ಮುಂಬಯಿ: ಬೆನ್ನುನೋವಿನ ಸಮಸ್ಯೆಯಿಂದಾಗಿ ಹಲವು ತಿಂಗಳುಗಳಿಂದ ಕ್ರಿಕೆಟ್ನಿಂದ ದೂರವಿರುವ ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಮತ್ತೆ ತಂಡ ಸೇರಿಕೊಳ್ಳುವ ಕಾಲ ಸನ್ನಿಹಿತವಾದಂತಿದೆ. ಸಂಪೂರ್ಣ ಚೇತರಿಕೆ ಕಂಡಿರುವ ಬುಮ್ರಾ ಮುಂದಿನ ವರ್ಷ ತವರಿನಲ್ಲೇ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಸರಣಿ ವೇಳೆ ತಂಡ ಸೇರಲಿದ್ದಾರೆ ಎಂದು ವರದಿಯಾಗಿದೆ.
ಬೆನ್ನು ನೋವಿನ ಗಾಯದಿಂದ ಬಳಲಿದ ಬುಮ್ರಾ ಅವರನ್ನು ಏಷ್ಯಾಕಪ್ ಟೂರ್ನಿ ಆರಂಭಕ್ಕೂ ಮುನ್ನವೇ ಭಾರತ ತಂಡದಿಂದ ಕೈಬಿಡಲಾಗಿತ್ತು. ನಂತರ ಟಿ20 ವಿಶ್ವ ಕಪ್‌ಗೂ ಅವರು ಅಲಭ್ಯರಾಗಿದ್ದರು. ಬುಮ್ರಾ ಸೇವೆ ಕಳೆದುಕೊಂಡ ಟೀಮ್ ಇಂಡಿಯಾ ಪ್ರಮುಖ ಕ್ರಿಕೆಟ್ ಟೂರ್ನಿಯಲ್ಲಿ ಸೋಲು ಕಂಡಿತ್ತು.
ಇದೀಗ ಬುಮ್ರಾ ಟೀಮ್ ಇಂಡಿಯಾಕ್ಕೆ ಸೇರಲಿರುವ ಕುರಿತು ಬಿಸಿಸಿಐ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. “ಬುಮ್ರಾ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಅವರು ಆಸ್ಟ್ರೇಲಿಯಾ ವಿರುದ್ಧದ ತವರಿನ ಸರಣಿಯ ಮೂಲಕ ತಂಡಕ್ಕೆ ಮರಳಲಿದ್ದಾರೆ. ಈ ತಿಂಗಳ ಅಂತ್ಯದ ವೇಳೆಗೆ ಬುಮ್ರಾ ಎನ್‌ಸಿಎಗೆ ವರದಿ ಸಲ್ಲಿಸಲಿದ್ದಾರೆ. ವೈದ್ಯಕೀಯ ತಂಡವು ಬುಮ್ರಾ ಅವರ ಆರೋಗ್ಯದ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ನಡೆಸಲಿದೆ” ಎಂದು ಅವರು ಹೇಳಿದ್ದಾರೆ.
ಕಳೆದ ವಾರ ಜಸ್ಪ್ರೀತ್ ಬುಮ್ರಾ ಮೈದಾನದಲ್ಲಿ ಅಭ್ಯಾಸ ನಡೆಸುತ್ತಿರುವ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ತಮ್ಮ ಕಮ್ಬ್ಯಾಕ್ ಬಗ್ಗೆ ಅಪ್ಡೇಟ್ ನೀಡಿದ್ದರು.
ಇದನ್ನೂ ಓದಿ | IND VS BAN | ರೋಹಿತ್ ಶರ್ಮಾ ಬ್ಯಾಟಿಂಗ್ ಸಾಹಸಕ್ಕೆ ಕೋಚ್ ರಾಹುಲ್ ದ್ರಾವಿಡ್ ಮೆಚ್ಚುಗೆ