Site icon Vistara News

ಹಾರ್ದಿಕ್‌ಗೆ ಮುಂಬೈ ನಾಯಕತ್ವ ನೀಡಿದ್ದನ್ನು ಸಮರ್ಥಿಸಿಕೊಂಡ ಜಯವರ್ಧನೆ

mahela jayawardene

ಮುಂಬಯಿ: ರೋಹಿತ್​ ಶರ್ಮಾ(rohit sharma) ಅವರನ್ನು ನಾಯಕನ ಸ್ಥಾನದಿಂದ ಕೆಳಗಿಳಿಸಿ ಹಾರ್ದಿಕ್​ ಪಾಂಡ್ಯಗೆ ನಾಯಕತ್ವ ನೀಡಿದ ಕುರಿತು ಫ್ರಾಂಚೈಸಿಯ ಜಾಗತಿಕ ಕ್ರಿಕೆಟ್ ಮುಖ್ಯಸ್ಥ ಮಹೇಲ ಜಯವರ್ಧನೆ(Mahela Jayawardene) ಸ್ಪಷ್ಟನೆ ನೀಡಿದ್ದಾರೆ. ಮುಂಬೈ ಇಂಡಿಯನ್ಸ್‌ನ(mumbai indians) ಭವಿಷ್ಯಕ್ಕಾಗಿ ಹಾರ್ದಿಕ್​ಗೆ ನಾಯಕತ್ವ ನೀಡುವುದು ಅನಿವಾರ್ಯವಾಗಿತ್ತು ಎಂದು ಸಮರ್ಥಿಸಿಕೊಂಡಿದ್ದಾರೆ.

ಸಂದರ್ಶನದಲ್ಲಿ ಮಾತನಾಡಿದ ಜಯವರ್ಧನೆ, ‘ರೋಹಿತ್‌ ಅವರನ್ನು ನಾಯಕತ್ವದಿಂದ ಕೆಳಗಿಳಿಸಿದ್ದು ಕಠಿಣ ನಿರ್ಧಾರ. ಆದರೆ ಇದು ಅನಿವಾರ್ಯವಾಗಿತ್ತು. ತಂಡದ ಮುಂದಿನ ಭವಿಷ್ಯ ನೋಡಿ ಈ ನಿರ್ಧಾರ ಕೈಗೊಂಡಿದ್ದೇವೆ. ರೋಹಿತ್ ಯಾವತ್ತೂ ತಂಡದ ಜತೆಗಿದ್ದು ಮಾರ್ಗದರ್ಶನ ನೀಡುತ್ತಾರೆ’ ಎಂದು ತಿಳಿಸಿದ್ದಾರೆ.

ಯಾರು ಏನೇ ಹೇಳಿ ಸಮರ್ಥಿಸಿಕೊಂಡರೂ ಕೂಡ ರೋಹಿತ್​ ಅವರ ಅಭಿಮಾನಿಗಳು ಹಾಗೂ ಕ್ರಿಕೆಟ್​ ಪ್ರಿಯರು ಫ್ರಾಂಚೈಸಿಯ ಈ ನಿರ್ಧಾರವನ್ನು ಖಂಡಿಸಿದ್ದಾರೆ. 5 ಬಾರಿ ಟ್ರೋಫಿ ಗೆದ್ದ ನಾಯಕನನ್ನು ಈ ರೀತಿ ಏಕಾಏಕಿ ತಂಡದಿಂದ ಕೈಬಿಡಿರುವುದು ಸರಿಯಲ್ಲ. ಅವರಿಗೆ ಮತ್ತೆ ನಾಯಕನ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಕೆಲ ಅಭಿಮಾನಿಗಳು ಮುಂಬೈ ಇಂಡಿಯನ್ಸ್​ ತಂಡದ ಜೆರ್ಸಿಯನ್ನು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದರು. ಇದರ ವಿಡಿಯೊ ಮತ್ತು ಫೋಟೊಗಳು ವೈರಲ್ ಆಗಿತ್ತು.

ರೋಹಿತ್​ ಅವರನ್ನು ನಾಯಕನ ಸ್ಥಾನದಿಂದ ಕೆಳಗಿಳಿಸಿದ ವಿಚಾರದಲ್ಲಿ ಕೇವಲ ಅಭಿಮಾನಿಗಳು ಮಾತ್ರವಲ್ಲದೆ ತಂಡದ ಸಹ ಆಟಗಾರರಾದ ಜಸ್​ಪ್ರೀತ್​ ಬುಮ್ರಾ, ಸೂರ್ಯಕುಮಾರ್​ ಯಾದವ್​ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಫ್ರಾಂಚೈಸಿಗೆ ತಿವಿದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಿಗೂಢ ಅರ್ಥದ ಪೋಸ್ಟ್​ ಮಾಡುವ ಮೂಲಕ ತಮ್ಮ ಅಸಮಾಧಾನವನ್ನು ಪರೋಕ್ಷವಾಗಿ ಹೊರಹಾಕಿದ್ದರು.

ಇದನ್ನೂ ಓದಿ IPL 2024: ‘ಆರ್​ಸಿಬಿಗೆ ಒಂದು ಕಪ್​ ಗೆಲ್ಲಿಸಿ ಕೊಡಿ’; ಧೋನಿಗೆ ಮನವಿ ಮಾಡಿದ ಅಭಿಮಾನಿ

ಟಿ20 ವಿಶ್ವಕಪ್​ಗೂ ರೋಹಿತ್​ ನಾಯಕ!

ಕಳೆದ ಒಂದು ವರ್ಷದಿಂದ ಭಾರತ ಪರ ಟಿ20 ಪಂದ್ಯ ಆಡದಿದ್ದರೂ, ಐಪಿಎಲ್‌ನ ಮುಂಬೈ ಇಂಡಿಯನ್ಸ್‌ ತಂಡದ ನಾಯಕತ್ವ ಕಳೆದುಕೊಂಡರೂ 2024ರ ಟಿ20 ವಿಶ್ವಕಪ್‌ಗೆ ಭಾರತ ತಂಡದ ನಾಯಕನ ಸ್ಥಾನಕ್ಕೆ ರೋಹಿತ್‌ ಶರ್ಮಾ ಅವರೇ ಬಿಸಿಸಿಐ ಮುಂದಿರುವ ಮೊದಲ ಆಯ್ಕೆ ಎಂದು ವರದಿಯಾಗಿದೆ. ಏಕದಿನ ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಸೋತರೂ ಕೂಡ ಟೂರ್ನಿಯುದ್ದಕ್ಕೂ ಅವರ ನಾಯಕತ್ವದಲ್ಲಿ ತಂಡ ಶ್ರೇಷ್ಠ ಪ್ರದರ್ಶನ ತೋರಿತ್ತು. ಜತೆಗೆ ಮೂರು ಮಾದರಿಯ ಕ್ರಿಕೆಟ್​ನಲ್ಲಿಯೂ ಅವರ ನಾಯಕತ್ವದಡಿ ತಂಡ ಉತ್ತಮವಾಗಿ ಆಡಿದೆ. ಹೀಗಾಗಿ ಅವರನ್ನೇ ಟಿ20 ವಿಶ್ವಕಪ್‌ಗೂ ನಾಯಕನಾಗಿ ಮುಂದುವರಿಸಲು ಬಿಸಿಸಿಐ ಆಯ್ಕೆ ಸಮಿತಿ ಒಲವು ತೋರಿದೆ ಎಂದು ಹೇಳಲಾಗುತ್ತಿದೆ. ಆದರೆ ರೋಹಿತ್​ ಅವರು ಇದನ್ನು ಒಪ್ಪಿಕೊಳ್ಳುತ್ತಾರೋ ಎನ್ನುವುದನ್ನು ಕಾದು ನೋಡಬೇಕಿದೆ.

Exit mobile version