ಡಬ್ಲಿನ್: ಐರ್ಲೆಂಡ್ ವಿರುದ್ಧ ಶುಕ್ರವಾರ ನಡೆದ ಮೊದಲ ಟಿ20(Ireland vs India, 1st T20) ಪಂದ್ಯದಲ್ಲಿ ಭಾರತ ತಂಡ(Team India) ಡಕ್ವರ್ತ್ ನಿಯಮದ ಪ್ರಕಾರ(DLS Method) 2 ರನ್ಗಳ ಗೆಲುವು ಸಾಧಿಸಿ ಸರಣಿಯಲ್ಲಿ ಶುಭಾರಂಭ ಕಂಡಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ ವೇಗಿ ಜಸ್ಪ್ರೀತ್ ಬುಮ್ರಾ(Jasprit Bumrah) ಅವರು ನಾಯಕನಾಗಿ ನೂತನ ದಾಖಲೆಯೊಂದನ್ನು ಬರೆದಿದ್ದಾರೆ.
ನಾಯಕತ್ವದಲ್ಲಿ ದಾಖಲೆ
ತೀವ್ರ ಸ್ವರೂಪದ ಬೆನ್ನು ನೋವಿನ ಸಮಸ್ಯೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿ, ಸುಮಾರು 11 ತಿಂಗಳ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಾಪಸಾದದ ಬುಮ್ರಾ ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಟಿ20 ಮಾದರಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದ 11ನೇ ನಾಯಕ ಎನ್ನುವ ಹಿರಿಮೆಗೆ ಪಾತ್ರರಾದರು. ಇದರ ಜತೆಗೆ ನಾಯಕತ್ವ ಪಡೆದ ಮೊದಲ ವೇಗದ ಬೌಲರ್ ಎನ್ನುವ ದಾಖಲೆಯನ್ನೂ ಬರೆದಿದ್ದಾರೆ. ಬುಮ್ರಾ ಅವರಿಗಿಂತ ಮೊದಲ ಬುಮ್ರಾಗೂ ಮೊದಲು ವೀರೇಂದ್ರ ಸೆಹ್ವಾಗ್, ಎಂ.ಎಸ್.ಧೋನಿ, ವಿರಾಟ್ ಕೊಹ್ಲಿ, ಗೌತಮ್ ಗಂಭೀರ್, ಸುರೇಶ್ ರೈನಾ, ಶಿಖರ್ ಧವನ್, ಅಜಿಂಕ್ಯ ರಹಾನೆ, ಕೆ.ಎಲ್.ರಾಹುಲ್, ರಿಷಭ್ ಪಂತ್ ಹಾಗೂ ಹಾರ್ದಿಕ್ ಪಾಂಡ್ಯ ಭಾರತ ತಂಡವನ್ನು ಮುನ್ನಡೆಸಿದ್ದರು. ಆದರೆ ಬೌಲರ್ ಓರ್ವ ಭಾರತ ತಂಡವನ್ನು ಮುನ್ನಡೆಸಿದ್ದು ಇದೇ ಮೊದಲು.
ಮೊದಲ ಓವರ್‌ನಲ್ಲೇ ದಾಖಲೆ
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಜಸ್ಪ್ರೀತ್ ಬುಮ್ರಾ ಇನಿಂಗ್ಸ್ನ ಮೊದಲ ಓವರ್ನಲ್ಲಿ ಎದುರಾಳಿ ಐರ್ಲೆಂಡ್ಗೆ ಅವಳಿ ಆಘಾತ ನೀಡಿದರು. ಮೊದಲ ಎಸೆತದಲ್ಲಿ ಬೌಂಡರಿ ಹೊಡೆಸಿಕೊಂಡರೂ ಮುಂದಿನ ಎಸೆತದಲ್ಲಿ ಬಾಲ್ಬಿರ್ನಿ (4) ಅವರನ್ನು ಬೌಲ್ಡ್ ಮಾಡಿದರು. ಇಲ್ಲಿಗೆ ನಿಲ್ಲದ ಅವರ ವಿಕೆಟ್ ದಾಹ 5ನೇ ಎಸೆತದಲ್ಲಿ ಟ್ಯುಕರ್‌ಗೆ ಪೆವಿಲಿಯನ್ ಹಾದಿ ತೋರಿಸಿದರು. ಟ್ಯುಕರ್ ಖಾತೆಯನ್ನೇ ತೆರೆಯಲಿಲ್ಲ. ಇದೇ ವೇಳೆ ದಾಖಲೆಯೊಂದನ್ನು ಕೂಡ ತಮ್ಮ ಹೆಸರಿಗೆ ಬರೆದರು. ಮೊದಲ ಓವರ್‌ನಲ್ಲೇ 2 ವಿಕೆಟ್ ಹಾರಿಸಿದ ಭಾರತದ 4ನೇ ಬೌಲರ್ ಎನಿಸಿಕೊಂಡರು. ಇದಕ್ಕೂ ಮುನ್ನ ಆರ್. ಅಶ್ವಿನ್, ಭುವನೇಶ್ವರ್ ಕುಮಾರ್ ಮತ್ತು ಹಾರ್ದಿಕ್ ಪಾಂಡ್ಯ ಈ ಸಾಧನೆ ಮಾಡಿದ್ದರು. ಡೆತ್ ಓವರ್‌ಗಳಲ್ಲೂ ಮಿಂಚಿದ ಬುಮ್ರಾ ಒಟ್ಟು 4 ಓವರ್ ಎಸೆದು 24 ರನ್ ನೀಡಿ 2 ವಿಕೆಟ್ ಕಬಳಿಸಿದರು. ಇದರಲ್ಲಿ 9 ಡಾಟ್ ಬಾಲ್‌ಗಳು ಸೇರಿವೆ.
ಇದನ್ನೂ ಓದಿ Jasprit Bumrah : ಪುನರಾಗಮನದಲ್ಲಿ ಸಂಚಲನ ಮೂಡಿಸಿದ ವೇಗಿ ಜಸ್ಪ್ರಿತ್ ಬುಮ್ರಾ
ಪಂದ್ಯ ಗೆದ್ದ ಭಾರತ
ಮಳೆಯಿಂದ ಅಡಚಣೆಯಾದ ಈ ಪಂದ್ಯದಲ್ಲಿ ಭಾರತ ಡಕ್ವರ್ತ್ ನಿಯಮದ ಪ್ರಕಾರ 2 ರನ್ಗಳ ಗೆಲುವು ಸಾಧಿಸಿತು. ಮೊದಲು ಬ್ಯಾಟಿಂಗ್ ನಡೆಸಿದ ಐರ್ಲೆಂಡ್ ಆರಂಭಿಕ ಆಘಾತದ ಹೊರತಾಗಿಯೂ 7 ವಿಕೆಟ್ಗೆ 139ರನ್ ಬಾರಿಸಿತು. ಇದಕ್ಕೆ ಉತ್ತರವಾಗಿ ಬ್ಯಾಟ್ ಮಾಡಿದ ಭಾರತ 6.5 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 47 ರನ್ ಗಳಿಸಿದ ವೇಳೆ ಜೋರಾಗಿ ಮಳೆ ಸುರಿಯಿತು. ಕೆಲ ಸಮಯ ಕಾದರೂ ಮಳೆ ಬಿಡುವು ನೀಡದ ಹಿನ್ನಲೆಯಲ್ಲಿ ಡಕ್ವರ್ತ್ ನಿಯಮದ ಪ್ರಕಾರ ಭಾರತ ತಂಡವನ್ನು ವಿಜಯೀ ಎಂದು ಘೋಷಿಸಲಾಯಿತು.