Site icon Vistara News

James Anderson | ಕ್ರಿಕೆಟ್‌ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆ ಬರೆದ ಜೇಮ್ಸ್‌ ಆ್ಯಂಡರ್ಸನ್, ಏನದು?

James

ಮ್ಯಾಂಚೆಸ್ಟರ್:‌ ಇಂಗ್ಲೆಡ್‌ ಕ್ರಿಕೆಟ್‌ ತಂಡದ ವೇಗಿ ಜೇಮ್ಸ್‌ ಆ್ಯಂಡರ್ಸನ್ (James Anderson) ಅವರು ಕ್ರಿಕೆಟ್‌ ಇತಿಹಾಸದಲ್ಲಿಯೇ ಯಾವ ವೇಗಿಯೂ ಮಾಡದ ದಾಖಲೆ ಮಾಡಿದ್ದಾರೆ. ಮ್ಯಾಂಚೆಸ್ಟರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಎರಡನೇ ಟೆಸ್ಟ್‌ ಪಂದ್ಯದ ವೇಳೆ ಸೈಮನ್‌ ಹಾರ್ಮರ್‌ ಅವರ ವಿಕೆಟ್‌ ಪಡೆಯುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಮೂರೂ ಮಾದರಿಯಲ್ಲಿ ೯೫೦ ವಿಕೆಟ್‌ ಪಡೆದ ವಿಶ್ವದ ಏಕೈಕ ವೇಗಿ ಎನಿಸಿದರು.

ಇದುವರೆಗೆ ಆಸ್ಟ್ರೇಲಿಯಾದ ವೇಗಿ ಗ್ಲೆನ್‌ ಮೆಕ್‌ಗ್ರಾತ್‌ ಅವರು ೯೪೯ ವಿಕೆಟ್‌ ಪಡೆದಿದ್ದೇ ದಾಖಲೆಯಾಗಿತ್ತು. ಮೆಕ್‌ಗ್ರಾತ್‌ ಹೊರತಾಗಿ ಜಗತ್ತಿನ ಯಾವ ವೇಗಿಯೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇಷ್ಟು ವಿಕೆಟ್‌ ಪಡೆದಿರಲಿಲ್ಲ. ಈಗ ಮೆಕ್‌ಗ್ರಾತ್‌ ದಾಖಲೆಯನ್ನು ಆ್ಯಂಡರ್ಸನ್ ಮುರಿಯುವ ಜತೆಗೆ, ೯೫೦ ವಿಕೆಟ್‌ ಪಡೆದ ವಿಶ್ವದ ಮೊದಲ ವೇಗಿ ಎಂಬ ಖ್ಯಾತಿಗೂ ಭಾಜನರಾಗಿದ್ದಾರೆ. ಎರಡನೇ ಟೆಸ್ಟ್‌ನಲ್ಲಿ ಮೂರು ವಿಕೆಟ್‌ ಪಡೆಯುವ ಮೂಲಕ ಆ್ಯಂಡರ್ಸನ್ ಪಡೆದ ವಿಕೆಟ್‌ಗಳ ಸಂಖ್ಯೆ ೯೫೧ ಆಗಿದೆ.

ಆ್ಯಂಡರ್ಸನ್, ಟೆಸ್ಟ್‌ನಲ್ಲಿ ೬೬೪ ವಿಕೆಟ್‌, ಏಕದಿನದಲ್ಲಿ ೨೬೯ ಹಾಗೂ ಟಿ-೨೦ಯಲ್ಲಿ ೧೮ ವಿಕೆಟ್‌ ಪಡೆದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ೧,೩೪೭‌ ವಿಕೆಟ್‌ ಪಡೆದು ಅಗ್ರ ಬೌಲರ್‌ ಎನಿಸಿದ್ದಾರೆ. ನಂತರದ ಸ್ಥಾನದಲ್ಲಿ ಆಸ್ಟ್ರೇಲಿಯಾದ ಶೇನ್‌ ವಾರ್ನ್‌ (೧೦೦೧), ಭಾರತದ ಅನಿಲ್‌ ಕುಂಬ್ಳೆ (೯೫೬) ಇದ್ದಾರೆ. ಆ್ಯಂಡರ್ಸನ್ ಇನ್ನೂ ಆರು ವಿಕೆಟ್‌ ಪಡೆದರೆ ಕುಂಬ್ಳೆ ದಾಖಲೆ ಮುರಿಯಲಿದ್ದಾರೆ.

ಇದನ್ನೂ ಓದಿ | The Hundred | ಥ್ರೋ ಮಾಡುವ ಪಾಕ್‌ ಬೌಲರ್‌ಗೆ ಕಿಚಾಯಿಸಿದ ಸ್ಟೋಯ್ನಿಸ್‌

Exit mobile version