ರಾಜ್ಕೋಟ್: ಭಾರತ ಎದುರಿನ ಮೂರನೇ ಟೆಸ್ಟ್(James Anderson,India vs England 3rd Test) ಪಂದ್ಯದಲ್ಲಿ ಇಂಗ್ಲೆಂಡ್ನ ಹಿರಿಯ ವೇಗಿ ಜೇಮ್ಸ್ ಆಂಡರ್ಸನ್(James Anderson) ನೂತನ ದಾಖಲೆಯೊಂದನ್ನು ಬರೆಯುವ ಸನಿಹದಲ್ಲಿದ್ದಾರೆ. ಈ ಪಂದ್ಯದಲ್ಲಿ ಐದು ವಿಕೆಟ್ ಪಡೆದರೆ ವಿಶ್ವ ದಾಖಲೆಯೊಂದನ್ನು ಬರೆಯಲಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 700 ವಿಕೆಟ್‌ಗಳ ಸರದಾರನಾಗಲಿದ್ದಾರೆ. ಜತೆಗೆ ಈ ಸಾಧನೆ ಮಾಡಿದ ವಿಶ್ವದ ಮೊದಲ ವೇಗದ ಬೌಲರ್ ಎನಿಸಿಕೊಳ್ಳಲಿದ್ದಾರೆ.
ವಯಸ್ಸು ಕೇವಲ ನಂಬರ್ ಮಾತ್ರ
41 ವರ್ಷದ ಜೇಮ್ಸ್ ಆಂಡರ್ಸನ್ ಇದುವರೆಗೆ 184 ಟೆಸ್ಟ್ ಪಂದ್ಯಗಳಲ್ಲಿ 695* ವಿಕೆಟ್‌ಗಳನ್ನು ಪಡೆದಿದ್ದಾರೆ. ಇದೀಗ ಮೂರನೇ ಪಂದ್ಯದಲ್ಲಿ ಅವರು 5 ವಿಕೆಟ್ ಕಡೆವಿದರೆ ಟೆಸ್ಟ್ ಕ್ರಿಕೆಟ್‌ನಲ್ಲಿ 700 ವಿಕೆಟ್‌ಗಳ ಮೈಲುಗಲ್ಲು ತಲುಪಲಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ ಮೂರನೇ ಬೌಲರ್ ಆಗಲಿದ್ದಾರೆ. ಶ್ರೀಲಂಕಾದ ಮಾಜಿ ಆಟಗಾರ ಮುತ್ತಯ್ಯ ಮುರಳೀಧರನ್ ಮತ್ತು ಆಸ್ಟ್ರೇಲಿಯಾದ ಶೇನ್ ವಾರ್ನ್ ಈ ಸಾಧಕರ ಪಟ್ಟಿಯಲ್ಲಿ ಕ್ರಮವಾಗಿ ಮೊದಲೆರಡು ಸ್ಥಾನ ಪಡೆದಿದ್ದಾರೆ. ಪ್ರಸಕ್ತ ಕ್ರಿಕೆಟ್ ಆಡುತ್ತಿರುವ ಆಟಗಾರರ ಪೈಕಿ ಟೆಸ್ಟ್ನಲ್ಲಿ ಅತಿ ಹೆಚ್ಚು ವಿಕೆಟ್ ಕಿತ್ತ ದಾಖಲೆ ಕೂಡ ಜೇಮ್ಸ್ ಆಂಡರ್ಸನ್ ಹೆಸರಿನಲ್ಲಿದೆ. 512* ವಿಕೆಟ್ ಪಡೆದಿರುವ ಆಸ್ಟ್ರೇಲಿಯಾದ ಸ್ಪಿನ್ನರ್ ನಥಾನ್ ಲಿಯೋನ್ ದ್ವಿತೀಯ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಅಶ್ವಿನ್ಗೆ ಮೂರನೇ ಸ್ಥಾನ.
ಇದನ್ನೂ ಓದಿ IND vs ENG: ರಾಜ್ಕೋಟ್ನ ಪಿಚ್ ರಿಪೋರ್ಟ್, ಹವಾಮಾನ ವರದಿ ಹೇಗಿದೆ?
41-year-old James Anderson in the practice session at Rajkot. pic.twitter.com/uCFj1xPCsY
— Johns. (@CricCrazyJohns) February 13, 2024
2002ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯವನ್ನಾಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಜೇಮ್ಸ್ ಆ್ಯಂಡರ್ಸನ್ ಅವರು ಇಂಗ್ಲೆಂಡ್ ಕಂಡ ಶ್ರೇಷ್ಠ ಬೌಲರ್ಗಳಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. 2003ರಲ್ಲಿ ಅವರು ಟೆಸ್ಟ್ ಕ್ರಿಕೆಟ್ಗೆ ಅಡಿ ಇರಿಸಿದ್ದರು. ಇದುವರೆಗೆ ಇಂಗ್ಲೆಂಡ್ ಪರ ಅವರು 184 ಟೆಸ್ಟ್ ಪಂದ್ಯ ಆಡಿ 695* ವಿಕೆಟ್ ಕಿತ್ತಿದ್ದಾರೆ. 32 ಬಾರಿ 5 ವಿಕೆಟ್ ಗೊಂಚಲು ಪಡೆದ ಸಾಧನೆ ಮಾಡಿದ್ದಾರೆ. ಮೂರು ಸಲ 10 ವಿಕೆಟ್ ಪಡೆದಿದ್ದಾರೆ. 194 ಏಕದಿನ ಪಂದ್ಯ ಆಡಿದ್ದರೂ ಕೂಡ ಆ್ಯಂಡರ್ಸನ್ ಯಶಸ್ಸು ಸಾಧಿಸಿದ್ದು ಟೆಸ್ಟ್ ಕ್ರಿಕೆಟ್‌ನಲ್ಲಿ.
ವಾರ್ನ್ ದಾಖಲೆ ಮೇಲೆ ಕಣ್ಣು
ಆಸ್ಟ್ರೇಲಿಯಾದ ದಿವಂಗತ ಕ್ರಿಕೆಟಿಗ ಶೇನ್ ವಾರ್ನ್ ಅವರು ಸದ್ಯ 708 ಟೆಸ್ಟ್ ವಿಕೆಟ್ ಪಡೆದು ದ್ವಿತೀಯ ಸ್ಥಾನದಲ್ಲಿದ್ದಾರೆ. ಜೇಮ್ಸ್ ಆ್ಯಂಡರ್ಸನ್ ಅವರು ಭಾರತ ವಿರುದ್ಧ ಉಳಿದಿರುವ ಮೂರು ಟೆಸ್ಟ್ ಪಂದ್ಯಗಳಲ್ಲಿ 14 ವಿಕೆಟ್ ಕಿತ್ತರೆ ವಾರ್ನ್ ಅವರ ದಾಖಲೆ ಪತನಗೊಳ್ಳಲಿದೆ. ಆ್ಯಂಡರ್ಸನ್ ದ್ವಿತೀಯ ಸ್ಥಾನ ಅಲಂಕರಿಸಲಿದ್ದಾರೆ. ಆದರೆ 800 ವಿಕೆಟ್ ಕಿತ್ತು ಅಗ್ರಸ್ಥಾನ ಪಡೆದಿರುವ ಮುತ್ತಯ್ಯ ಮುರಳೀಧರನ್ ಅವರ ಸಾರ್ವಕಾಲಿಕ ದಾಖಲೆಯನ್ನು ಮುರಿಯುವುದು ಕಷ್ಟ ಸಾಧ್ಯ. ಏಕೆಂದರೆ ಈಗ ಟೆಸ್ಟ್ ಪಂದ್ಯಗಳನ್ನು ಆಡುವ ಆಟಗಾರರೇ ಕಡಿಮೆ.