ಮಿಯಾಮಿ: ನಾಲ್ಕು ಬಾರಿಯ ಗ್ರ್ಯಾನ್ ಸ್ಲಾಮ್ ವಿಜೇತೆ, ವಿಶ್ವದ ಮಾಜಿ ನಂ.1 ಟೆನಿಸ್ ಆಟಗಾರ್ತಿ ನವೋಮಿ ಒಸಾಕಾ(Naomi Osaka) ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಅವರು ಆರೋಗ್ಯ ಕಾಳಜಿಯಿಂದ 2024 ರವರೆಗೆ ಟೆನಿಸ್‌ನಿಂದ ವಿರಾಮ ತೆಗೆದುಕೊಳ್ಳುವುದಾಗಿ ಘೋಷಿಸಿದ್ದಾರೆ.
“ಭವಿಷ್ಯದಲ್ಲಿ ನಾನು ತುಂಬಾ ಆಶಾವಾದಿಯಾಗಿದ್ದೇನೆ. ನಾನು ಆಡುವ ಆಟವನ್ನು ನೋಡಿ ನನ್ನ ಮಗು, ಇದು ನನ್ನ ಅಮ್ಮಾ ಎಂದು ಇತರರಿಗೆ ಸಂತೋಷವಾಗಿ ಹೇಳುವ ಕಾಲ ಕೂಡಿಬಂದಿದೆ” ಎಂದು ಗರ್ಭಧಾರಣೆಯ ಸ್ಕ್ಯಾನ್ ಚಿತ್ರದೊಂದಿಗೆ ಟ್ವೀಟ್ ಮೂಲಕ ಒಸಾಕಾ ತಾವು ಗರ್ಭಿಣಿಯಾಗಿರುವ ವಿಚಾರವನ್ನು ತಿಳಿಸಿದ್ದಾರೆ.
“2023 ನನಗೆ ಸಾಕಷ್ಟು ಪಾಠಗಳನ್ನು ಕಲಿಸಿದೆ. 2024ರಲ್ಲಿ ಆಸ್ಟ್ರೇಲಿಯನ್ ಓಪನ್‌ನೊಂದಿಗೆ ಮತ್ತೆ ಟೆನಿಸ್ ಕೋರ್ಟ್ಗೆ ಮರಳಲಿದ್ದೇನೆ. ನಿಮ್ಮೆಲ್ಲರ ಪ್ರೀತಿ ಹೀಗೆ ಎಂದಿಗೂ ನನ್ನ ಮೇಲೆ ಇರಲಿ” ಎಂದು ಒಸಾಕಾ ಹೇಳಿದ್ದಾರೆ.
ಒಸಾಕಾ ಇನ್ನೂ ಮದುವೆಯಾಗಿಲ್ಲ. ಜಪಾನ್ ಮೂಲದ ಅಮೆರಿಕ ಗಾಯಕ ಕೊರಾಡಿ ಅವರ ಜತೆ 2019ರಿಂದ ಸಹಬಾಳ್ವೆಯಲ್ಲಿದ್ದಾರೆ. ಕಳೆದ ಸೆಪ್ಟೆಂಬರ್‌ನಿಂದ ಯಾವುದೇ ಟೂರ್ನಿಗಳಲ್ಲಿ ಒಸಾಕಾ ಆಡಿರಲಿಲ್ಲ. ಅಲ್ಲದೇ ವರ್ಷಾರಂಭದ ಮೊದಲ ಗ್ರ್ಯಾನ್ ಸ್ಲಾಮ್ ಆಸ್ಟ್ರೇಲಿಯನ್ ಓಪನ್ ಟೂರ್ನಿಗೂ ಗೈರಾಗುತ್ತಿರುವುದಾಗಿ ತಿಳಿಸಿದ್ದರು. ಇದೀಗ ಒಸಾಕಾ ಗೈರಾಗುತ್ತಿರುವ ಗೊಂದಲಕ್ಕೆ ತೆರೆ ಬಿದ್ದಿದೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಒಸಾಕಾಗೆ ಅನೇಕ ಟೆನಿಸ್ ಪಟುಗಳು ಶುಭಹಾರೈಸಿದ್ದಾರೆ.
ಇದನ್ನೂ ಓದಿ | Wimbeldon : ಟೂರ್ನಿಯಿಂದ ಹೊರ ನಡೆದ ನಡಾಲ್