ಬೆಂಗಳೂರು: ಭಾರತದ ವೇಗದ (Team India) ಬೌಲರ್ ಜಸ್ಪ್ರೀತ್ ಬುಮ್ರಾ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳುವ ಹಾದಿಯಲ್ಲಿ ಅದ್ಭುತ ಪ್ರಗತಿಯನ್ನು ಸಾಧಿಸುತ್ತಿದ್ದಾರೆ. ದಿನದಿಂದ ದಿನಕ್ಕೆ ಅವರು ಬೆನ್ನು ನೋಡಿನ ಸಮಸ್ಯೆಯಿಂದ ಹೊರಕ್ಕೆ ಬಂದಿರುವ ಮಾಹಿತಿ ಲಭಿಸುತ್ತಿದೆ. ಅವರು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಸತತವಾಗಿ ಬೌಲಿಂಗ್ ಮಾಡಲು ಆರಂಭಿಸಿದ್ದಾರೆ. ಮಾಹಿತಿ ಪ್ರಕಾರ ಅವರು ದಿನಕ್ಕೆ ಯಾವುದೇ ಸಮಸ್ಯೆ ಇಲ್ಲದೆ ಏಳು ಓವರ್ಗಳನ್ನು ಎಸೆಯುತ್ತಿದ್ದಾರೆ ಎಂದು ವರದಿಗಳು ಹೇಳಿವೆ.
ಜೂನ್ 27ರಂದು ಐಸಿಸಿ 2023ರ ಏಕ ದಿನ ವಿಶ್ವಕಪ್ (World Cup 2023) ವೇಳಾಪಟ್ಟಿಯನ್ನು ಅನಾವರಣಗೊಳಿಸಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ತಂಡದ ಅಭಿಮಾನಿಗಳಿಗೆ ಗುಡ್ ನ್ಯೂಸ್ ಎನಿಸಿಕೊಂಡಿದೆ. ಬುಮ್ರಾ ಮಾರ್ಚ್ನಲ್ಲಿ ನ್ಯೂಜಿಲೆಂಡ್ನಲ್ಲಿ ಬೆನ್ನುನೋವಿನಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅಂದಿನಿಂದ ಅವರು ಚೇತರಿಕೆಯ ಹಾದಿಯಲ್ಲಿದ್ದಾರೆ. ಬುಮ್ರಾ ಕೊನೆಯ ಬಾರಿಗೆ 2022ರ ಸೆಪ್ಟೆಂಬರ್ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ತವರಿನ ಟಿ 20 ಪಂದ್ಯಗಳಲ್ಲಿ ಆಡಿದ್ದರು.
ಜಸ್ಪ್ರಿತ್ ಬುಮ್ರಾ ಅವರಿಗೆ ಎನ್ಸಿಎನಲ್ಲಿ ಪುನಶ್ಚೇತನದ ಹಾದಿಯನ್ನು ಕಂಡುಕೊಳ್ಳುತ್ತಿದ್ದು,ಆಗಸ್ಟ್ನಲ್ಲಿ ಐರ್ಲೆಂಡ್ನಲ್ಲಿ ನಡೆಯಲಿರುವ ಟಿ 20 ಐ ಸರಣಿಯಲ್ಲಿ ಆಡುವ ಭರವಸೆಯ ವ್ಯಕ್ತಪಡಿಸಲಾಗಿದೆ. ಆದಾಗ್ಯೂ ಅವರು ಸದ್ಯಕ್ಕೆ ಭಾರತ ತಂಡಕ್ಕೆ ಮರಳುವುದಿಲ್ಲ ಎಂದು ಹೇಳಲಾಗುತ್ತಿದೆ.
ಈ ರೀತಿಯ ಗಾಯಕ್ಕೆ, ನಿರಂತರ ಮೇಲ್ವಿಚಾರಣೆ ಅಗತ್ಯ. ನಿರ್ದಿಷ್ಟ ಗಡುವು ನಿಗದಿಪಡಿಸುವುದು ಬುದ್ಧಿವಂತಿಕೆಯಲ್ಲ. ಬುಮ್ರಾ ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಅವರು ಎನ್ಸಿಎ ನೆಟ್ಸ್ನಲ್ಲಿ ಏಳು ಓವರ್ಗಳನ್ನು ಎಸೆಯುತ್ತಿದ್ದಾರೆ. ಆರಂಭಿಕ ಅವಧಿಯ ಲಘು ವ್ಯಾಯಾಮಗಳು ಮತ್ತು ಬೌಲಿಂಗ್ ಅವಧಿಗಳನ್ನು ಲೆಕ್ಕ ಹಾಕಿದರೆ ಅವರು ಕೆಲಸ ಜಾಸ್ತಿಯಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಬುಮ್ರಾ ಮುಂದಿನ ತಿಂಗಳು (ಎನ್ಸಿಎನಲ್ಲಿ) ಕೆಲವು ಅಭ್ಯಾಸ ಪಂದ್ಯಗಳನ್ನು ಆಡಲಿದ್ದಾರೆ. ನಂತರ ಅವರ ಫಿಟ್ನೆಸ್ ಬಗ್ಗೆ ಮೌಲ್ಯಮಾಪನ ನಡೆಯಲಿದೆ” ಎಂದು ಮೂಲಗಳು ಪಿಟಿಐಗೆ ಮಾಹಿತಿ ನೀಡಿವೆ.
ಇದನ್ನೂ ಓದಿ : Team India : ಟೀಮ್ ಇಂಡಿಯಾಗೆ ಗುಡ್ ನ್ಯೂಸ್, ಶೀಘ್ರದಲ್ಲೇ ಬುಮ್ರಾ ತಂಡಕ್ಕೆ ವಾಪಸ್
ಟೀಮ್ ಇಂಡಿಯಾದ ಮಾಜಿ ಸ್ಟ್ತೆಂಥ್ ಆ್ಯಂಡ್ ಕಂಡೀಷನಿಂಗ್ ಕೋಚ್ ರಾಮ್ಜಿ ಶ್ರೀನಿವಾಸನ್ ಬುಮ್ರಾ ಅವರನ್ನು ಮರಳಿ ತಂಡಕ್ಕೆ ಕರೆತರುವಾಗ ತೀವ್ರ ಕಾಳಜಿ ವಹಿಸಬೇಕು ಹೇಳಿದ್ದಾರೆ. ಬುಮ್ರಾ ವಿಚಾರದಲ್ಲಿ ಆತುರಪಡಬಾರದು. ಎನ್ಸಿಎನಲ್ಲಿ ಅಭ್ಯಾಸ ಪಂದ್ಯಗಳನ್ನು ಆಡುವುದು ಉತ್ತಮ ಕ್ರಮ. ಏಕೆಂದರೆ ಇದು ಪಂದ್ಯದ ಬೇಡಿಕೆಗಳಿಗೆ ಅನುಗುಣವಾಗಿ ಅವರ ದೇಹವನ್ನು ಟ್ಯೂನ್ ಮಾಡಲು ಸಹಾಯ ಮಾಡುತ್ತದೆ. ಆದರೆ ಅವರನ್ನು ಉನ್ನತ ಮಟ್ಟದ ಕ್ರಿಕೆಟ್ಗೆ ಕರೆತರುವ ಮೊದಲು ಕೆಲವು ದೇಶಿಯ ಪಂದ್ಯಗಳಲ್ಲಿ ಆಡಬೇಕು ಎಂದು ಅವರು ಹೇಳಿದ್ದಾರೆ.
ಅಂತರರಾಷ್ಟ್ರೀಯ ಕ್ರಿಕೆಟ್ನ ಬೇಡಿಕೆಗಳು ವಿಭಿನ್ನವಾಗಿರುತ್ತವೆ. ಆ ಪ್ರಮಾಣದ ಕೆಲಸದ ಹೊರೆಯನ್ನು ತೆಗೆದುಕೊಳ್ಳಲು ದೇಹವು ಸಿದ್ಧವಾಗಿರಬೇಕು. ವ್ಯಾಯಾಮ ಮತ್ತು ವಿಶ್ರಾಂತಿಯೇ ಒತ್ತಡ ಗಾಯಕ್ಕೆ ಮದ್ದು. ಹೀಗಾಗಿ ಬುಮ್ರಾಗೆ ಗರಿಷ್ಠ ಚೇತರಿಕೆ ಸಮಯವನ್ನು ನೀಡಬೇಕು ಎಂದು ರಾಮ್ಜಿ ಹೇಳಿದ್ದಾರೆ.
ಎನ್ಸಿಎಯಲ್ಲಿ ಚೇತರಿಸಿಕೊಳ್ಳುತ್ತಿರುವ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಕೂಡ ನಿರೀಕ್ಷೆಯಂತೆ ಪ್ರಗತಿ ಸಾಧಿಸುತ್ತಿದ್ದಾರೆ. ಆದರೆ ಅವರಿಗೆ ತಂಡಕ್ಕೆ ಮರಳಲು ನಿರ್ದಿಷ್ಟ ಸಮಯವನ್ನು ನಿಗದಿಪಡಿಸಲಾಗಿಲ್ಲ. ಮೊಣಕಾಲಿನ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ರಿಷಭ್ ಪಂತ್ ಅವರೊಂದಿಗೆ ಅವರೆಲ್ಲರೂ ಒಟ್ಟಿಗೆ ಅಭ್ಯಾಸ ನಡೆಸುತ್ತಿದ್ದಾರೆ.