Site icon Vistara News

Jasprit Bumrah: ಭಾರತ ತೊರೆದು ಕೆನಡಾದಲ್ಲಿ ನೆಲೆಸಲು ಹೊರಟಿದ್ದ ಬುಮ್ರಾರನ್ನು ತಡೆದಿದ್ದು ಯಾರು?

Jasprit Bumrah

ಮುಂಬಯಿ: ಭಾರತ ಕ್ರಿಕೆಟ್​ ತಂಡದ ಪ್ರಧಾನ ವೇಗಿ ಜಸ್​ಪ್ರೀತ್​ ಬುಮ್ರಾ(Jasprit Bumrah) ಅವರು ಭಾರತ ಬಿಟ್ಟು ಕೆನಡಾ ದೇಶಕ್ಕೆ ವಲಸೆ ಹೋಗಲು ನಿರ್ಧಾರ ಕೈಗೊಂಡಿದ್ದ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಈ ವಿಚಾರವನ್ನು ಬುಮ್ರಾ ತಮ್ಮ ಪತ್ನಿ, ಕ್ರೀಡಾ ನಿರೂಪಕಿಯೂ ಆಗಿರುವ ಸಂಜನಾ ಗಣೇಶನ್(Sanjana Ganesan) ಜತೆಗಿನ ಸಂದರ್ಶನದ ವೇಳೆ ಬಹಿರಂಗಪಡಿಸಿದ್ದಾರೆ.

ಸಿಖ್​ ಸಮುದಾಯದವರಾಗಿರುವ ಜಸ್​ಪ್ರೀತ್​ ಬುಮ್ರಾ ಅವರಿಗೆ ಕೆನಡಾದಲ್ಲಿ ಅಪಾರ ಸಂಖ್ಯೆಯ ಬಂಧುಗಳಿದ್ದಾರೆ. ಹೀಗಾಗಿ ಬುಮ್ರಾ ಕೆನಾಡಕ್ಕೆ ಹೋಗಲು ನಿರ್ಧರಿಸಿದ್ದರಂತೆ. ‘ಕೆನಾಡಕ್ಕೆ ತೆರಳಿ ವಿದ್ಯಾಭ್ಯಾಸ ಪೂರ್ತಿ ಗೊಳಿಸಿ ಆ ದೇಶದ ಪ್ರಜೆಯಾಗಿ ಕ್ರಿಕೆಟ್ ಆಡೋಣವೆಂದುಕೊಂಡಿದ್ದೆ. ಏಕೆಂದರೆ ಭಾರತದಲ್ಲಿ ಹಲವು ಕ್ರಿಕೆಟ್​ ಆಟಗಾರರಿದ್ದಾರೆ. ನನಗೆ ಅವಕಾಶ ಸಿಗುವುದು ಅನುಮಾನ ಎಂದುಕೊಂಡಿದ್ದೆ. ನನ್ನ ತಾಯಿ ತಡೆಯದೇ ಹೋಗಿದ್ದರೆ ಬಹುಶಃ ನಾನು ಈಗ ಕೆನಡಾದ ಕ್ರಿಕೆಟಿಗನಾಗಿರುತ್ತಿದ್ದೆ’ ಎಂದು ಬುಮ್ರಾ ಹೇಳಿದರು.

ತಾಯಿಗೆ ಭಾರತ ಬಿಟ್ಟು ಬರಲು ಮನಸ್ಸಿರಲಿಲ್ಲ


ನಾನು ಮಾತ್ರವಲ್ಲದೆ, ನನ್ನ ಇಡೀ ಕುಟುಂಬ ಕೆನಡಾಗೆ ವಲಸೆ ಹೋಗಬೇಕೆಂದು ನಿರ್ಧಾರ ಮಾಡಿದ್ದೆವು. ಕೆನಾಡಕ್ಕೆ ಬರುವಂತೆ ಅಲ್ಲಿನ ನಮ್ಮ ಬಂಧುಗಳು ಕೂಡ ಒತ್ತಾಯ ಮಾಡಿದ್ದರು. ಆದರೆ, ನನ್ನ ತಾಯಿಗೆ ಇದು ಇಷ್ಟವಿರಲಿಲ್ಲ. ಅಲ್ಲಿನ ಸಂಸ್ಕೃತಿ ನಮಗೆ ಸರಿ ಹೊಂದಲ್ಲ ಎಂದು ತಾಯಿ ಎಲ್ಲರನ್ನು ತಡೆದರು. ಹೀಗಾಗಿ ಕೆನಡಾಗೆ ಹೋಗುವ ಪ್ಲ್ಯಾನ್ ರದ್ದಾಯಿತು ಎಂದು ಬುಮ್ರಾ ಬಹಿರಂಗಪಡಿಸಿದರು.

ಇದನ್ನೂ ಓದಿ IPL 2024: ಆರ್​ಸಿಬಿ ವಿರುದ್ಧ ಅಬ್ಬರಿಸಿ ಟಿ20 ಕ್ರಿಕೆಟ್​ನಲ್ಲಿ ದಾಖಲೆ ಬರೆದ ಸೂರ್ಯಕುಮಾರ್

ನಾನು ಕ್ರಿಕೆಟಿಗನಾದದ್ದು ಕೂಡ ಒಂದು ಅಚ್ಚರಿ ಎಂದರೂ ತಪ್ಪಾಗಲಾರದು. ಮುಂಬೈ ತಂಡದ ಕೋಚ್​ ಆಗಿದ್ದ ಜಾನ್​ ರೈಟ್​ ಅವರು ನೆಟ್​ ಬೌಲರ್​ ಆಗಿ ಆಯ್ಕೆ ಮಾಡಿಕೊಂಡರು. ಈ ವೇಳೆ ಸಚಿನ್​ ತೆಂಡೂಲ್ಕರ್​ ಅವರು ಈ ತಂಡದ ಪರ ಆಡುತ್ತಿದ್ದರು. ನನ್ನ ಬೌಲಿಂಗ್​ ಶೈಲಿಯನ್ನು ಕಂಡು ಅವರು ನೇರವಾಗಿ ಮುಂಬೈ ಇಂಡಿಯನ್ಸ್​ ತಂಡಕ್ಕೆ ಆಯ್ಕೆ ಮಾಡಕೊಂಡರು. ಈ ವೇಳೆ ನನಗೆ ಕೇವಲ 19 ವರ್ಷ. ಯಾವುದೇ ದೇಶೀಯ ಕ್ರಿಕೆಟ್​ ಆಡಿದ ಅನುಭವ ಕೂಡ ಇರಲಿಲ್ಲ. ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಚೊಚ್ಚಲ ಕ್ರಿಕೆಟ್​ ಆಡಿ 3 ವಿಕೆಟ್​ ಪಡೆದೆ. ಐಪಿಎಲ್​ ಪ್ರದರ್ಶನ ಕಂಡು ನೇರವಾಗಿ ಭಾರತ ಪರ ಆಡುವ ಅವಕಾಶವು ಸಿಕ್ಕಿತು. ಇಂದು ನನ್ನ ಎಲ್ಲ ಕ್ರಿಕೆಟ್​ ಯಶಸ್ಸಿಗೆ ಸಚಿನ್​ ತೆಂಡೂಲ್ಕರ್​ ಮತ್ತು ಭಾರತ ಬಿಟ್ಟು ಹೋಗದಂತೆ ತಡೆದ ನನ್ನ ತಾಯಿಯೂ ಕಾರಣ. ಬಹುಶಃ ನಾನು ಕೆನಡಾಗೆ ಹೋಗುವ ನಿರ್ಧಾರದಂತೆ ನಡೆದುಕೊಂಡಿದ್ದರೆ ಇಂದು ನನಗೆ ಭಾರತ ಮತ್ತು ಮುಂಬೈ ಇಂಡಿಯನ್ಸ್ ಪರ ಆಡುವ ಅವಕಾಶವೇ ಇರುತ್ತಿರಲಿಲ್ಲ ಎಂದು ಬುಮ್ರಾ ಹೇಳಿಕೊಂಡರು.

ದಾಖಲೆ ಬರೆದ ಬುಮ್ರಾ


ಮೊನಚಾದ ಬೌಲಿಂಗ್​ ದಾಳಿ ನಡೆಸಿ 21 ರನ್​​ಗೆ 5 ವಿಕೆಟ್​ ಕಿತ್ತ ಮುಂಬೈ ಇಂಡಿಯನ್ಸ್(Mumbai Indians)​ ತಂಡದ ವೇಗಿ ಜಸ್​ಪ್ರೀತ್​ ಬುಮ್ರಾ(Jasprit Bumrah) ಅವರು ಆರ್​ಸಿಬಿ(Royal Challengers Bengaluru) ತಂಡದ ವಿರುದ್ಧ ಅತ್ಯಧಿಕ ವಿಕೆಟ್​ ಕಿತ್ತ ಮೊದಲ ಬೌಲರ್ ಎಂಬ ದಾಖಲೆ ಬರೆದರು.ಇದಕ್ಕೂ ಮುನ್ನ ಈ ದಾಖಲೆ ಜಂಟಿಯಾಗಿ ರವೀಂದ್ರ ಜಡೇಜಾ ಮತ್ತು ಸಂದೀಪ್ ಶರ್ಮ ಹೆಸರಿನಲ್ಲಿತ್ತು. ಉಭಯ ಆಟಗಾರರು 26 ವಿಕೆಟ್​​ ಪಡೆದಿದ್ದರು. ಇದೀಗ ಬುಮ್ರಾ 29 ವಿಕೆಟ್​ ಪಡೆಯುವ ಮೂಲಕ ದಾಖಲೆಯನ್ನು ತನ್ನ ಹೆಸರಿಗೆ ಬರೆದಿದ್ದಾರೆ. ಸುನೀಲ್​ ನರೈನ್​ 24 ವಿಕೆಟ್​, ಆಶೀಶ್​ ನೆಹ್ರಾ ಮತ್ತು ಹರ್ಭಜನ್​ ಸಿಂಗ್​ ತಲಾ 23 ವಿಕೆಟ್​ ಪಡೆದಿದ್ದಾರೆ.

Exit mobile version