ಡಬ್ಲಿನ್: ಐರ್ಲೆಂಡ್(Ireland vs India, 2nd T20) ವಿರುದ್ಧದ ಮೊದಲ ದ್ವಿತೀಯ ಟಿ20 ಪಂದ್ಯದಲ್ಲಿ 33 ರನ್ಗಳ ಗೆಲುವು ಸಾಧಿಸಿದ ಭಾರತ ತಂಡ ಸರಣಿಯನ್ನು ವಶಪಡಿಸಿಕೊಂಡಿದೆ. ಇದೇ ಪಂದ್ಯದಲ್ಲಿ ಘಾತಕ ಬೌಲಿಂಗ್ ದಾಳಿ ನಡೆಸಿದ ನಾಯಕ ಜಸ್ಪ್ರೀತ್ ಬುಮ್ರಾ(Jasprit Bumrah) ಅವರು ಹಾರ್ದಿಕ್ ಪಾಂಡ್ಯ(Hardik Pandya) ಹೆಸರಿನಲ್ಲಿದ್ದ ದಾಖಲೆಯೊಂದನ್ನು ಹಿಂದಿಕ್ಕಿದ್ದಾರೆ.
ಮಲಾಹೈಡ್‌ನ ವಿಲೇಜ್(The Village, Dublin) ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಭಾರತ ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್(58) ಅವರ ಸೊಗಸಾದ ಅರ್ಧಶತಕ ಮತ್ತು ಸಂಜು ಸ್ಯಾಮ್ಸನ್(40) ಹಾಗೂ ರಿಂಕು ಸಿಂಗ್(38) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ, ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 185 ರನ್ ಗಳಿಸಿತು. ಜವಾಬಿತ್ತ ಐರ್ಲೆಂಡ್ ತನ್ನ ಪಾಲಿನ ಆಟದಲ್ಲಿ 8 ವಿಕೆಟ್ ಕಳೆದುಕೊಂಡು 152 ರನ್ ಗಳಿಸಿ ಶರಣಾಯಿತು.
ನಾಲ್ಕನೇ ಸ್ಥಾನಕ್ಕೆ ಕುಸಿದ ಪಾಂಡ್ಯ
ಐರ್ಲೆಂಡ್ ಚೇಸಿಂಗ್ ವೇಳೆ ಮಾರಕ ಬೌಲಿಂಗ್ ದಾಳಿ ನಡೆಸಿದ ಜಸ್ಪ್ರೀತ್ ಬುಮ್ರಾ 4 ಓವರ್ ಎಸೆದು ಒಂದು ಮೇಡನ್ ಸಹಿತ ಕೇವಲ 15 ರನ್ ವೆಚ್ಚದಲ್ಲಿ 2 ವಿಕೆಟ್ ಕೆಡವಿದರು. ಈ ವಿಕೆಟ್ ಕಲೆಹಾಕುತ್ತಲೇ ಬುಮ್ರಾ ಅವರು ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದರು. ಜತೆಗೆ ಹಾರ್ದಿಕ್ ಪಾಂಡ್ಯ ಅವರನ್ನು ಹಿಂದಿಕ್ಕಿದರು. ಪಾಂಡ್ಯ ಅವರು 73 ವಿಕೆಟ್ಗಳನ್ನು ಪಡೆದು ಈ ಹಿಂದೆ ಮೂರನೇ ಸ್ಥಾನದಲ್ಲಿದ್ದರು ಇದೀಗ ಬುಮ್ರಾ 74 ವಿಕೆಟ್ ಕಿತ್ತು ಮೂರನೇ ಸ್ಥಾನಕ್ಕೇರಿದ್ದಾರೆ. ಪಾಂಡ್ಯ ಒಂದು ಸ್ಥಾನ ಕುಸಿದು ನಾಲ್ಕನೇ ಸ್ಥಾನದಲ್ಲಿದ್ದಾರೆ. ಆರ್ ಅಶ್ವಿನ್ 72 ವಿಕೆಟ್ಗಳನ್ನು ಕೆಡವಿ 5ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.
ಚಹಲ್ಗೆ ಅಗ್ರಸ್ಥಾನ
ಟೀಮ್ ಇಂಡಿಯಾ ಪರ ಅತ್ಯಧಿಕ ವಿಕೆಟ್ ಕಿತ್ತವರ ಪಟ್ಟಿಯಲ್ಲಿ ಸ್ಪಿನ್ನರ್ ಯಜುವೇಂದ್ರ ಚಹಲ್(Yuzvendra Chahal) ಮೊದಲ ಸ್ಥಾನ ಪಡೆದಿದ್ದಾರೆ. ಅವರು 80 ಟಿ20 ಪಂದ್ಯಗಳನ್ನು ಆಡಿ 96 ವಿಕೆಟ್ ಪಡೆದಿದ್ದಾರೆ. 25ಕ್ಕೆ 6 ವಿಕೆಟ್ ಪಡೆದದ್ದು ಅವರ ವೈಯಕ್ತಿಕ ಉತ್ತಮ ಬೌಲಿಂಗ್ ದಾಖಲೆಯಾಗಿದೆ. ಭುವನೇಶ್ವರ್ ಕುಮಾರ್ 90 ವಿಕೆಟ್ ಪಡೆದು ದ್ವಿತೀಯ ಸ್ಥಾನದಲ್ಲಿದ್ದಾರೆ.
11 ತಿಂಗಳ ಬಳಿಕ ಕ್ರಿಕೆಟ್ಗೆ ಮರಳಿದ ಜಸ್ಪ್ರೀತ್ ಬುಮ್ರಾ ಅವರಿಗೆ ನಾಯಕನಾಗಿ ಐರ್ಲೆಂಡ್ ಸರಣಿ ಗೆದ್ದಿರುವುದು ಏಷ್ಯಾಕಪ್ಗೂ ಮುನ್ನ ಮತ್ತಷ್ಟು ಆತ್ಮವಿಶ್ವಾಸ ಹೆಚ್ಚಿಸಿದೆ. ಸೋಮವಾರ ಪ್ರಕಟಗೊಂಡ ಏಷ್ಯಾಕಪ್ನಲ್ಲಿ ಅವರು ಕೂಡ ಸ್ಥಾನ ಪಡೆದಿದ್ದಾರೆ. ತಂಡ ಪ್ರಕಟಗೊಳಿಸುವ ವೇಳೆ ನಾಯಕ ರೋಹಿತ್ ಶರ್ಮ ಕೂಡ ಬುಮ್ರಾ ಕಮ್ಬ್ಯಾಕ್ ತಂಡಕ್ಕೆ ಹೆಚ್ಚು ಬಲ ಬಂದಂತ್ತಾಗಿದೆ ಎಂದು ಹೇಳಿದರು.
ಇದನ್ನೂ ಓದಿ Ireland vs India: ಐರ್ಲೆಂಡ್ ವಿರುದ್ಧ ಸರಣಿ ಗೆದ್ದ ಭಾರತ; ದ್ವಿತೀಯ ಪಂದ್ಯದಲ್ಲಿ33 ರನ್ ಗೆಲುವು
ತೀವ್ರ ತರದ ಬೆನ್ನುನೋವಿನಿಂದ ಬಳಲುತ್ತಿದ್ದ ಬುಮ್ರಾ ಅವರು ವರ್ಷಾರಂಭದಲ್ಲಿ ನ್ಯೂಜಿಲ್ಯಾಂಡ್ನ ಕ್ರೈಸ್ಟ್‌ಚರ್ಚ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಆಸ್ಟ್ರೇಲಿಯದ ಭಾರತ ಪ್ರವಾಸದಲ್ಲಿ 29 ರ ಹರೆಯದ ವೇಗಿ ಎರಡು ಟಿ20 ಪಂದ್ಯಗಳನ್ನು ಆಡಿದ ನಂತರ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದರು. ಏಷ್ಯಾ ಕಪ್, ಟಿ20 ವಿಶ್ವಕಪ್ ಐಪಿಎಲ್ ಸೇರಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಕೂಡ ಆಡಲು ಸಾಧ್ಯವಾಗಿರಲಿಲ್ಲ. ಈಗ ಅವರು ತಂಡಕ್ಕೆ ಮರಳಿದ್ದು ತಮ್ಮ ಹಳೆಯ ಬೌಲಿಂಗ್ ಲಯದಲ್ಲೇ ಮುಂದುವರಿದಿದ್ದಾರೆ.