Site icon Vistara News

Jasprit Bumrah: ಟಿ20 ನಿವೃತ್ತಿ ಬಗ್ಗೆ ಸ್ಪಷ್ಟನೆ ಕೊಟ್ಟ ಜಸ್​ಪ್ರೀತ್​ ಬುಮ್ರಾ

Jasprit Bumrah

Jasprit Bumrah: Jasprit Bumrah makes 'retirement' statement during T20 WC felicitation days after Virat Kohli, Rohit Sharma's move

ಮುಂಬಯಿ: ರೋಹಿತ್​ ಶರ್ಮ, ರವೀಂದ್ರ ಜಡೇಜ ಮತ್ತು ವಿರಾಟ್​ ಕೊಹ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಜಸ್​ಪ್ರೀತ್​ ಬುಮ್ರಾ ಕೂಡ ವಿದಾಯ ಹೇಳಲಿದ್ದಾರೆ ಎಂದು ಎಲ್ಲಡೆ ಸುದ್ದಿಯಾಗಿತ್ತು. ಈ ಬಗ್ಗೆ ಸ್ವತಃ ಜಸ್​ಪ್ರೀತ್​ ಬುಮ್ರಾ(Jasprit Bumrah) ಅವರೇ ಸ್ಪಷ್ಟನೆ ನೀಡಿದ್ದು, ನನ್ನ ನಿವೃತ್ತಿ ಬಗ್ಗೆ ಹರಿದಾಡುತ್ತಿರುವ ಸುದ್ದಿ ಸುಳ್ಳು. ಟಿ20 ಕ್ರಿಕೆಟ್ ನಿಂದ ನಿವೃತ್ತಿ ಹೊಂದುವ ಯಾವುದೇ ಯೋಜನೆ ಹಾಕಿಕೊಂಡಿಲ್ಲ ಎಂದು ಹೇಳಿದ್ದಾರೆ.

ಈ ಬಾರಿಯ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಬುಮ್ರಾ ಉತ್ತಮ ಬೌಲಿಂಗ್​ ಇಕಾನಮಿ ರೇಟ್​ನಲ್ಲಿ 15 ವಿಕೆಟ್​ ಕಿತ್ತು ಮಿಂಚಿದ್ದರು. ಅದರಲ್ಲೂ ಫೈನಲ್​ ಪಂದ್ಯದಲ್ಲಿ ಶ್ರೇಷ್ಠ ಬೌಲಿಂಗ್​ ಸಾಧನೆ ತೋರಿದ್ದರು. 4 ಓವರ್​ ಎಸೆದು ಕೇವಲ 18 ರನ್​ ವೆಚ್ಚದಲ್ಲಿ 2 ವಿಕೆಟ್​ ಉರುಳಿಸಿದ್ದರು. 2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟಿ20 ವಿಶ್ವಕಪ್​ನಲ್ಲಿ ಬುಮ್ರಾ ಬೆನ್ನು ನೋವಿನ ಕಾರಣದಿಂದ ಆಡಿರಲಿಲ್ಲ.

ವಿಶ್ವಕಪ್​ ಗೆದ್ದ ಬಳಿಕ ಮಾತನಾಡಿದ್ದ ಬುಮ್ರಾ, “ಇದು ನಿಜವಾಗಿಯೂ ಖುಷಿಯ ವಿಚಾರ. ಇನ್ನಿಂಗ್ಸ್​ನ ಮಧ್ಯದಲ್ಲಿ ನಮಗೆ ಆತ್ಮವಿಶ್ವಾಸವಿತ್ತು. ಆದರೆ ಅದು ಹೇಗೆ ಸಾಗುತ್ತೇವೆ ಎಂದು ನಾವು ಹೆದರಿದ್ದೆವು. ಆದರೆ ಈ ರೀತಿಯ ಗೆಲುವನ್ನು ಪಡೆಯಲು ನಿಜವಾಗಿಯೂ ಸಂತೋಷವಾಗಿದೆ.. ಇದು ಉತ್ತಮ ಟೂರ್ನಿ. ಪುತ್ರ ಅಂಗದ್​ ಕೂಡ ಜತೆಯಲ್ಲಿರುವ ಕಾರಣ ಆತನೊಂದಿಗೆ ವಿಶ್ವ ಕಪ್​ ಗೆಲುವು ಸಂಭ್ರಮಿಸುವುದು ಖುಷಿಯ ವಿಚಾರ ಎಂದು ಹೇಳಿದ್ದರು.

ಇದನ್ನೂ ಓದಿ Jasprit Bumrah: ವಿಶ್ವಕಪ್​ ಗೆದ್ದ ಖುಷಿಯಲ್ಲಿ ಜಸ್​ಪ್ರೀತ್​ ಬುಮ್ರಾಗೆ ಟ್ರೀಟ್​ ಕೊಡಿಸಿದ ಪತ್ನಿ

ವಿಶ್ವಕಪ್​ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಜಸ್​ಪ್ರೀತ್​ ಬುಮ್ರಾ(Jasprit Bumrah) ಅವರಿಗೆ ಪತ್ನಿ, ಕ್ರೀಡಾ ನಿರೂಪಕಿಯೂ ಆಗಿರುವ ಸಂಜನಾ ಗಣೇಶನ್(Sanjana Ganesan) ಐಸ್‌ ಕ್ರೀಂ ಪಾರ್ಟಿ ಕೊಡಿಸಿದ್ದರು. ಪತ್ನಿ ಐಸ್‌ ಕ್ರೀಂ ಟ್ರೀಟ್​ ಕೊಟ್ಟ ಫೋಟೊವನ್ನು ಬುಮ್ರಾ ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಹಾಕಿದ್ದರು. ಬಾರ್ಬಡೋಸ್​ನ ರೆಸ್ಟೋರೆಂಟ್​ಗೆ ಕರೆದುಕೊಂಡು ಹೋಗಿ ಐಸ್ ಕ್ರೀಂ ತಿನ್ನಿಸಿದ್ದರು. ‘ವಿಶ್ವ ಚಾಂಪಿಯನ್ ಜತೆಗೆ ಐಸ್ ಕ್ರೀಂ ತಿನ್ನುವ ಖುಷಿ’ ಎಂದು ಸಂಜನಾ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಬರೆದುಕೊಂಡಿದ್ದರು.

ಕೆನ್ಸಿಂಗ್ಟನ್ ಓವಲ್ ಕ್ರಿಕೆಟ್ ಮೈದಾನದಲ್ಲಿ ಜೂನ್​ 29ರಂದು ನಡೆದಿದ್ದ ಟಿ20 ವಿಶ್ವಕಪ್​ ಫೈನಲ್(​T20 World Cup 2024) ಪಂದ್ಯದಲ್ಲಿ ಭಾರತ ತಂಡ(Team India) ದಕ್ಷಿಣ ಆಫ್ರಿಕಾ(South Africa vs India) ವಿರುದ್ಧ 7 ರನ್​ಗಳ ಸಾಧಿಸುವ ಮೂಲಕ 13 ವರ್ಷಗಳ ಬಳಿಕ ಐಸಿಸಿ ಪ್ರಶಸ್ತಿ ಬರವೊಂದನ್ನು ನೀಗಿಸಿತ್ತು.

ಕೊನೆಯ ಓವರ್​ನಲ್ಲಿ ದಕ್ಷಿಣ ಆಫ್ರಿಕಾ ಗೆಲುವಿಗೆ 16 ರನ್ ಅಗತ್ಯವಿತ್ತು. ಹಾರ್ದಿಕ್ ಪಾಂಡ್ಯ ಎಸೆದ ಮೊದಲ ಎಸೆತವನ್ನು ಡೇವಿಡ್ ಮಿಲ್ಲರ್ ಸಿಕ್ಸರ್ ನತ್ತ ಬಾರಿಸಿದ್ದರು. ಬೌಂಡರಿ ಲೈನ್ ನಲ್ಲಿದ್ದ ಸೂರ್ಯ ಕುಮಾರ್ ಯಾದವ್ ಯಾರೂ ಊಹಿಸದಂತೆ ಸಾಹಸಮಯ ಅಮೋಘ ಕ್ಯಾಚ್ ಪಡೆದರು. 21 ರನ್ ಗಳಿಸಿದ್ದ ಡೇವಿಡ್​ ಮಿಲ್ಲರ್ ವಿಕೆಟ್​ ಕೈಚೆಲ್ಲಿದರು. ಸೂರ್ಯ ಈ ಕ್ಯಾಚ್​ ಪಡೆಯದೇ ಹೋಗಿದ್ದರೆ ಭಾರತ ಪಂದ್ಯ ಸೋಲುವ ಸಾಧ್ಯತೆ ಇತ್ತು.

Exit mobile version