ಗುವಾಹಟಿ : ಭಾರತ ಕ್ರಿಕೆಟ್ ತಂಡದ ವೇಗದ ಬೌಲಿಂಗ್ ಅಸ್ತ್ರ ಜಸ್‌ಪ್ರಿತ್ ಬುಮ್ರಾ ಅವರು ಮುಂಬರುವ ಟಿ೨೦ ವಿಶ್ವ ಕಪ್‌ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದವರು ಯಾರು? ಹೀಗಿತ್ತು ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಅವರ ಮಾತಿನ ಸಾರ. ಯಾಕೆಂದರೆ, ದಕ್ಷಿಣ ಅಫ್ರಿಕಾ ವಿರುದ್ಧದ ಸರಣಿಯ ವೇಳೆ ಗಾಯಗೊಂಡಿದ್ದ ಬುಮ್ರಾ ಅವರು ಮುಂದಿನ ನಾಲ್ಕರಿಂದ ಆರು ತಿಂಗಳು ಆಡುವುದು ಸಾಧ್ಯವಾಗುವುದಿಲ್ಲ ಎಂಬುದಾಗಿ ವರದಿಯಾಗುತ್ತಿದೆ. ಹೀಗಾಗಿ ವಿಶ್ವ ಕಪ್‌ಗೆ ಸಜ್ಜಾಗಿರುವ ಭಾರತ ತಂಡಕ್ಕೆ ಹಿನ್ನಡೆ ಉಂಟಾಗುತ್ತದೆ ಎಂದು ಹೇಳಲಾಗುತ್ತಿದೆ. ಈ ವರದಿಯನ್ನು ರಾಹುಲ್ ದ್ರಾವಿಡ್ ಅವರು ಒಪ್ಪುತ್ತಿಲ್ಲ.
“ಇದುವರೆಗಿನ ವಸ್ತು ಸ್ಥಿತಿ ಹೇಳುವುದಾದರೆ ಜಸ್‌ಪ್ರಿತ್ ಬುಮ್ರಾ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಿಂದ ಮಾತ್ರ ಅಧಿಕೃತವಾಗಿ ಹೊರಕ್ಕೆ ಬಿದ್ದಿದ್ದಾರೆ. ಅವರು ಬೆಂಗಳೂರಿನಲ್ಲಿರುವ ರಾಷ್ಟ್ರಿಯ ಕ್ರಿಕೆಟ್ ಅಕಾಡೆಮಿಗೆ ಪುನಶ್ಚೇತನಕ್ಕಾಗಿ ತೆರಳಿದ್ದಾರೆ. ಮುಂದಿನ ನಿರ್ಧಾರ ತೆಗೆದುಕೊಳ್ಳುವ ಮೊದಲು ವೈದ್ಯಕೀಯ ವರದಿಯನ್ನು ಪರಿಗಣಿಸಬೇಕಾಗುತ್ತದೆ. ಅಲ್ಲಿಯ ತನಕ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಮಾತ್ರ ಇಲ್ಲ ಎಂಬುದಾಗಿ ಹೇಳಬಹುದು. ಒಂದು ವೇಳೆ ವೈದ್ಯಕೀಯ ವರದಿಯಲ್ಲಿ ಗಾಯಗೊಂಡಿರುವುದು ಖಾತ್ರಿಯಾದರೆ, ಆ ಬಗ್ಗೆ ಮಾಹಿತಿ ಹಂಚಿಕೊಳ್ಳುವುದಕ್ಕೆ ಸಾಧ್ಯ,” ಎಂಬುದಾಗಿ ಗುವಾಹಟಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
“ಪ್ರಾಮಾಣಿಕವಾಗಿ ಹೇಳುವುದಾದರೆ ನಾನು ವೈದ್ಯಕೀಯ ವರದಿಯ ಬಗ್ಗೆ ಆಳ ಅಧ್ಯಯನ ನಡೆಸಿಲ್ಲ. ಅದಕ್ಕಿಂತಲೂ ಹೆಚ್ಚಾಗಿ ಆ ಬಗ್ಗೆ ಹೇಳುವುದಕ್ಕೆ ನಾನು ತಜ್ಞನೂ ಅಲ್ಲ. ಅಧಿಕೃತವಾಗಿ ಅವರು ವಿಶ್ವ ಕಪ್‌ನಿಂದ ಹೊರಕ್ಕೆ ಬಿದ್ದರೆ ಮಾತ್ರ ನಾವು ಏನಾದರೂ ಹೇಳಲು ಸಾಧ್ಯ. ಅವರು ತಂಡಕ್ಕೆ ಲಭ್ಯರಾಗುತ್ತಾರೆ ಎಂದೇ ನಂಬುತ್ತೆವೆ ಹಾಗೂ ವೈಯಕ್ತಿಕವಾಗಿಯೂ ಅವರಿಗೆ ಒಳಿತಾಗಲಿ ಎಂದು ಬಯಸುತ್ತೇನೆ,” ಎಂದು ಅವರು ಹೇಳಿದರು.
ಇದನ್ನೂ ಓದಿ | Jasprit Bumrah | ಬುಮ್ರಾ ಇನ್ನೂ ತಂಡದಿಂದ ಹೊರಬಿದ್ದಿಲ್ಲ, ಕಾದು ನೋಡೋಣ ಎಂದ ಗಂಗೂಲಿ