Site icon Vistara News

ICC ODI Ranking : ಬುಮ್ರಾ ವರ್ಲ್ಡ್‌ ನಂಬರ್‌ 1, ಆರು ವಿಕೆಟ್‌ ಪಡೆದ ಮರುದಿನವೇ ಸಾಧನೆ

ICC ODI Ranking

ದುಬೈ: ಮಂಗಳವಾರ ನಡೆದ ಆತಿಥೇಯ ಇಂಗ್ಲೆಂಡ್‌ ವಿರುದ್ಧದ ಏಕದಿನ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ೧೯ ರನ್‌ ವೆಚ್ಚದಲ್ಲಿ ೬ ವಿಕೆಟ್‌ ಕಬಳಿಸಿ ಸಾಧನೆ ಮಾಡಿದ್ದ ಭಾರತ ತಂಡದ ವೇಗದ ಬೌಲರ್‌ ಜಸ್‌ಪ್ರಿತ್‌ ಬುಮ್ರಾ ಮರು ದಿನವೇ ವರ್ಲ್ಡ್‌ ನಂಬರ್‌ ಒನ್‌ ಬೌಲರ್‌ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಐಸಿಸಿ ಏಕದಿನ ಬೌಲರ್‌ಗಳ Ranking ಪಟ್ಟಿಯನ್ನು ಬುಧವಾರ ಐಸಿಸಿ ಬಿಡುಗಡೆ ಮಾಡಿದ್ದು, ಅದರಲ್ಲಿ ಬುಮ್ರಾ ಮೊದಲ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ. ಒಟ್ಟಾರೆ ೭೧೮ ಅಂಕಗಳನ್ನು ಪಡೆದಿರುವ ಜಸ್‌ಪ್ರಿತ್‌ ಬುಮ್ರಾ, ೭೧೨ ಅಂಕಗಳನ್ನು ಗಳಿಸಿಕೊಂಡಿರುವ ನ್ಯೂಜಿಲೆಂಡ್‌ನ ವೇಗಿ ಟ್ರೆಂಟ್‌ ಬೌಲ್ಟ್‌ ಅವರನ್ನು ಹಿಂದಿಕ್ಕಿದ್ದಾರೆ. ಪಾಕಿಸ್ತಾನದ ಶಹೀನ್‌ ಅಫ್ರಿದಿ ಕೂಡ ಒಂದು ಸ್ಥಾನ ಕಳೆದುಕೊಂಡಿದ್ದು, ೬೮೧ ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಜೋಶ್‌ ಹೇಜಲ್‌ವುಡ್‌ ೬೭೯ ಅಂಕ ಪಡೆದಿದ್ದು, ಒಂದು ಸ್ಥಾನ ಬಡ್ತಿ ಪಡೆದು ೪ ನೇ ಸ್ಥಾನಕ್ಕೆ ಏರಿದ್ದಾರೆ. ಅಫಘಾನಿಸ್ತಾನದ ಮುಜೀಬ್‌ ಉರ್‌ ರಹಮಾನ್‌ ಐದನೇ ಸ್ಥಾನದಲ್ಲಿದ್ದಾರೆ.

ಗೆಲುವು ಬುಮ್ರಾ ಕೊಡುಗೆ

ಇಂಗ್ಲೆಂಡ್‌ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತ ತಂಡ ಜಯ ಸಾಧಿಸಲು ಜಸ್‌ಪ್ರಿತ್‌ ಬುಮ್ರಾ ಅವರ ಬೌಲಿಂಗ್‌ ಸಾಧನೆಯೇ ಕಾರಣ ಎಂದು ಹಿರಿಯ ಕ್ರಿಕೆಟಿಗರನೇಕರು ಅಭಿಪ್ರಾಯಪಡುತ್ತಿದ್ದಾರೆ. ಜೇಸನ್‌ ರಾಯ್‌, ಜೋ ರೂಟ್‌, ಲಿಯಾಮ್‌ ಲಿವಿಂಗ್‌ಸ್ಟನ್‌ ಸೇರಿ ಮೂವರನ್ನು ಶೂನ್ಯಕ್ಕೆ ಔಟ್‌ ಮಾಡಿದ್ದ ಬುಮ್ರಾ, ಡೇವಿಡ್‌ ವಿಲ್ಲಿ ಹಾಗೂ ಜಾನಿ ಬೈರ್‌ಸ್ಟೋವ್‌ ಅವರಿಗೂ ಪೆವಿಲಿಯನ್‌ ದಾರಿ ತೋರಿಸಿದ್ದರು. ಈ ಮೂಲಕ ಪ್ರಮುಖ ಬ್ಯಾಟರ್‌ಗಳು ಬೇಗ ಗಂಟುಮೂಟೆ ಕಟ್ಟುವಂತೆ ಮಾಡಿದ ಅವರು ಇಂಗ್ಲೆಂಡ್‌ ತಂಡಕ್ಕೆ ರನ್‌ ಗಳಿಸಲು ಅವಕಾಶವೇ ಕೊಟ್ಟಿರಲಿಲ್ಲ. ಹೀಗಾಗಿ ಭಾರತ ತಂಡದ ಅತಿ ವಿಶ್ವಾಸದಿಂದ ಆಡಿ ಗೆಲುವು ಸಾಧಿಸಿತು.

ಪಂದ್ಯದ ಬಳಿಕ ಮಾತನಾಡಿದ್ದ ಬುಮ್ರಾ, ಚೆಂಡು ಆರಂಭದಲ್ಲೇ ಸ್ವಿಂಗ್‌ ಆಗುತ್ತಿತ್ತು. ಹೀಗಾಗಿ ಪರಿಸ್ಥಿತಿಯನ್ನು ಚೆನ್ನಾಗಿ ಬಳಸಿಕೊಂಡು ಬೌಲಿಂಗ್‌ ಮಾಡಿದೆ. ಎಲ್ಲವೂ ಪರಿಣಾಮಕಾರಿಯಾಯಿತು,ʼʼ ಎಂದು ಹೇಳಿದ್ದಾರೆ.

ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಸರಣಿಯ ಎರಡನೇ ಪಂದ್ಯ ಗುರುವಾರ ನಡೆಯಲಿದ್ದು, ಭಾರತ ಬಳಗ ಗೆಲುವಿನ ನಿರೀಕ್ಷೆಯಲ್ಲಿದೆ.

ಇದನ್ನೂ ಓದಿ : IND vs ENG ODI | ಬುಮ್ರಾ ಬೆಂಕಿ, ಭಾರತಕ್ಕೆ ಮೊದಲ ಪಂದ್ಯದಲ್ಲಿ 10 ವಿಕೆಟ್‌ಗಳ ಭರ್ಜರಿ ಜಯ

Exit mobile version