ಟೋಕಿಯೊ: ಕಳೆದ ವಾರವಷ್ಟೇ ಕೊರಿಯಾ ಓಪನ್ ಗೆದ್ದು ಚಾಂಪಿಯನ್ ಆಗಿದ್ದ ಭಾರತದ ಭರವಸೆಯ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ(Chirag Shetty) ಜಪಾನ್ ಓಪನ್ ಟೂರ್ನಿಯ(Japan Open 2023) ಪುರುಷರ ಡಬಲ್ಸ್ನಲ್ಲಿ ಸೋಲು ಕಂಡು ನಿರಾಸೆ ಮೂಡಿಸಿದ್ದಾರೆ. ಆದರೆ ಲಕ್ಷ್ಯ ಸೇನ್(Lakshya Sen) ಅವರು ಗೆದ್ದು ಸೆಮಿಫೈನಲ್ ಪ್ರವೇಶ ಪಡೆದಿದ್ದಾರೆ.
ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಲಕ್ಷ್ಯ ಸೇನ್ ಅವರು ಸ್ಥಳೀಯ ಆಟಗಾರ ಕೋಕಿ ವಟನಾಬೆ ವಿರುದ್ಧ 21-15, 21-19 ನೇರ ಗೇಮ್‌ಗಳಿಂದ ಗೆದ್ದು ಸೆಮಿಫೈನಲ್ ಟಿಕೆಟ್ ಪಡೆದರು. ಆರಂಭದಿಂದಲೇ ಬಿರುಸಿನ ಆಡವಾಡಿದ ಸೇನ್ ಅಧಿಕಾರಯುತ ಗೆಲುವು ಸಾಧಿಸಿದರು.
ಕೆನಡಾ ಓಪನ್ ಸೂಪರ್ 500 ಪಂದ್ಯಾವಳಿಯನ್ನು ಗೆದ್ದು ವಿಶ್ರಾಂತಿಯಲ್ಲಿದ್ದ ಸೇನ್ ಈ ಟೂರ್ನಿಯಲ್ಲಿ ಶ್ರೇಷ್ಠ ಪ್ರದರ್ಶನ ತೋರಿದ್ದಾರೆ. ಸದ್ಯ ಸೆಮಿ ಹರ್ಡಲ್ಸ್ ದಾಟಿದರೆ ಪದಕವೊಂದನ್ನು ಖಾತ್ರಿಪಡಿಸಲಿದ್ದಾರೆ. ಸೆಮಿಫೈನಲ್ನಲ್ಲಿ ಸೇನ್ ಅವರು ಇಂಡೋನೇಶ್ಯದ ಬಲಿಷ್ಠ ಆಟಗಾರ ಜೊನಾಥನ್ ಕ್ರಿಸ್ಟಿ ಅವರ ಸವಾಲು ಎದುರಾಗಿದೆ.
LAKSHYA ENTERS SEMIS 🏸
— SPORTS ARENA🇮🇳 (@SportsArena1234) July 28, 2023
Lakshya Sen defeated 🇯🇵Koki Watanabe in straight games 21-15,21-19 in QF to book a place at #JapanOpen2023 SF !
Lakshya came back brilliantly in 2nd game after trailing 7-14 !
SF vs winner of 🇮🇩 Christie vs 🇹🇭 Kunlavut pic.twitter.com/cblytgZoFQ
ಸೋಲು ಕಂಡ ಚಿರಾಗ್-ಸಾತ್ವಿಕ್
ವರ್ಷದ ಮೂರು ಬಿಡಬ್ಲ್ಯುಎಫ್ ಪ್ರಶಸ್ತಿ ಗೆದ್ದು ನಾಲ್ಕನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದ ಭಾರತದ ಸ್ಟಾರ್ ಪುರುಷ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಕ್ವಾರ್ಟರ್ ಫೈನಲ್ನಲ್ಲಿ ಒಲಿಂಪಿಕ್ ವಿಜೇತರಾದ ಚೈನೀಸ್ ತೈಪೆನ ಲೀ ಯಾಂಗ್ ಮತ್ತು ವಾಂಗ್ ಚಿ-ಲಾನ್ ವಿರುದ್ಧ 15-21, 25-23, 16-21 ಅಂತರದಿಂದ ಪರಾಭವಗೊಂಡರು. ದ್ವಿತೀಯ ಗೇಮ್ನಲ್ಲಿ ಪ್ರಬಲ ಪೈಪೋಟಿ ನೀಡಿ ಗೆಲುವು ದಾಖಲಿಸಿದ ಭಾರತೀಯ ಜೋಡಿ ಅಂತಿಮ ಗೇಮ್ನಲ್ಲಿ ನೀರಸ ಪ್ರದರ್ಶನ ತೋರುವ ಮೂಲಕ ಶರಣಾದರು. ಇದಕ್ಕೂ ಮುನ್ನ ನಡೆದ ಪಂದ್ಯದಲ್ಲಿ ಚಿರಾಗ್-ಸಾತ್ವಿಕ್ ಜೋಡಿ ನೆದರ್ಲೆಂಡ್ಸ್‌ನ ಲಾಸ್ಸೆ ಮೊಲೆಡೆ ಮತ್ತು ಜೆಪ್ಪೆ ಬೇ ಅವರನ್ನು 21-17, 21-11 ಗೇಮ್‌ಗಳಿಂದ ಸೋಲಿಸಿ ಕ್ವಾರ್ಟರ್‌ಫೈನಲ್ ತಲುಪಿದ್ದರು.