ಮುಂಬಯಿ: ಬೆನ್ನು ನೋವಿನಿಂದ ಚೇತರಿಕೆ ಕಾಣುತ್ತಿರುವ ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ(Jasprit Bumrah) ಆಸ್ಟ್ರೇಲಿಯಾ(IND VS AUS) ವಿರುದ್ಧದ ಏಕದಿನ ಸರಣಿಯಿಂದ ಹೊರಬಿದ್ದಿದ್ದಾರೆ ಎಂದು ವರದಿಯಾಗಿದೆ.
ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ತಂಡದಲ್ಲಿ ಬುಮ್ರಾ ಸ್ಥಾನ ಪಡೆದಿದ್ದರು. ಆದರೆ ಅವರು ಸಂಪೂರ್ಣ ಫಿಟ್ ಇಲ್ಲದ ಕಾರಣದಿಂದ ಅವರನ್ನು ಟೆಸ್ಟ್ ಸರಣಿಯಿಂದ ಕೈಬಿಡಲಾಗಿತ್ತು. ಇದೀಗ ಏಕ ದಿನ ಸರಣಿಯಿಂದಲೂ ಅವರು ಹೊರಬಿದ್ದಿರುವುದಾಗಿ ಪಿಟಿಐ ವರದಿ ಮಾಡಿದೆ.
2022ರ ಸೆಪ್ಟೆಂಬರ್ ತಿಂಗಳಲ್ಲಿ ವಿಂಡೀಸ್ ವಿರುದ್ಧದ ಸರಣಿಯ ವೇಳೆ ಬುಮ್ರಾಗೆ ಬೆನ್ನು ನೋವು ಕಾಣಿಸಿಕೊಂಡಿತ್ತು. ನಂತರ ಚೇತರಿಸಿಕೊಂಡು ಮೈದಾನಕ್ಕೆ ಇಳಿದರೂ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ವೇಳೆ ಮತ್ತೆ ಬೆನ್ನು ನೋವಿನ ಸಮಸ್ಯೆಗೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಅವರು ಏಷ್ಯಾಕಪ್ ಹಾಗೂ ಟಿ20 ವಿಶ್ವ ಕಪ್ ಟೂರ್ನಿಗಳಿಗೂ ಅಲಭ್ಯರಾಗಿದ್ದರು.
ಇದನ್ನೂ ಓದಿ IND VS AUS: ಆಸೀಸ್ ವಿರುದ್ಧದ ದ್ವಿತೀಯ ಟೆಸ್ಟ್ಗೂ ಶ್ರೇಯಸ್ ಅಯ್ಯರ್ ಅನುಮಾನ
ಸರಿ ಸುಮಾರು 7ರಿಂದ 8 ತಿಂಗಳುಗಳ ಕಾಲ ಕ್ರಿಕೆಟ್ನಿಂದ ದೂರ ಉಳಿದಿದ್ದ ಬುಮ್ರಾ ಬೆನ್ನು ನೋವಿನಿಂದ ಚೇತರಿಕೆ ಕಂಡು ಆಸೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅವಕಾಶ ಪಡೆದಿದ್ದರು. ಈ ಮೂಲಕ ತಂಡಕ್ಕೆ ಮರಳುವ ಸೂಚನೆ ನೀಡಿದ್ದರು. ಆದರೆ ಬಿಸಿಸಿಐ ಇದೇ ವರ್ಷ ಭಾರತದಲ್ಲಿ ನಡೆಯುವ ಏಕದಿನ ವಿಶ್ವ ಕಪ್ ಟೂರ್ನಿಯ ದೃಷ್ಟಿಯಲ್ಲಿ ಬುಮ್ರಾ ಅವರಿಗೆ ಇನ್ನೂ ಕೆಲ ಕಾಲ ವಿಶ್ರಾಂತಿ ನೀಡಲು ಬಯಸಿದೆ. ಇದೇ ಕಾರಣದಿಂದ ಅವರನ್ನು ಆಸೀಸ್ ವಿರುದ್ಧದ ಟೆಸ್ಟ್ ಮತ್ತು ಏಕದಿನ ಸರಣಿಯಿಂದ ಅವರನ್ನು ಕೈ ಬಿಡಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.