Site icon Vistara News

Jasprit Bumrah: ವಿಶ್ವಕಪ್​ನಲ್ಲಿ ಕಪಿಲ್​ ದೇವ್​ ದಾಖಲೆ ಮುರಿದ ಜಸ್​ಪ್ರೀತ್​ ಬುಮ್ರಾ

jasprit bumrah

ಧರ್ಮಶಾಲಾ: ಟೀಮ್​ ಇಂಡಿಯಾದ ಸ್ಟಾರ್​ ವೇಗಿ ಜಸ್​ಪ್ರೀತ್​ ಬುಮ್ರಾ(Jasprit Bumrah) ಅವರು ನ್ಯೂಜಿಲ್ಯಾಂಡ್​(India vs New Zealand) ವಿರುದ್ಧದ ಪಂದ್ಯದಲ್ಲಿ ಒಂದು ವಿಕೆಟ್​ ಕೀಳುವ ಮೂಕಲ ದಾಖಲೆಯೊಂದನ್ನು ಬರೆದಿದ್ದಾರೆ. ವಿಶ್ವಕಪ್ ಕ್ರಿಕೆಟ್​ನಲ್ಲಿ ಅತ್ಯಧಿಕ ವಿಕೆಟ್​ ಕಿತ್ತ 5ನೇ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ. ಇದೇ ವೇಳೆ ಕಪಿಲ್​ ದೇವ್(kapil dev) ದಾಖಲೆ ಪತನಗೊಂಡಿತು.

​ಧರ್ಮಶಾಲಾದಲ್ಲಿ ಭಾನುವಾರ ನಡೆದ ಈ ಪಂದ್ಯದಲ್ಲಿ ಜಸ್​ಪ್ರೀತ್​ ಬುಮ್ರಾ ಅವರು ಮಾರ್ಕ್ ಚಾಪ್ಮನ್ ವಿಕೆಟ್​ ಕೀಳುವ ಮೂಲಕ ವಿಶ್ವಕಪ್​ ಕ್ರಿಕೆಟ್​ನಲ್ಲಿ 29 ವಿಕೆಟ್​ಗಳನ್ನು ಪೂರ್ತಿಗೊಳಿಸಿದರು. ಈ ಮೂಲಕ 1983ರ ಏಕದಿನ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್​ ಅವರ ದಾಖಲೆಯನ್ನು ಹಿಂದಿಕ್ಕಿದರು. ಕಪಿಲ್​ ದೇವ್​ ಅವರು ಭಾರತದ ಪರ ನಾಲ್ಕು ವಿಶ್ವಕಪ್​ ಆವೃತ್ತಿಗಳಲ್ಲಿ ಒಟ್ಟು 26 ಪಂದ್ಯಗಳನ್ನು ಆಡಿ 28 ವಿಕೆಟ್​ಗಳನ್ನು ಪಡೆದಿದ್ದರು. ಆದರೆ ಬುಮ್ರಾ ಕೇವಲ 14 ಪಂದ್ಯಗಗಳಿಂದ ಈ ದಾಖಲೆ ಮೀರಿ ನಿಂತಿದ್ದಾರೆ.

ಭಾರತ ಪರ ವಿಶ್ವಕಪ್​ನಲ್ಲಿ ಅತಿ ಹೆಚ್ಚು ವಿಕೆಟ್​ ಪಡೆದ ದಾಖಲೆ ಜಹೀರ್​ ಖಾನ್​ ಹೆಸರಿನಲ್ಲಿದೆ. ಅವರು 2003-2011 ವರೆಗೆ ವಿಶ್ವಕಪ್​ ಆಡಿ 44 ವಿಕೆಟ್​ಗಳನ್ನು ಕಿತ್ತಿದ್ದಾರೆ. ದ್ವಿತೀಯ ಸ್ಥಾನದಲ್ಲಿ ಜಾವಗಲ್ ಶ್ರೀನಾಥ್​ ಕಾಣಿಸಿಕೊಂಡಿದ್ದಾರೆ. ಅವರು 1992-2003 ಆಡಿ 44 ವಿಕೆಟ್​ ಪಡೆದಿದ್ದಾರೆ.

ಇದನ್ನೂ ಓದಿ IND vs NZ: 2 ಕ್ಯಾಚ್​ ಹಿಡಿದು ದಾಖಲೆ ಬರೆದ ಕಿಂಗ್​ ಕೊಹ್ಲಿ; ದಿಗ್ಗಜ ಆಟಗಾರನ ದಾಖಲೆ ಉಡೀಸ್​

ಶಮಿಗೆ ಮೂರನೇ ಸ್ಥಾನ

ಮೂರನೇ ಸ್ಥಾನದಲ್ಲಿ ಮೊಹಮ್ಮದ್​ ಶಮಿ ಕಾಣಿಸಿಕೊಂಡಿದ್ದಾರೆ. ಶಮಿ ಅವರು ಸದ್ಯ ಶಮ್ಮಿ 36 ವಿಕೆಟ್​ಗಳನ್ನು ಪಡೆದಿದ್ದಾರೆ. ಅವರು ಇನ್ನು 8 ವಿಕೆಟ್​ ಪಡೆದರೆ ಜಹೀರ್​ ಮತ್ತು ಶ್ರೀನಾಥ್​ ದಾಖಲೆಯನ್ನು ಮುರಿಯಲಿದ್ದಾರೆ. ಶಮಿ ಅವರು ಕಿವೀಸ್​ ವಿರುದ್ಧದ ಪಂದ್ಯದಲ್ಲೇ ಮೂರನೇ ಸ್ಥಾನಕ್ಕೇರಿದರು. ಅವರು ಅನಿಲ್​ ಕುಂಬ್ಳೆ ಅವರ 31 ವಿಕೆಟ್​ಗಳ ದಾಖಲೆಯನ್ನು ಮುರಿದು ಈ ಸ್ಥಾನಕ್ಕೇರಿದರು.

ಶಮಿ ಅವರಿಗೆ ಆರಂಭಿಕ ನಾಲ್ಕು ಪಂದ್ಯಗಳಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ. ಆದರೆ ಕಿವೀಸ್​ ವಿರುದ್ಧ ಶಾರ್ದೂಲ್ ಠಾಕೂರ್​ ಅವರ ಸ್ಥಾನದಲ್ಲಿ ಆಡಲಿಳಿದ ಅವರು ಅಮೋಘ ಬೌಲಿಂಗ್​ ಪ್ರದರ್ಶನ ತೋರುವ ಮೂಲಕ 5 ವಿಕೆಟ್​ ಕಿತ್ತು ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು. ಮುಂದಿನ ಪಂದ್ಯಕ್ಕೂ ಅವರು ತಂಡದಲ್ಲಿ ಸ್ಥಾನ ಪಡೆಯುವುದು ಖಚಿತವಾಗಿದೆ.

ವಿಶ್ವ ದಾಖಲೆ ಗ್ಲೆನ್ ಮೆಕ್​ಗ್ರಾತ್ ಹೆಸರಿನಲ್ಲಿದೆ

ವಿಶ್ವಕಪ್​ನಲ್ಲಿ ಅತಿ ಹೆಚ್ಚು ವಿಕೆಟ್​ ಕಿತ್ತ ದಾಖಲೆ ಆಸ್ಟ್ರೇಲಿಯಾದ ಮಾಜಿ ವೇಗಿ ಗ್ಲೆನ್ ಮೆಕ್​ಗ್ರಾತ್(Glenn McGrath) ಅವರ ಹೆಸರಿನಲ್ಲಿದೆ. 1996-2007ರ ತನಕ ವಿಶ್ವಕಪ್​ ಆಡಿದ ಸಾಧನೆ ಇವರದ್ದು. ಅಲ್ಲದೆ ಮೂರು ಬಾರಿಯ ವಿಶ್ವಕಪ್​ ವಿಜೇತ ತಂಡದ ಸದಸ್ಯ ಎಂಬ ಹಿರಿಮೆಯೂ ಇವರ ಪಾಲಿಗಿದೆ. 39 ವಿಶ್ವಕಪ್​ ಪಂದ್ಯ ಆಡಿರುವ ಅವರು 1955 ಬಾಲ್​ ಎಸೆದು 71 ವಿಕೆಟ್​ ಕೆಡವಿದ್ದಾರೆ. 42 ಮೇಡನ್​ ಒಳಗೊಂಡಿದೆ. 15 ರನ್​ಗೆ 7 ವಿಕೆಟ್​ ಕಿತ್ತದ್ದು ವೈಯಕ್ತಿಕ ಗರಿಷ್ಠ ಸಾಧನೆಯಾಗಿದೆ.

ಭಾರತಕ್ಕೆ ಸತತ 5ನೇ ಗೆಲುವು

ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್​ ಸಂಸ್ಥೆಯ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್​ ಗೆದ್ದ ಭಾರತ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಕಿವೀಸ್​ ಪಡೆ ನಿಗದಿತ 50 ಓವರ್​ಗಳಲ್ಲಿ 273 ರನ್​ಗಳಿಗೆ ಆಲ್​ಔಟ್​ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಭಾರತ ತಂಡ 48 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 274 ರನ್ ಬಾರಿಸಿ ಗೆಲುವು ಸಾಧಿಸಿತು. ಇದರೊಂದಿಗೆ ನ್ಯೂಜಿಲ್ಯಾಂಡ್​ನ ಡ್ಯಾರೆಲ್​ ಮಿಚೆಲ್​ (130) ಅವರ ಶತಕದ ಸಾಧನೆ ಮಂಕಾಯಿತು. ಇದು ಭಾರತಕ್ಕೆ ಹಾಲಿ ಆವೃತ್ತಿಯಲ್ಲಿ ಒಲಿದ ಸತತ 5ನೇ ಗೆಲುವಾಗಿದೆ.

Exit mobile version