ಮುಂಬಯಿ : ಕೇರಳ ಮೂಲದ ವಿಕೆಟ್ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಅವರಿಗೆ ಟೀಮ್ ಇಂಡಿಯಾದಲ್ಲಿ (Indian Cricket Team) ಅವಕಾಶ ಕೊಡಲಾಗುತ್ತಿಲ್ಲ ಎಂಬುದು ಭಾರತದ ಕ್ರಿಕೆಟ್ ಕಾರಿಡಾರ್ನ ದೊಡ್ಡ ಚರ್ಚೆ. ಅದಕ್ಕೆ ಪೂರಕವಾಗಿ ಅವರು ಸರಣಿಗಳಲ್ಲಿ ಅವರು ಅವಕಾಶಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಟೀಮ್ ಇಂಡಿಯಾದಲ್ಲಿ ವಿಕೆಟ್ಕೀಪಿಂಗ್ ಬ್ಯಾಟರ್ ಕೋಟಾಗೆ ಹೆಚ್ಚು ಪೈಪೋಟಿ ಇರುವುದೇ ಅದಕ್ಕೆ ಕಾರಣ. ಕೆ. ಎಲ್ ರಾಹುಲ್, ರಿಷಭ್ ಪಂತ್, ಇಶಾನ್ ಕಿಶನ್ ಈ ಸ್ಥಾನಕ್ಕೆ ಪೈಪೋಟಿ ಒಡುತ್ತಿರುವ ಆಟಗಾರರು. ಇದರಿಂದಾಗಿ ಸಂಜುಗೆ ಅವಕಾಶ ನಷ್ಟವಾಗುತ್ತಿದೆ. ಅವರ ಕುರಿತು ಮಾತನಾಡಿದ ಟೀಮ್ ಇಂಡಿಯಾದ ಮಾಜಿ ಬ್ಯಾಟರ್ ವಾಸಿಮ್ ಜಾಫರ್, ಮುಂಬರುವ ಪ್ರವಾಸಿ ಶ್ರೀಲಂಕಾ ವಿರುದ್ಧದ ಸೀಮಿತ ಓವರ್ಗಳ ಸರಣಿಯಲ್ಲಿ ಸಂಜು ಸ್ಯಾಮ್ಸನ್ಗೆ ಅವಕಾಶ ಸಿಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಬಾಂಗ್ಲಾದೇಶ ವಿರುದ್ಧದ ಏಕ ದಿನ ಸರಣಿಯಲ್ಲಿ ಕೆ. ಎಲ್ ರಾಹುಲ್ ವಿಕೆಟ್ಕೀಪಿಂಗ್ ಮಾಡಿದ್ದರು. ಕಾಯಂ ವಿಕೆಟ್ಕೀಪರ್ ರಿಷಭ್ ಪಂತ್ ಅವರನ್ನು ಬೆಂಚು ಕಾಯಿಸಲಾಗಿತ್ತು. ಆದರೆ, ರಾಹುಲ್ ಅವರು ಟೆಸ್ಟ್ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ ಬಳಿಕ ಅವರನ್ನು ಲಂಕಾ ವಿರುದ್ಧದ ಸರಣಿಯಲ್ಲಿ ಮುಂದುವರಿಸುವ ಸಾಧ್ಯತೆಗಳು ಕಡಿಮೆ. ಇದೇ ಅಂದಾಜಿನ ಮೇಲೆ ಮಾತನಾಡಿದ ಜಾಫರ್, ಸಂಜುಗೆ ಅವಕಾಶ ಲಭಿಸಲಿದೆ ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ವಾಸಿಮ್ ಜಾಫರ್ “ಈ ಬಾರಿ ಸಂಜು ಸ್ಯಾಮ್ಸನ್ ಅವರು ಟೀಮ್ ಇಂಡಿಯಾದ ಭಾಗವಾಗಿ ಇರಲಿದ್ದಾರೆ. ಅವರು ಏಕದಿನ ಹಾಗೂ ಟಿ20 ಸರಣಿಯಲ್ಲಿ ಆಡಲಿದ್ದಾರೆ. ಅದೇ ರೀತಿ ಸ್ಥಿರತೆಯಿಂದ ರನ್ ಗಳಿಸಲಿದ್ದಾರೆ,” ಎಂದು ಬರೆದುಕೊಂಡಿದ್ದಾರೆ.
ಸಂಜು ಸ್ಯಾಮ್ಸನ್ ಅವರು ಇತ್ತೀಚೆಗಿನ ನ್ಯೂಜಿಲ್ಯಾಂಡ್ ಪ್ರವಾಸದಲ್ಲಿ ಭಾರತ ತಂಡದ ಭಾಗವಾಗಿದ್ದರು. ಆದರೆ, ಮೂರು ಪಂದ್ಯಗಳ ಸರಣಿಯಲ್ಲಿ ಅವರು ಅವಕಾಶ ಪಡೆದಿರಲಿಲ್ಲ. ಅದೇ ರೀತಿ ಕಳೆದ ಆಗಸ್ಟ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕೊನೇ ಬಾರಿ ಟಿ20 ಮಾದರಿಯಲ್ಲಿ ಆಡಿದ್ದರು.
ಇದನ್ನೂ ಓದಿ | Sanju Samson | ನಮ್ಮ ತಂಡಕ್ಕೆ ಬನ್ನಿ; ಸಂಜು ಸ್ಯಾಮ್ಸನ್ಗೆ ಆಫರ್ ನೀಡಿದ ಐರ್ಲೆಂಡ್ ಕ್ರಿಕೆಟ್ ಮಂಡಳಿ!