ಮುಂಬಯಿ : ಬಿಸಿಸಿಐನ ಪ್ರಮುಖ ಹುದ್ದೆಗಳಲ್ಲಿ ಇನ್ನೊಂದು ಅವಧಿಗೆ ಸ್ಪರ್ಧಿಸಲು ಸುಪ್ರೀಮ್ ಕೋರ್ಟ್ ಅವಕಾಶ ಕೊಟ್ಟ ಬೆನ್ನಲ್ಲೆ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಕಾರ್ಯದರ್ಶಿ ಜಯ್ ಶಾ ಹೊಸ ರಣತಂತ್ರ ರೂಪಿಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯ (ICC) ಅಧಿಕಾರದ ಚುಕ್ಕಾಣಿ (ICC Chairman) ಹಿಡಿಯವುದೇ ಈ ಜೋಡಿಯ ಹೊಸ ಯೋಜನೆ. ಅಂತೆಯೇ ಗಂಗೂಲಿ ಮುಂದಿನ ಐಸಿಸಿ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಲಿದ್ದು, ಜಯ್ ಶಾ ಬಿಸಿಸಿಐ ಮುಖ್ಯಸ್ಥ ಸ್ಥಾನದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.
ಸೌರವ್ ಗಂಗೂಲಿ ಹಾಗೂ ಜಯ್ ಶಾ ಜೋಡಿ ಮುಂದುವರಿಕೆಗೆ ಇದ್ದ ಸಾಂವಿಧಾನಿಕ ತೊಡಕನ್ನು ಸುಪ್ರೀಮ್ ಕೋರ್ಟ್ ಎರಡು ದಿನದ ಹಿಂದೆ ನಿವಾರಿಸಿತ್ತು. ನೂತನ ಸಂವಿಧಾನದಲ್ಲಿ ಉಲ್ಲೇಖಿಸಲಾಗಿದ್ದ ಕಡ್ಡಾಯ ಕೂಲಿಂಗ್ ಆಫ್ ಪಿರಿಯಡ್ ನಿಯಮವನ್ನು ತಿದ್ದುಪಡಿ ತರಲು ಕೋರ್ಟ್ ಒಪ್ಪಿಕೊಂಡಿತ್ತು. ಅದಾದ ಬೆನ್ನಲ್ಲೇ ಜಾಗತಿಕ ಕ್ರಿಕೆಟ್ ಸಂಸ್ಥೆಗೆ ಪ್ರವೇಶ ಪಡೆಯುವ ಲೆಕ್ಕಾಚಾರ ಹಾಕಿಕೊಂಡಿದ್ದಾರೆ ಗಂಗೂಲಿ.
ಬಿಸಿಸಿಐ ಮೂಲಗಳ ಪ್ರಕಾರ ಭಾರತ ತಂಡದ ಮಾಜಿ ನಾಯಕ ಗಂಗೂಲಿ ಅವರು ಮುಂದಿನ ನವೆಂಬರ್‌ನಲ್ಲಿ ಐಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ. ಈ ಮೂಲಕ ಉನ್ನತ ಸ್ಥಾನವನ್ನು ಅಲಂಕರಿಸಿದ ಐದನೇ ಭಾರತೀಯ ಎನಿಸಿಕೊಳ್ಳಲಿದ್ದಾರೆ. ಈ ಹಿಂದೆ ಎನ್ ಶ್ರೀನಿವಾಸನ್, ಶಶಾಂಕ್ ಮನೋಹರ್, ಜಗನ್ಮೋಹನ್ ದಾಲ್ಮಿಯಾ ಹಾಗೂ ಶರದ್ ಪವಾರ್ ಈ ಹುದ್ದೆಯನ್ನು ಅಲಂಕರಿಸಿದ್ದರು. ಹಾಲಿ ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೆ ಅವರ ಅಧಿಕಾರವಧಿ ಮುಕ್ತಾಯಗೊಂಡಿದ್ದು, ಎರಡು ತಿಂಗಳ ಮುಂದುವರಿಕೆಯನ್ನು ಕೋರಿದ್ದಾರೆ. ಅವರು ಅಧಿಕಾರದಿಂದ ಇಳಿದ ತಕ್ಷಣ ಗಂಗೂಲಿ ಆ ಸ್ಥಾನದ ಹುದ್ದೆಗೆ ಅರ್ಜಿ ಸಲ್ಲಿಸಲಿದ್ದಾರೆ.
ಐಸಿಸಿ ಅಧ್ಯಕ್ಷರ ನೇಮಕ ಪ್ರಕ್ರಿಯೆ ಬರ್ಮಿಂಗ್ಹಮ್ ಕಾನ್ಫರೆನ್ಸ್‌ನಲ್ಲಿ ನಡೆಯಲಿದೆ. ಅಧ್ಯಕ್ಷರ ಆಯ್ಕೆಗೆ ಈ ಹಿಂದಿನ ಮೂರರಲ್ಲಿ ಎರಡು ಭಾಗದ ಬಹುಮತ ಅಗತ್ಯವಿಲ್ಲ. ೧೬ ಸದಸ್ಯರ ಮಂಡಳಿಯಲ್ಲಿ ಶೇಕಡ ೫೧ರಷ್ಟು ಮತಗಳು ಲಭಿಸಿದರೆ ಸಾಕು. ಅಂತೆ ೯ ಸದಸ್ಯರ ಬೆಂಬಲ ದೊರಕಿದರೆ ಅಧ್ಯಕ್ಷರಾಗಬಹುದು.
ಜಯ್ ಶಾ ಯೋಜನೆ ಏನು?
ಸೌರವ್ ಗಂಗೂಲಿ ಏನಾದರೂ ಐಸಿಸಿ ಅಧ್ಯಕ್ಷರ ಚುನಾವಣೆಯಲ್ಲಿ ಬಹುಮತ ಪಡೆದ ತಕ್ಷಣ ಬಿಸಿಸಿಐ ಹುದ್ದೆಯನ್ನು ತೊರೆಯಲಿದ್ದಾರೆ. ಈ ಸ್ಥಾನದ ಮೇಲೆ ಈಗಾಗಲೇ ಕಣ್ಣಿಟ್ಟಿರುವ ಜಯ್ ಶಾ ತಕ್ಷಣ ಆ ಹುದ್ದೆಗೆ ಅರ್ಜಿ ಸಲ್ಲಿಸಲಿದ್ದಾರೆ. ಆಡಳಿತಾತ್ಮಕವಾಗಿ ಜಯ್ ಶಾ ಅವರ ಕಾರ್ಯವೈಖರಿ ಬಗ್ಗೆ ಹೆಚ್ಚಿನ ರಾಜ್ಯ ಕ್ರಿಕೆಟ್ ಸಂಸ್ಥೆಗಳು ಮೆಚ್ಚುಗೆ ವ್ಯಕ್ತಪಡಿಸಿವೆ. ಹೀಗಾಗಿ ಚುನಾವಣೆಯಲ್ಲಿ ಅವರು ಬಹುಮತದಿಂದ ಗೆಲ್ಲಲಿದ್ದಾರೆ,”ಎಂದು ಹೇಳಲಾಗಿದೆ.
ಇದನ್ನೂ ಓದಿ | ರಾಜಕೀಯಕ್ಕೆ ಕಾಲಿಡ್ತಾರಾ ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿ?