ಬಾರ್ಬಡೋಸ್: ಟಿ20 ವಿಶ್ವಕಪ್(T20 World Cup) ಟೂರ್ನಿಯಲ್ಲಿ ಶ್ರೇಷ್ಠ ಬೌಲಿಂಗ್ ಪ್ರದರ್ಶನ ತೋರುವ ಮೂಲಕ ಭಾರತ ತಂಡದ ವಿಶ್ವಕಪ್(India’s T20 World Cup win) ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ ಜಸ್ಪ್ರೀತ್ ಬುಮ್ರಾ(Jasprit Bumrah) ಅವರಿಗೆ ಪತ್ನಿ, ಕ್ರೀಡಾ ನಿರೂಪಕಿಯೂ ಆಗಿರುವ ಸಂಜನಾ ಗಣೇಶನ್(Sanjana Ganesan) ಐಸ್ ಕ್ರೀಂ ಪಾರ್ಟಿ ಕೊಡಿಸಿದ್ದಾರೆ. ಪತ್ನಿ ಐಸ್ ಕ್ರೀಂ ಟ್ರೀಟ್ ಕೊಟ್ಟ ಫೋಟೊವನ್ನು ಬುಮ್ರಾ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಾಕಿದ್ದಾರೆ.
ಫೈನಲ್ ಪಂದ್ಯದ ಬಳಿಕ ಸಂಜನಾ ಅವರು ಪತಿ ಬುಮ್ರಾರನ್ನು ಇಲ್ಲಿನ ಸ್ಥಳೀಯ ರೆಸ್ಟೋರೆಂಟ್ಗೆ ಕರೆದುಕೊಂಡು ಹೋಗಿ ಐಸ್ ಕ್ರೀಂ ತಿನ್ನಿಸಿದ್ದಾರೆ. ‘ವಿಶ್ವ ಚಾಂಪಿಯನ್ ಜತೆಗೆ ಐಸ್ ಕ್ರೀಂ ತಿನ್ನುವ ಖುಷಿ’ ಎಂದು ಸಂಜನಾ ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ಐಸ್ ಕ್ರೀಂ ಟ್ರೀಟ್ ಕೊಟ್ಟ ಪತ್ನಿಗೆ ಧನ್ಯವಾದಗಳು ಮೈ ಡಿಯರ್..ಎಂದು ಬುಮ್ರಾ ಹೇಳಿದ್ದಾರೆ.
ಕ್ರೀಡಾ ನಿರೂಪಕಿ ಸಂಜನಾ ಗಣೇಶನ್ ಮತ್ತು ಬುಮ್ರಾ ಅವರು 2021 ಮಾರ್ಚ್ 15ರಂದು ಗೋವಾದಲ್ಲಿ ಮದುವೆಯಾಗಿದ್ದರು. ಮಹಾರಾಷ್ಟ್ರದವರಾದ ಸಂಜನಾ 2014ರ ಮಿಸ್ ಇಂಡಿಯಾ ಸ್ಪರ್ಧೆಯ ಫೈನಲ್ ತಲುಪಿದ್ದರು. ಬುಮ್ರಾ ಅವರು ಕಳೆದ ವರ್ಷ ಗಂಡು ಮಗುವಿನ ತಂದೆಯಾಗಿದ್ದರು. ಮಗುವಿಗೆ ‘ಅಂಗದ್(Angad) ಜಸ್ಪ್ರೀತ್ ಬುಮ್ರಾ’ ಎಂದು ಹೆಸರಿಡಲಾಗಿದೆ. ಅಂಗದ್ ಎಂದರೆ ಯೋಧ ಎಂದರ್ಥ. ರಾಮಾಯಣದಲ್ಲಿ ಬರುವ ವಾಲಿಯ ಪುತ್ರನ ಹೆಸರು ಕೂಡ ಅಂಗದ್. ಇದೇ ಹೆಸರನ್ನು ಬುಮ್ರಾ ಅವರು ತಮ್ಮ ಮಗನಿಗೆ ಇಟ್ಟಿದ್ದಾರೆ.
ಭಾರತದ ಸ್ಟಾರ್ ವೇಗಿ ಬುಮ್ರಾ ಈ ಬಾರಿಯ ಟಿ20 ವಿಶ್ವಕಪ್ ಆವೃತ್ತಿಯಲ್ಲಿ ಯಾವುದೇ ಬೌಲರ್ಗೆ ಕಡಿಮೆ ಇಲ್ಲದ ಎಕಾನಮಿ ರೇಟ್ ಪ್ರದರ್ಶಿಸಿದರು. ಅವರು 8.26 ಸರಾಸರಿ ಮತ್ತು 4.17 ಎಕಾನಮಿ ರೇಟ್ನಲ್ಲಿ 15 ವಿಕೆಟ್ ಉರುಳಿಸಿ ಭಾರತದ ಗೆಲುವಿನ ಅಭಿಯಾನದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಇದನ್ನೂ ಓದಿ Jasprit Bumrah : ಜಸ್ಪ್ರಿತ್ ಬುಮ್ರಾ ವೈಟ್ ಬಾಲ್ ಕ್ರಿಕೆಟ್ನ ಅತ್ಯುತ್ತಮ ಬೌಲರ್ ಎಂದು ಹೊಗಳಿದ ಮೈಕಲ್ ವಾನ್
ಟೀಮ್ ಇಂಡಿಯಾ ತವರಿಗೆ ವಾಪಸಾಗುವುದು ಮತ್ತಷ್ಟು ವಿಳಂಬ
ಕೆರಿಬಿಯನ್ ರಾಷ್ಟ್ರದಲ್ಲಿ(Caribbean country) ಬೀಸುತ್ತಿರುವ ಭಾರೀ ಚಂಡಮಾರುತದಿಂದಾಗಿ ಬಾರ್ಬಡೋಸ್ನಲ್ಲಿಯೇ ಉಳಿದಿರುವ ಟೀಮ್ ಇಂಡಿಯಾ(Team India stuck in Barbados), ತವರಿಗೆ ವಾಪಸಾಗುವುದು ಮತ್ತಷ್ಟು ವಿಳಂಬಗೊಳ್ಳುವ ಸಾಧ್ಯತೆಯಿದೆ ಎಂದು ವರದಿಗಳು ಹೇಳಿವೆ. ಚಂಡಮಾರುತದ ಅಬ್ಬರ ಮತ್ತೆ ಹೆಚ್ಚಾಗಿರುವ ಕಾರಣ ಬಾರ್ಬಡೋಸ್ನಲ್ಲಿ ವಿದ್ಯುತ್ ಮತ್ತು ನೀರು ಪೂರೈಕೆಗೆ ತೊಂದರೆಯಾಗಿದೆ. ಜತೆಗೆ ವಿಮಾನ ನಿಲ್ದಾಣಗಳು ಬಂದ್ ಆಗಿವೆ. ಹೀಗಾಗಿ ಆಟಗಾರರು ಭಾರತಕ್ಕೆ ಬರುವುದು ಇನ್ನೂ 2 ದಿನ ತಡವಾಗುವ ಸಾಧ್ಯತೆ ಕಂಡುಬಂದಿದೆ.
ಗಂಟೆಗೆ 130 ಕಿ.ಮೀ.ಗೂ ವೇಗವಾಗಿ ಗಾಳಿ ಬೀಸುತ್ತಿರುವುದರಿಂದ ಪ್ರವಾಸಿಗರಿಗೆ ಒಳಾಂಗಣದಲ್ಲೇ ಉಳಿದುಕೊಳ್ಳುವಂತೆ ಎಚ್ಚರಿಕೆ ನೀಡಲಾಗಿದೆ. ಅಲ್ಲದೇ ಬಾರ್ಬಡಾಸ್‌ನಲ್ಲಿ ನಿಷೇದಾಜ್ಞೆ ಜಾರಿ ಮಾಡಿದ್ದು, ಜನರಿಗೆ ಮನೆಗಳಿಂದ ಹೊರಬರದಂತೆ ಸೂಚಿಸಲಾಗಿದೆ.
ಸದ್ಯ ಟೀಮ್ ಇಂಡಿಯಾದ ಆಟಗಾರರು ಮತ್ತವರ ಕುಟುಂಬಸ್ಥರು, ಬಿಸಿಸಿಐ ಅಧಿಕಾರಿಗಳು ಸೇರಿ ಇಡೀ ತಂಡ ಬಾರ್ಬಡೋಸ್ನ ಹೊಟೇಲ್‌ನಲ್ಲಿ ತಂಗಿದೆ. ಚಂಡಮಾರುತದ ಕಾರಣ, ಭಾರತೀಯ ಆಟಗಾರರಿರುವ ಹೊಟೇಲ್ ಸೇವೆಯಲ್ಲೂ ವ್ಯತ್ಯಯವಾಗಿದೆ ಎಂದು ವರದಿಯಾಗಿದೆ. ಟಿ 20 ವಿಶ್ವಕಪ್ ಫೈನಲ್ನಲ್ಲಿ ಭಾರತ ಗೆದ್ದ ಕೆಲವೇ ಗಂಟೆಗಳ ನಂತರ ಬೆರಿಲ್ ಚಂಡಮಾರುತವು ದ್ವೀಪ ರಾಷ್ಟ್ರಕ್ಕೆ ಅಪ್ಪಳಿಸಿತ್ತು.