Site icon Vistara News

Asia Cup 2023 : ನೇಪಾಳ ವಿರುದ್ಧ ಪಂದ್ಯದ ವೇಳೆ ದಾಖಲೆ ಬರೆಯಲಿದ್ದಾರೆ ಮಾಜಿ ವೇಗಿ ಜಾವಗಲ್​ ಶ್ರೀನಾಥ್!

Javagal Srinath

ಪಲ್ಲೆಕೆಲೆ: ಐಸಿಸಿ ಎಲೈಟ್ ಪ್ಯಾನಲ್ ಆಫ್ ಮ್ಯಾಚ್ ರೆಫರಿಗಳ ಸದಸ್ಯರಾಗಿರುವ ಜಾವಗಲ್ ಶ್ರೀನಾಥ್ ಸೋಮವಾರ ಪಲ್ಲೆಕೆಲೆಯಲ್ಲಿ ನಡೆಯಲಿರುವ ಭಾರತ ಮತ್ತು ನೇಪಾಳ ನಡುವಿನ ಏಷ್ಯಾ ಕಪ್ 2023 ರ ಪಂದ್ಯದಲ್ಲಿ ತಮ್ಮ 250 ನೇ ಪುರುಷರ ಏಕದಿನ ಅಂತರರಾಷ್ಟ್ರೀಯ (ಒಡಿಐ) ಪಂದ್ಯದಲ್ಲಿ ರೆಫರಿ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಈ ಮೂಲಕ ಅವರು ರೆಫರಿ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಲಿದ್ದಾರೆ. ಭಾರತ ತಂಡದ ಪರವಾಗಿ ಬೌಲಿಂಗ್​ನಲ್ಲಿ ಅಸಾಮಾನ್ಯ ಸಾಧನೆ ಮಾಡಿ ಮಿಂಚಿದ್ದ ಅವರು ಇದೀಗ ರೆಫರಿಯಾಗಿಯೂ ಹೊಸ ಮೈಲುಗಲ್ಲು ಸ್ಥಾಪನೆ ಮಾಡಿದ್ದಾರೆ.

ಭಾರತದ ಮಾಜಿ ವೇಗದ ಬೌಲರ್ ಶ್ರೀನಾಥ್ 67 ಟೆಸ್ಟ್ ಪಂದ್ಯಗಳಲ್ಲಿ 236 ವಿಕೆಟ್ ಮತ್ತು 229 ಏಕದಿನ ಪಂದ್ಯಗಳಲ್ಲಿ 315 ವಿಕೆಟ್ ಪಡೆದಿದ್ದಾರೆ. 2003ರಲ್ಲಿ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಸಮಯದಲ್ಲಿ ಅವರು ಭಾರತೀಯ ತಂಡದ ಸದಸ್ಯರಾಗಿದ್ದರು. ಮೂರು ವರ್ಷಗಳ ನಂತರ ಅವರು ಐಸಿಸಿ ಮ್ಯಾಚ್ ರೆಫರಿಯಾದರು.

ರಂಜನ್ ಮದುಗಲೆ, ಕ್ರಿಸ್ ಬ್ರಾಡ್ ಮತ್ತು ಜೆಫ್ ಕ್ರೋವ್ ನಂತರ 250 ಏಕದಿನ ಪಂದ್ಯಗಳಲ್ಲಿ ಈ ಮೈಲಿಗಲ್ಲನ್ನು ತಲುಪಿದ ನಾಲ್ಕನೇ ಮ್ಯಾಚ್ ರೆಫರಿ ಎಂಬ ಹೆಗ್ಗಳಿಕೆಗೆ ಶ್ರೀನಾಥ್ ಪಾತ್ರರಾಗಲಿದ್ದಾರೆ. “ಮ್ಯಾಚ್ ರೆಫರಿಯಾಗಿ ಈ ಮೈಲಿಗಲ್ಲನ್ನು ತಲುಪುತ್ತಿರುವುದು ಸಂತಸ ತಂದಿದೆ. ಇದು ನನಗೆ 17 ವರ್ಷಗಳ ಸರ್ಕೀಟ್​ ಆಗಿದೆ ಮತ್ತು ನಾನು ಆಡಿದ್ದಕ್ಕಿಂತ ಹೆಚ್ಚು ಏಕದಿನ ಪಂದ್ಯಗಳಲ್ಲಿ ರೆಫರಿಯಾಗಿ ಕಾರ್ಯನಿರ್ವಹಿಸಿದ್ದೇನೆ ಎಂದು ನಂಬಲು ಸಾಧ್ಯವಿಲ್ಲ”ಎಂದು ಶ್ರೀನಾಥ್ ಸಂತಸ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Asia Cup 2023 : ಏಕಾಏಕಿ ಲಂಕಾದಿಂದ ವಾಪಸ್​ ಬಂದ ವೇಗಿ ಜಸ್​ಪ್ರಿತ್​ ಬುಮ್ರಾ; ಮತ್ತೆ ಗಾಯಗೊಂಡರೇ?

ಐಸಿಸಿ, ಬಿಸಿಸಿಐ, ಎಲೈಟ್ ಪ್ಯಾನೆಲ್ನಲ್ಲಿರುವ ನನ್ನ ಸಹೋದ್ಯೋಗಿಗಳು ಮತ್ತು ಈ ಪ್ರಯಾಣದಲ್ಲಿ ನನ್ನೊಂದಿಗೆ ಇದ್ದ ಹತ್ತಿರದ ಮತ್ತು ಆತ್ಮೀಯರಿಗೆ ಧನ್ಯವಾದಗಳನ್ನು ಅರ್ಪಿಸಲು ನಾನು ಈ ಅವಕಾಶವನ್ನು ಬಳಸಿಕೊಳ್ಳಲು ಬಯಸುತ್ತೇನೆ.

ಪಂದ್ಯಕ್ಕೆ ಮಳೆ ಅಡಚಣೆ ಸಾಧ್ಯತೆ?

ಭಾರತ ಹಾಗೂ ನೇಪಾಳ ನಡುವಿನ ಏಷ್ಯಾ ಕಪ್​ ಲೀಗ್ ಹಂತದ ಪಂದ್ಯ ಸೋಮವಾರ (ಸೆಪ್ಟೆಂಬರ್​4ರಂದು) ಇಲ್ಲಿನ ಪಲ್ಲೆಕೆಲೆ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯಲಿದೆ. ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಪಂದ್ಯವೂ ಇದೇ ಸ್ಟೇಡಿಯಮ್​ನಲ್ಲಿ ನಡೆದಿತ್ತು. ಆದರೆ ಆ ಪಂದ್ಯವು ಒಂದು ಇನಿಂಗ್ಸ್​ ಮುಕ್ತಾಯಗೊಂಡ ತಕ್ಷಣ ಮಳೆಯಿಂದಾಗಿ ಟೈ ಆಗಿತ್ತು. ಇತ್ತಂಡಗಳು ತಲಾ ಒಂದೊಂದು ಅಂಕಗಳನ್ನು ಹಂಚಿಕೊಳ್ಳುವ ಅನಿವಾರ್ಯತೆ ಎದುರಿಸಿದವು. ಹೀಗಾಗಿ ಸೋಮವಾರ ಪಂದ್ಯಕ್ಕೂ ಮಳೆ ಅಡಚಣೆ ಮಾಡಬಹುದೇ ಎಂಬ ಅನುಮಾನ ಕ್ರಿಕೆಟ್​ ಅಭಿಮಾನಿಗಳಿಗೆ ಉಂಟಾಗಿದೆ.

ಭಾರತ, ನೇಪಾಳ ಹಾಗೂ ಪಾಕಿಸ್ತಾನ ತಂಡ ಟೂರ್ನಿಯ ಏ ಗುಂಪಿನಲ್ಲಿದೆ. ಈ ಮೂರು ತಂಡಗಳಲ್ಲಿ ಎರಡು ತಂಡಗಳು ಸೂಪರ್​-4 ಹಂತಕ್ಕೆ ಪ್ರವೇಶ ಪಡೆಯುತ್ತವೆ. ಮೊದಲ ಪಂದ್ಯದಲ್ಲಿ ನೇಪಾಳ ವಿರುದ್ಧದ ಭರ್ಜರಿ ಜಯ ಹಾಗೂ ಭಾರತ ವಿರುದ್ಧದ ಪಂದ್ಯ ಟೈ ಆದ ಹೊರತಾಗಿಯೂ ಪಾಕಿಸ್ತಾನ ತಂಡ ಸೂಪರ್​-4 ಹಂತಕ್ಕೆ ತೇರ್ಗಡೆಗೊಂಡಿದೆ. ಇನ್ನು ಅವಕಾಶ ಇರುವುದು ಭಾರತ ಮತ್ತು ನೇಪಾಳ ತಂಡಕ್ಕೆ.

ಶನಿವಾರದ ಪಂದ್ಯ ಟೈ ಆದ ಹೊರತಾಗಿಯೂ ಎ ಗುಂಪಿನ ಅಂಕಪಟ್ಟಿಯಲ್ಲಿ ಭಾರತ ತಂಡ ಎರಡನೇ ಸ್ಥಾನದಲ್ಲಿದೆ. ಭಾರತಕ್ಕೆ 1 ಅಂಕಗಳು ಲಭಿಸಿರುವ ಕಾರಣ ಆ ಸ್ಥಾನ ಪಡೆದುಕೊಂಡಿದೆ. ಇನ್ನು ನೇಪಾಳ ಮೊದಲ ಪಂದ್ಯದಲ್ಲಿ ಸೋತಿರುವ ಕಾರಣ ಶೂನ್ಯ ಅಂಕದಲ್ಲಿದೆ. ಒಂದು ವೇಳೆ ಮಳೆ ಬಂದು ಪಂದ್ಯ ರದ್ದಾದರೆ ಸೂಪರ್​-4 ಹಂತಕ್ಕೇರುವ ಅವಕಾಶ ಭಾರತಕ್ಕೆ ಇದೆ. ಯಾಕೆಂದರೆ ಭಾರತಕ್ಕೆ ಎರಡನೇ ಸ್ಥಾನದಲ್ಲಿಯೇ ಮುಂದುವರಿಯುತ್ತದೆ ಹಾಗೂ ನೇಪಾಳ ಸ್ಥಾನ ಕಳೆದುಕೊಳ್ಳುತ್ತದೆ. ಪಂದ್ಯ ಆರಂಭಗೊಂಡು ಮಧ್ಯದಲ್ಲಿ ಟೈ ಆದರೂ ತಲಾ ಒಂದೊಂದು ಅಂಕ ಸಿಕ್ಕಿದಾಗ ಭಾರತಕ್ಕೆ ಅವಕಾಶವಿದೆ.

Exit mobile version