ಮುಂಬಯಿ: ಭಾರತ ಕ್ರಿಕೆಟ್(Team India Cricket) ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್(Rahul Dravid) ಅವರ ಕೋಚಿಂಗ್ ಒಪ್ಪಂದದ ಅವಧಿ ಮುಗಿದ್ದಿದ್ದರೂ ಅವರನ್ನು ಮುಂದಿನ ವರ್ಷ ನಡೆಯುವ ಟಿ20 ವಿಶ್ವಕಪ್ ಟೂರ್ನಿಯವರೆಗೆ ವಿಸ್ತಾರಿಸಲಾಗಿದೆ ಎಂದು ಕೆಲ ದಿನಗಳ ಹಿಂದೆ ಬಿಸಿಸಿಐ ಹೇಳಿತ್ತು. ಇದೀಗ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ(jay shah) ಅವರು ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023ರ ನಂತರ ರಾಹುಲ್ ದ್ರಾವಿಡ್ ಅವರ ಕೋಚಿಂಗ್ ಒಪ್ಪಂದದ ಅವಧಿ ಮುಗಿದಿತ್ತು. ಆದರೆ ಬಿಸಿಸಿಐ ರಾಹುಲ್ ದ್ರಾವಿಡ್ ಅವರೊಂದಿಗೆ ಚರ್ಚೆ ನಡೆಸಿ ಅವರನ್ನು 2024ರ ಟಿ20 ವಿಶ್ವಕಪ್ ತನಕ ಕೋಚಿಂಗ್ ನಡೆಸುವಂತೆ ಕೇಳಿಕೊಂಡಿತ್ತು. ಇದನ್ನು ಬಿಸಿಸಿಐ ಅಧಿಕೃತ ಹೇಳಿಕೆಯಲ್ಲಿ ತಿಳಿಸಿತ್ತು.
ಇದೀಗ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಈ ಬಗ್ಗೆ ಮಾತನಾಡಿ, ಭಾರತ ತಂಡದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿಯನ್ನು ದಕ್ಷಿಣ ಆಫ್ರಿಕಾ ಪ್ರವಾಸ ಮುಗಿದ ಬಳಿಕ ನಿರ್ಧರಿಸಲಾಗುವುದು ಎಂದು ಅವರು ಪಿಟಿಐಗೆ ತಿಳಿಸಿದ್ದಾರೆ.
“ನಾವು ರಾಹುಲ್ ದ್ರಾವಿಡ್ ಅವರಿಗೆ ಕೋಚಿಂಗ್ ಅವಧಿಯ ವಿಸ್ತರಣೆಯನ್ನು ನೀಡಿದ್ದೇವೆ ಆದರೆ ನಾವು ಇನ್ನೂ ಅಂತಿಮ ಒಪ್ಪಂದವನ್ನು ಮಾಡಿಕೊಂಡಿಲ್ಲ. ಏಕದಿನ ವಿಶ್ವಕಪ್ ಮುಗಿದ ಬಳಿಕ ಅವರೊಂದಿಗೆ ನಾನು ಮತ್ತು ಬಿಸಿಸಿಐ ಅಧಿಕಾರಿಗಳು ಸಭೆ ನಡೆಸಿದ್ದೆವು. ಮುಂದುವಿಕೆಗೆ ನಾವು ಪರಸ್ಪರ ಒಪ್ಪಿಕೊಂಡಿದ್ದೇವೆ. ಆದರೆ ಇದು ಅಧಿಕೃತಗೊಂಡಿಲ್ಲ. ಅವರು ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದ ಬಳಿಕ ಸ್ಪಷ್ಟ ನಿರ್ಧಾರ ಪ್ರಕಟಗೊಳ್ಳಲಿದೆ” ಎಂದು ಶಾ ಹೇಳಿದ್ದಾರೆ.
ದ್ರಾವಿಡ್ ಒಪ್ಪದಿದ್ದರೆ…
ಮೂಲಗಳ ಪ್ರಕಾರ ದ್ರಾವಿಡ್ ಕೋಚ್ ಆಗಿ ಮುಂದುವರಿಯಲು ಮನಸ್ಸು ಮಾಡುತ್ತಿಲ್ಲ ಎನ್ನಲಾಗಿದೆ. ಒಂದೊಮ್ಮೆ ಅವರು ದಕ್ಷಿಣ ಆಫ್ರಿಕಾ ಸರಣಿಯ ಬಳಿಕ ಕೋಚಿಂಗ್ ಹುದ್ದೆ ಮುಂದುವರಿಸದಿದ್ದರೆ, ವಿವಿಎಸ್ ಲಕ್ಷ್ಮಣ್(VVS Laxman) ಅವರು ತಂಡದ ನೂತನ ಕೋಚ್ ಆಗಿ ಅಧಿಕಾರ ವಹಿಸಿಕೊಳ್ಳಬಹುದು. ಏಕೆಂದರೆ ಈಗಾಗಕೇ ಅವರು ದ್ರಾವಿಡ್ ಅನುಪಸ್ಥಿತಿಯಲ್ಲಿ ಹಂಗಾಮಿಯಾಗಿ ಕೋಚಿಂಗ್ ಮಾಡಿದ್ದರು. ಅಲ್ಲದೆ ಬಿಸಿಸಿಐ ಕೂಡ ಅವರನ್ನೇ ಮುಂದಿನ ಕೋಚ್ ಎಂದು ನಿರ್ಧರಿಸಿದೆ.
ಇದನ್ನೂ ಓದಿ Rahul Dravid : ರಿಚ್ಮಂಡ್ ಸರ್ಕಲ್ ಫ್ಲೈಓವರ್ ಕೆಳಗಡೆ ಕ್ರಿಕೆಟ್ ಅಡಿದ ದ್ರಾವಿಡ್, ಕುಂಬ್ಳೆ, ಶ್ರೀನಾಥ್…
ರಾಹುಲ್ ದ್ರಾವಿಡ್ ಅವರು 2021ರ ಟಿ-20 ವಿಶ್ವಕಪ್ ಬಳಿಕ ಅಂದರೆ, ನವೆಂಬರ್‌ನಲ್ಲಿ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಇವರ ಅವಧಿಯಲ್ಲಿ ಭಾರತ ತಂಡವು 2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್, ಏಕದಿನ ವಿಶ್ವಕಪ್ ಫೈನಲ್ ಪ್ರವೇಶಿಸಿತ್ತು. ಕೆಲ ತಿಂಗಳ ಹಿಂದೆ ನಡೆದ ಏಷ್ಯಾಕಪ್‌ನಲ್ಲಿ ಭಾರತ ತಂಡ ಚಾಂಪಿಯನ್ ಆಗಿತ್ತು. ಆದರೆ, ವಿಶ್ವಕಪ್ ಫೈನಲ್ ಸೋಲಿನ ಬಳಿಕ ರಾಹುಲ್ ದ್ರಾವಿಡ್ ಅವರು ಕೋಚ್ ಹುದ್ದೆಯಲ್ಲಿ ಮುಂದುವರಿಯಲು ಇಷ್ಟಪಡುತ್ತಿಲ್ಲ.
ಯೋಚನೆ ಇಲ್ಲ ಎಂದಿದ್ದ ದ್ರಾವಿಡ್
ವಿಶ್ವಕಪ್ ಸೋಲಿನ ಬಳಿಕ ಮಾಧ್ಯಮದವರ ಜತೆ ಮಾತನಾಡಿದ್ದ ರಾಹುಲ್ ದ್ರಾವಿಡ್, “ಕೋಚ್ ಹುದ್ದೆಯಲ್ಲಿ ಮುಂದುವರಿಯುವ ಅಥವಾ ತೊರೆಯುವ ಕುರಿತು ಇನ್ನೂ ಯೋಚಿಸಿಲ್ಲ” ಎಂದು ಹೇಳಿದ್ದರು.
ಮುಂದಿನ ವರ್ಷದ ಜೂನ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಭಾರತ ಆಡಬೇಕಾಗಿದೆ. ಈ ಟೂರ್ನಿಯವರೆಗೂ ಟೀಮ್ ಇಂಡಿಯಾದ ಕೋಚ್ ಆಗಿ ಉಳಿಯಲು ಬಯಸುತ್ತೀರಾ? ಎಂದು ದ್ರಾವಿಡ್ ಅವರನ್ನು ಮಾಧ್ಯಮದವರು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ ದ್ರಾವಿಡ್, “ನಾನು ಇದರ ಬಗ್ಗೆ ಇನ್ನೂ ಯೋಚಿಸಿಲ್ಲ. ಸಮಯ ಸಿಕ್ಕಾಗ ನಿರ್ಧಾರ ಮಾಡುತ್ತೇನೆ” ಎಂದಷ್ಟೇ ಹೇಳಿದ್ದರು.