ಲಂಡನ್: ವಿದಾಯದ ಸನಿಹದಲ್ಲಿರುವ ಇಂಗ್ಲೆಂಡ್ ತಂಡದ ಹಿರಿಯ ವೇಗಿ ಜೇಮ್ಸ್ ಆಂಡರ್ಸನ್(James Anderson) ಅವರು ಪ್ರಸಕ್ತ ಸಾಗುತ್ತಿರುವ ಕೌಂಟಿ ಕ್ರಿಕೆಟ್ ಟೂರ್ನಿಯಲ್ಲಿ ತಮ್ಮ ಕರಾರುವಾಕ್ ಬೌಲಿಂಗ್ ದಾಳಿಯ ಮೂಲಕ 7 ವಿಕೆಟ್ ಕಿತ್ತು ಮಿಂಚಿದ್ದಾರೆ. 41ನೇ ವಯಸ್ಸಿನಲ್ಲಿಯೂ ಅವರ ಈ ಸಾಧನೆ ಯುವ ಆಟಗಾರರನ್ನು ಕೂಡ ನಾಚಿಸುವಂತೆ ಮಾಡಿದೆ.
ಈಗಾಗಲೇ ಕ್ರಿಕೆಟ್‌ಗೆ ವಿದಾಯ ಘೋಷಿಸಿರುವ ಜೇಮ್ಸ್ ಆಂಡರ್ಸನ್, ಇದೇ ಜುಲೈನಲ್ಲಿ ನಡೆಯುವ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯ ಮೊದಲನೇ ಪಂದ್ಯ ಆಡುವ ಮೂಲಕ 20 ವರ್ಷಗಳ ತಮ್ಮ ಸುದೀರ್ಘ ಕ್ರಿಕೆಟ್ ಬದುಕಿಗೆ ತೆರೆ ಎಳೆಯಲಿದ್ದಾರೆ. ಸಾರ್ವಕಾಲಿಕ ಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ 41 ವರ್ಷದ ಆಂಡರ್ಸನ್, ಇಂಗ್ಲೆಂಡ್ ಪರ ಅತಿ ಹೆಚ್ಚು ವಿಕೆಟ್ ಪಡೆದುಕೊಂಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 700ಕ್ಕೂ ಅಧಿಕ ವಿಕೆಟ್ ಪಡೆದ ಮೂವರು ಬೌಲರ್‌ಗಳ ಪೈಕಿ ಆಂಡರ್ಸನ್ ಕೂಡ ಒಬ್ಬರು. ವೇಗಿಗಳ ಪೈಕಿ ಮೊದಲಿಗ.
3 ತಿಂಗಳ ಹಿಂದೆ ಆ್ಯಂಡರ್ಸನ್ ಅವರು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ತಮ್ಮ ನಿವೃತ್ತಿಯನ್ನು ಘೋಷಿಸಿದ್ದರು. “ಎಲ್ಲರಿಗೂ ನಮಸ್ಕಾರ, ಈ ಬೇಸಿಗೆಯಲ್ಲಿ ಲಾರ್ಡ್ಸ್‌ನಲ್ಲಿ ನಡೆಯುವ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ, ನನ್ನ ಕೊನೆಯ ಪಂದ್ಯವಾಗಿರಲಿದೆ. ಬಾಲ್ಯದಿಂದ ಇಷ್ಟಪಟ್ಟಿದ ಆಟವನ್ನು ಆಡಲು, ನನ್ನ ದೇಶವನ್ನು ಪ್ರತಿನಿಧಿಸಿದ 20 ಅದ್ಭುತ ವರ್ಷಗಳಿವು. ಇಂಗ್ಲೆಂಡ್ ತಂಡಕ್ಕಾಗಿ ಆಡುವುದನ್ನು ನಾನು ಮಿಸ್ ಮಾಡಿಕೊಳ್ಳುತ್ತೇನೆ’ ಎಂದು ಬರೆದುಕೊಂಡಿದ್ದರು. ಜುಲೈ 10ರಿಂದ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ.
ಇದನ್ನೂ ಓದಿ James Anderson : ಕೋಚ್ ಒತ್ತಡಕ್ಕೆ ಮಣಿದು ನಿವೃತ್ತಿ ಘೋಷಿಸಿದ ಇಂಗ್ಲೆಂಡ್ ತಂಡ ವೇಗದ ಬೌಲರ್
2003ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಆ್ಯಂಡರ್ಸನ್, ಈವರೆಗೂ 187 ಪಂದ್ಯಗಳಲ್ಲಿ 700 ವಿಕೆಟ್ ಗಳಿಸಿದ್ದಾರೆ. ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಹಾಗೂ ಆಸ್ಟ್ರೇಲಿಯಾದ ಶೇನ್ ವಾರ್ನ್ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಸ್ಥಾನದಲ್ಲಿ ಆ್ಯಂಡರ್‌ಸನ್ ಇದ್ದಾರೆ. 194 ಏಕದಿನ ಪಂದ್ಯಗಳನ್ನು ಆಡಿರುವ ಅವರು, 269 ವಿಕೆಟ್‌ಗಳನ್ನು ಪಡೆದಿದ್ದಾರೆ.
ಆಸ್ಟ್ರೇಲಿಯಾದ ದಿವಂಗತ ಕ್ರಿಕೆಟಿಗ ಶೇನ್ ವಾರ್ನ್ ಅವರು 708 ಟೆಸ್ಟ್ ವಿಕೆಟ್ ಕಿತ್ತು ದ್ವಿತೀಯ ಸ್ಥಾನಿಯಾಗಿದ್ದಾರೆ. ಆ್ಯಂಡರ್ಸನ್ಗೆ ವಾರ್ನ್ ಅವರ ಟೆಸ್ಟ್ ವಿಕೆಟ್ ದಾಖಲೆ ಮುರಿಯುವು ಕಷ್ಟವಾಗದು. ಏಕೆಂದರೆ ಅವರು ಇನ್ನೊಂದು ವರ್ಷ ಕ್ರಿಕೆಟ್ ಆಡಿದರೂ ಈ ದಾಖಲೆ ಮುರಿಯಬಹುದು. ಈ ದಾಖಲೆಯನ್ನು ಮುರಿಯಲು ಅವರಿಗೆ ಬೇಕಿರುವುದು 8 ವಿಕೆಟ್. ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ಈ ಸಾಧನೆ ಮಾಡುವ ಅವಕಾಶ ಅವರಿಗಿದೆ.