಪಡಿಸಲಾಗಿತ್ತು. ಅಲ್ಲಿಂತ ತವರೂರು ಗುಜರಾತ್ಗೆ ತೆರಳಿದ್ದ ಅವರು ಪತ್ನಿ ರಿವಾಬಾ ಅವರೊಂದಿಗೆ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರು. ಎಲ್ಲವೂ ಮುಗಿದ ಬಳಿಕ ಅವರು ನೆಟ್ನಲ್ಲಿ ಅಭ್ಯಾಸ ನಡೆಸಿದ್ದರು.
ಇದನ್ನೂ ಓದಿ | Ravindra Jadeja: ರಣಜಿ ಆಡಲು ಚೆನ್ನೈಗೆ ಬಂದಿಳಿದ ರವೀಂದ್ರ ಜಡೇಜಾ
ಬಾರ್ಡರ್-ಗವಾಸ್ಕರ್ ಟ್ರೋಫಿಗೆ ತಂಡ ಪ್ರಕಟಗೊಂಡ ಬಳಿಕ ರವೀಂದ್ರ ಜಡೇಜಾ ಅವರಿಗೆ ತಂಡದಲ್ಲಿ ಅವಕಾಶ ನೀಡಲಾಗಿತ್ತು. ಆದರೆ, ಅವರ ಫಿಟ್ನೆಸ್ ಬಗ್ಗೆ ಇನ್ನೂ ವರದಿ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಸೌರಾಷ್ಟ್ರ ತಂಡದ ಪರವಾಗಿ ತಮಿಳುನಾಡು ತಂಡದ ವಿರುದ್ಧ ರಣಜಿ ಟ್ರೋಫಿಯಲ್ಲಿ ಆಡುತ್ತಿದ್ದಾರೆ. ಅದು ಮುಗಿದ ತಕ್ಷಣ ಬೆಂಗಳೂರಿಗೆ ವಾಪಸಾಗಿ ಫಿಟ್ನೆಸ್ ಪರೀಕ್ಷೆಗೆ ಒಳಪಟ್ಟು ವರದಿ ಪಡೆಯಲಿದ್ದಾರೆ. ಫಿಟ್ನೆಸ್ ಟೆಸ್ಟ್ನಲ್ಲಿ ಪಾಸಾದರೆ ಮಾತ್ರ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ನಾಗ್ಪುರದಲ್ಲಿ ಫೆಬ್ರವರಿ 2ರಂದು ಆರಂಭವಾಗಲಿರುವ ಟೆಸ್ಟ್ ತಂಡದಲ್ಲಿ ಅವರು ಅವಕಾಶ ಪಡೆಯಲಿದ್ದಾರೆ.