ಬೆಂಗಳೂರು : ಟೀಮ್ ಇಂಡಿಯಾದ ವೇಗದ ಬೌಲರ್ ಜಸ್‌ಪ್ರಿತ್ ಬುಮ್ರಾ ಮುಂಬರುವ ಏಷ್ಯಾ ಕಪ್ ಟೂರ್ನಿಗೆ ಲಭ್ಯವಿಲ್ಲ. ಬೆನ್ನು ನೋವಿನ ಸಮಸ್ಯೆಗೆ ಒಳಗಾಗಿರುವ ಅವರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನಕ್ಕೆ ಒಳಗಾಗುತ್ತಿದ್ದಾರೆ. ಹೀಗಾಗಿ ಏಷ್ಯಾ ಕಪ್ ಬೇಟೆಗೆ ಹೊರಟಿರುವ ಭಾರತ ತಂಡಕ್ಕೆ ಸಣ್ಣ ಮಟ್ಟಿನ ಹಿನ್ನಡೆ ಉಂಟಾಗಿದೆ. ಏತನ್ಮಧ್ಯೆ, ಟೀಮ್ ಇಂಡಿಯಾಗೆ ಶುಭ ಸುದ್ದಿಯೊಂದು ಬಂದಿದ್ದು ಬುಮ್ರಾ ಎನ್‌ಸಿಎನಲ್ಲಿ ಬಹುತೇಕ ಚೇತರಿಸಿಕೊಂಡು ಅಭ್ಯಾಸ ಆರಂಭಿಸಿದ್ದು, ಮುಂದಿನ ಟಿ೨೦ ವಿಶ್ವ ಕಪ್‌ಗೆ ಲಭ್ಯರಾಗುವ ಸೂಚನೆ ನೀಡಿದ್ದಾರೆ. ತಾವು ಬಿರುಸಿನಿಂದ ಅಭ್ಯಾಸ ನಡೆಸುವ ವಿಡಿಯೊವನ್ನು ಅವರು ಇನ್‌ಸ್ಟಾಗ್ರಾಮ್ ಮೂಲಕ ಪೋಸ್ಟ್ ಮಾಡಿದ್ದಾರೆ.
ಟಿ೨೦ ವಿಶ್ವ ಕಪ್ ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ. ವೇಗದ ಬೌಲಿಂಗ್‌ಗೆ ನೆರವು ನೀಡುವ ಅಲ್ಲಿನ ಪಿಚ್‌ನಲ್ಲಿ ಜಸ್‌ಪ್ರಿತ್ ಬುಮ್ರಾ ಭಾರತ ತಂಡಕ್ಕೆ ಅನಿವಾರ್ಯವಾಗಿದೆ. ಆದರೆ, ಕಳೆದ ಇಂಗ್ಲೆಂಡ್ ಪ್ರವಾಸದ ಬಳಿಕ ಬೆನ್ನು ನೋವಿನ ಸಮಸ್ಯೆಗೆ ಒಳಗಾಗಿದ್ದ ಬುಮ್ರಾ, ಆ ಬಳಿಕ ನಡೆದ ಯಾವುದೇ ಟೂರ್ನಿಗೆ ಲಭ್ಯರಾಗಿರಲಿಲ್ಲ. ಅವರು ಬೆಂಗಳೂರಿನಲ್ಲಿ ಪುನಶ್ಚೇತನಕ್ಕೆ ಒಳಗಾಗಿದ್ದರು. ಇದೀಗ ತಾವು ಸಂಪೂರ್ಣವಾಗಿ ಫಿಟ್ ಆಗಿ ಓಡುತ್ತಿರುವ ವಿಡಿಯೊವನ್ನು ಬಿಡುಗಡೆ ಮಾಡಿದ್ದಾರೆ
ಬಿಸಿಸಿಐ ಸೆಪ್ಟೆಂಬರ್ ೧೫ರಂದು ಟಿ೨೦ ವಿಶ್ವ ಕಪ್ ಆಡಲಿರುವ ಭಾರತ ತಂಡವನ್ನು ಪ್ರಕಟಿಸಲಿದೆ. ಅದಕ್ಕಿಂತ ಮೊದಲು ಜಸ್‌ಪ್ರಿತ್ ಸಂಪೂರ್ಣವಾಗಿ ಫಿಟ್ ಆಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ಅವರು ಎನ್‌ಸಿಎನಲ್ಲಿ ಸಿದ್ಧತೆ ನಡೆಸಿಕೊಳ್ಳುತ್ತಿದ್ದಾರೆ.
ತಾವು ಪ್ರಕಟಿಸಿರುವ ವಿಡಿಯೊಗೆ ಯಾವುದೇ ಅಡಚಣೆಗಳು ದೊಡ್ಡದಲ್ಲ ಎಂದು ಅಡಿ ಬರಹ ಕೊಟ್ಟಿದ್ದಾರೆ. ವಿಡಿಯೊದಲ್ಲಿ ೨೮ ವರ್ಷದ ಬುಮ್ರಾ ಓಟ, ಎರೊಬಾಟಿಕ್, ಡ್ರಿಲ್, ಜಂಪ್, ಹರ್ಡಲ್, ಚೆಂಡು ಎಸೆತ ಸೇರಿದಂತೆ ನಾನಾ ಬಗೆಯ ಅಭ್ಯಾಸಗಳನ್ನು ನಡೆಸುತ್ತಿದ್ದಾರೆ.
ಇದನ್ನೂ ಓದಿ | ASIA Cup | ಹರ್ಷಲ್, ಬುಮ್ರಾ ಅಲಭ್ಯತೆಯಿಂದ ಪಾಕಿಸ್ತಾನ ತಂಡ ನಿರಾಳವಾಗಿದೆ ಎಂದ ಇರ್ಫಾನ್ ಪಠಾಣ್