ಮುಂಬಯಿ: ಭಾರತ ತಂಡದ ವೇಗದ ಬೌಲರ್ ಜಯದೇವ್ ಉನಾದ್ಕಟ್ ಅವರನ್ನು ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಿಂದ ಬಿಡುಗಡೆಗೊಳಿಸಲಾಗಿದೆ. ಬಿಸಿಸಿಐ ಈ ಕುರಿತು ಟ್ವೀಟ್ ಮಾಡಿದ್ದು, ರಣಜಿ ಟ್ರೋಫಿ ಫೈನಲ್ನಲ್ಲಿ ಆಡುವ ಉದ್ದೇಶದಿಂದ ಅವರನ್ನು ತಂಡದಿಂದ ಬಿಡುಗಡೆಗೊಳಿಸಲಾಗಿದೆ ಎಂದು ಬರೆದುಕೊಂಡಿದೆ. ಕರ್ನಾಟಕವನ್ನು ಸೋಲಿಸಿರುವ ಸೌರಾಷ್ಟ್ರ ತಂಡ ರಣಜಿ ಟ್ರೋಫಿ 2022-23ನೇ ಆವೃತ್ತಿಯ ಫೈನಲ್ಗೇರಿದೆ. ಫೆಬ್ರವರಿ 17ರಂದು ಆರಂಭವಾಗಲಿರುವ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಬೆಂಗಾಲ್ ತಂಡಕ್ಕೆ ಎದುರಾಗಲಿದೆ.
ಉನಾದ್ಕಟ್ ಭಾರತ ತಂಡಕ್ಕೆ ಆಯ್ಕೆಯಾಗುವ ಮೊದಲು ಸೌರಾಷ್ಟ್ರ ತಂಡದ ನಾಯಕರಾಗಿದ್ದರು. ಆದರೆ, ಅವರು ಭಾರತ ತಂಡಕ್ಕೆ ಆಯ್ಕೆಯಾಗುತ್ತಿದ್ದಂತೆ ಅರ್ಪಿತ್ ವಸವಾಡ ಸೆಮಿಫೈನಲ್ನಲ್ಲಿ ತಂಡವನ್ನು ಮುನ್ನಡೆಸಿದ್ದರು. ಅದೇ ರೀತಿ ಒಂದು ಪಂದ್ಯದಲ್ಲಿ ಸ್ಪಿನ್ ಬೌಲರ್ ರವೀಂದ್ರ ಜಡೇಜಾ ಕೂಡ ಸೌರಾಷ್ಟ್ರ ತಂಡದ ನೇತೃತ್ವ ವಹಿಸಿದ್ದರು. ಇದೀಗ ತಂಡ ಫೈನಲ್ಗೆ ಹೋಗಿರುವ ಕಾರಣ ಉನಾದ್ಕಟ್ ಮತ್ತೆ ನೇತೃತ್ವ ವಹಿಸಲು ಬಯಸಿದ್ದಾರೆ. ಹೀಗಾಗಿ ಅವರನ್ನು ಬಿಸಿಸಿಐ ಬಿಡುಗಡೆಗೊಳಿಸಿದೆ.
ಇದನ್ನು ಓದಿ : Ranji Trophy: ಸೌರಾಷ್ಟ್ರ ವಿರುದ್ಧ ನಾಲ್ಕು ವಿಕೆಟ್ ಸೋಲು ಕಂಡ ಕರ್ನಾಟಕ; ಟೂರ್ನಿಯಿಂದ ಔಟ್
ಉನಾದ್ಕಟ್ ಅವರ ಆಗಮನದಿಂದ ಸೌರಾಷ್ಟ್ರ ತಂಡದ ವಿಶ್ವಾಸವೂ ಹೆಚ್ಚಾಗಲಿದೆ. ಯಾಕೆಂದರೆ ಹಾಲಿ ಆವೃತ್ತಿಯ ರಣಜಿ ಟ್ರೋಫಿಯಲ್ಲಿ ಜಯದೇವ್ 17 ವಿಕೆಟ್ಗಳನ್ನು ಕಬಳಿಸಿದ್ದಾರೆ. 39ಕ್ಕೆ 8 ವಿಕೆಟ್ ಅವರ ಬೆಸ್ಟ್ ಬೌಲಿಂಗ್ ಆಗಿದೆ.
ಬೆಂಗಳೂರಿನಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಸೌರಾಷ್ಟ್ರ ತಂಡ ನಾಲ್ಕು ವಿಕೆಟ್ ವಿಜಯ ಸಾಧಿಸಿತ್ತು. ಮೊದಲು ಬ್ಯಾಟ್ ಮಾಡಿದ ಕರ್ನಾಟಕ ತಂಡ 407 ರನ್ ಬಾರಿಸಿತ್ತು. ಪ್ರತಿಯಾಗಿ ಸೌರಾಷ್ಟ್ರ 527 ರನ್ ಬಾರಿಸಿತ್ತು. ಕರ್ನಾಟಕ ತಂಡದ ಎರಡನೇ ಇನಿಂಗ್ಸ್ನಲ್ಲಿ 234 ರನ್ಗಳಿಗೆ ಆಲ್ಔಟ್ ಆಗಿತ್ತು. 115 ರನ್ಗಳ ಗೆಲುವಿನ ಗುರಿಯನ್ನು ಸೌರಾಷ್ಟ್ರ ತಂಡ ಆರು ವಿಕೆಟ್ ಕಳೆದುಕೊಂಡು ದಾಟಿತ್ತು.