ರಾಜ್ಕೋಟ್: ಭಾರತ ಎದುರಿನ ಮೂರನೇ ಟೆಸ್ಟ್(James Anderson,India vs England 3rd Test) ಪಂದ್ಯದಲ್ಲಿ ಇಂಗ್ಲೆಂಡ್ನ ಹಿರಿಯ ವೇಗಿ ಜೇಮ್ಸ್ ಆಂಡರ್ಸನ್(James Anderson) ಐದು ವಿಕೆಟ್ ಪಡೆದರೆ ವಿಶ್ವ ದಾಖಲೆಯೊಂದನ್ನು ಬರೆಯಲಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 700 ವಿಕೆಟ್‌ಗಳ ಸರದಾರನಾಗಲಿದ್ದಾರೆ. ಜತೆಗೆ ಈ ಸಾಧನೆ ಮಾಡಿದ ವಿಶ್ವದ ಮೊದಲ ವೇಗದ ಬೌಲರ್ ಎನಿಸಿಕೊಳ್ಳಲಿದ್ದಾರೆ.
41 ವರ್ಷದ ಜೇಮ್ಸ್ ಆಂಡರ್ಸನ್ ಇದುವರೆಗೆ 184 ಟೆಸ್ಟ್ ಪಂದ್ಯಗಳಲ್ಲಿ 695* ವಿಕೆಟ್‌ಗಳನ್ನು ಪಡೆದಿದ್ದಾರೆ. ಇದೀಗ ಮೂರನೇ ಪಂದ್ಯದಲ್ಲಿ ಅವರು 5 ವಿಕೆಟ್ ಕಡೆವಿದರೆ ಟೆಸ್ಟ್ ಕ್ರಿಕೆಟ್‌ನಲ್ಲಿ 700 ವಿಕೆಟ್‌ಗಳ ಮೈಲುಗಲ್ಲು ತಲುಪಲಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ ಮೂರನೇ ಬೌಲರ್ ಆಗಲಿದ್ದಾರೆ. ಶ್ರೀಲಂಕಾದ ಮಾಜಿ ಆಟಗಾರ ಮುತ್ತಯ್ಯ ಮುರಳೀಧರನ್ ಮತ್ತು ಆಸ್ಟ್ರೇಲಿಯಾದ ಶೇನ್ ವಾರ್ನ್ ಈ ಸಾಧಕರ ಪಟ್ಟಿಯಲ್ಲಿ ಕ್ರಮವಾಗಿ ಮೊದಲೆರಡು ಸ್ಥಾನ ಪಡೆದಿದ್ದಾರೆ. ಪ್ರಸಕ್ತ ಕ್ರಿಕೆಟ್ ಆಡುತ್ತಿರುವ ಆಟಗಾರರ ಪೈಕಿ ಟೆಸ್ಟ್ನಲ್ಲಿ ಅತಿ ಹೆಚ್ಚು ವಿಕೆಟ್ ಕಿತ್ತ ದಾಖಲೆ ಕೂಡ ಜೇಮ್ಸ್ ಆಂಡರ್ಸನ್ ಹೆಸರಿನಲ್ಲಿದೆ. 512* ವಿಕೆಟ್ ಪಡೆದಿರುವ ಆಸ್ಟ್ರೇಲಿಯಾದ ಸ್ಪಿನ್ನರ್ ನಥಾನ್ ಲಿಯೋನ್ ದ್ವಿತೀಯ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಅಶ್ವಿನ್ಗೆ ಮೂರನೇ ಸ್ಥಾನ.
2002ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯವನ್ನಾಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಜೇಮ್ಸ್ ಆ್ಯಂಡರ್ಸನ್ ಅವರು ಇಂಗ್ಲೆಂಡ್ ಕಂಡ ಶ್ರೇಷ್ಠ ಬೌಲರ್ಗಳಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. 2003ರಲ್ಲಿ ಅವರು ಟೆಸ್ಟ್ ಕ್ರಿಕೆಟ್ಗೆ ಅಡಿ ಇರಿಸಿದ್ದರು. ಇದುವರೆಗೆ ಇಂಗ್ಲೆಂಡ್ ಪರ ಅವರು 184 ಟೆಸ್ಟ್ ಪಂದ್ಯ ಆಡಿ 695* ವಿಕೆಟ್ ಕಿತ್ತಿದ್ದಾರೆ. 32 ಬಾರಿ 5 ವಿಕೆಟ್ ಗೊಂಚಲು ಪಡೆದ ಸಾಧನೆ ಮಾಡಿದ್ದಾರೆ. ಮೂರು ಸಲ 10 ವಿಕೆಟ್ ಪಡೆದಿದ್ದಾರೆ. 194 ಏಕದಿನ ಪಂದ್ಯ ಆಡಿದ್ದರೂ ಕೂಡ ಆ್ಯಂಡರ್ಸನ್ ಯಶಸ್ಸು ಸಾಧಿಸಿದ್ದು ಟೆಸ್ಟ್ ಕ್ರಿಕೆಟ್‌ನಲ್ಲಿ.
ಇದನ್ನೂ ಓದಿ IND vs ENG: ಇಂಗ್ಲೆಂಡ್ ವಿರುದ್ಧದ ಮೂರು ಟೆಸ್ಟ್ಗೆ ಇಂದು ಭಾರತ ತಂಡ ಪ್ರಕಟ
ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಸಾಧಕರು
ಆಟಗಾರ | ದೇಶ | ವಿಕೆಟ್ |
ಮುತ್ತಯ್ಯ ಮುರಳೀಧರನ್ | ಶ್ರೀಲಂಕಾ | 800 |
ಶೇನ್ ವಾರ್ನ್ | ಆಸ್ಟ್ರೇಲಿಯಾ | 708 |
ಜೇಮ್ಸ್ ಆಂಡರ್ಸನ್ | ಇಂಗ್ಲೆಂಡ್ | 695* |
ಅನಿಲ್ ಕುಂಬ್ಳೆ | ಭಾರತ | 619 |
ಸ್ಟುವರ್ಟ್ ಬ್ರಾಡ್ | ಇಂಗ್ಲೆಂಡ್ | 604 |
ಗ್ಲೆನ್ ಮೆಕ್ಗ್ರಾತ್ | ಆಸ್ಟ್ರೇಲಿಯಾ | 563 |
ಕರ್ಟ್ನಿ ವಾಲ್ಷ್ | ವೆಸ್ಟ್ ಇಂಡೀಸ್ | 519 |
ನಾಥನ್ ಲಿಯಾನ್ | ಆಸ್ಟ್ರೇಲಿಯಾ | 512* |
ರವಿಚಂದ್ರನ್ ಅಶ್ವಿನ್ | ಭಾರತ | 499* |
ಡೇಲ್ ಸ್ಟೈನ್ | ದಕ್ಷಿಣ ಆಫ್ರಿಕಾ | 439 |
ದಾಖಲೆಯ ಸನಿಹ ಆರ್.ಅಶ್ವಿನ್
ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಅನುಭವಿ ಹಾಗೂ ಹಿರಿಯ ಸ್ಪಿನ್ನರ್ ಆರ್. ಅಶ್ವಿನ್(Ravichandran Ashwin) ಅವರು ಕೇವಲ ಒಂದು ವಿಕೆಟ್ ಕಿತ್ತರೆ 500 ಟೆಸ್ಟ್ ವಿಕೆಟ್ ಕಿತ್ತ ಸಾಧಕರಾಗಲಿದ್ದಾರೆ. ಈ ಸಾಧನೆ ಮಾಡಿದ ಈ ಸಾಧನೆ ಮಾಡಿದ 2ನೇ ಭಾರತೀಯ ಹಾಗೂ ವಿಶ್ವದ 9ನೇ ಬೌಲರ್ ಎಂಬ ಖ್ಯಾತಿಗೆ ಪಾತ್ರರಾಗಲಿದ್ದಾರೆ.
37 ವರ್ಷದ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಇದುವರೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಪರ 97 ಟೆಸ್ಟ್ ಪಂದ್ಯಗಳನ್ನು ಆಡಿ 499 ವಿಕೆಟ್‌ಗಳನ್ನು ಉರುಳಿಸಿದ್ದಾರೆ. 34 ಬಾರಿ ಇನಿಂಗ್ಸ್ ಒಂದರಲ್ಲಿ 5 ವಿಕೆಟ್ ಕಿತ್ತ ಸಾಧನೆ ಮಾಡಿದ್ದಾರೆ. ದ್ವಿತೀಯ ಟೆಸ್ಟ್ ಪಂದ್ಯದಲ್ಲಿಯೇ ಅಶ್ವಿನ್ಗೆ 500 ವಿಕೆಟ್ ಸಾಧನೆ ಮಾಡಬಹುದಿತ್ತು. ಆದರೆ ಅವರು ಮೊದಲ ಇನಿಂಗ್ಸ್ನಲ್ಲಿ ವಿಕೆಟ್ ಕೀಳುವಲ್ಲಿ ವಿಫಲರಾಗಿದ್ದರು. ದ್ವಿತೀಯ ಇನಿಂಗ್ಸ್ನಲ್ಲಿ 3 ವಿಕೆಟ್ ಕಡೆವಿದ್ದರು.