Site icon Vistara News

Team India : ಭಾರತ ಮಹಿಳೆಯರ ತಂಡದ ಮಾಜಿ ವೇಗದ ಬೌಲರ್‌ಗೆ ವಿಶ್ವ ಕ್ರಿಕೆಟ್‌ನ ವಿಶೇಷ ಗೌರವ

jhulan Goswamy

ಮುಂಬಯಿ: ಭಾರತ ಮಹಿಳೆಯರ ಕ್ರಿಕೆಟ್‌ ತಂಡದ (Team India ) ಮಾಜಿ ವೇಗದ ಬೌಲರ್ ಜೂಲನ್ ಗೋಸ್ವಾಮಿ (Jhulan Goswami) ವಿಶ್ವ ಕ್ರಿಕೆಟ್‌ ಮತ್ತೊಂದು ಗೌರವವನ್ನು ಪಡೆದುಕೊಂಡಿದ್ದಾರೆ. ತಂಡದ ಮಾಜಿ ನಾಯಕಿ ಈಗ ಎಂಸಿಸಿ (Marylebone Cricket Club) ವಿಶ್ವ ಕ್ರಿಕೆಟ್ ಸಮಿತಿಯ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಕ್ರಿಕೆಟ್‌ನ ನೀತಿ ನಿಯಮಗಳನ್ನು ರೂಪಿಸುವಲ್ಲಿ ಪ್ರಧಾನ ಪಾತ್ರ ವಹಿಸುವ ಈ ಕ್ಲಬ್‌ನ ಸಮಿತಿಯ ಸದಸ್ಯರಾಗುವುದು ಗೌರವ ವಿಚಾರ. ಹಲವು ವರ್ಷಗಳ ಕಾಲ ಭಾರತ ತಂಡವನ್ನು ಪ್ರತಿನಿಧಸುವ ಮೂಲಕ ವಿಶ್ವ ಕ್ರಿಕೆಟ್‌ಗೆ ಗಮನಾರ್ಹ ಕೊಡುಗೆ ನೀಡಿದ್ದ ಜೂಲನ್‌ ಅವರಿಗೆ ಈ ಸದಸ್ಯತ್ವ ಮೂಲಕ ವಿಶೇಷ ಗೌರವ ಲಭಿಸಿದೆ.

ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ (Sourav Ganguly) ಕೂಡ ಸಮಿತಿಯ ಸದಸ್ಯರಾಗಿದ್ದಾರೆ. ಇಂಗ್ಲೆಂಡ್ ಮಹಿಳಾ ತಂಡದ ನಾಯಕಿ ಹೇದರ್ ನೈಟ್ ಮತ್ತು ಮಾಜಿ ವಿಶ್ವಕಪ್ ವಿಜೇತ ನಾಯಕ ಇಯಾನ್ ಮಾರ್ಗನ್ ಕೂಡ ಹೊಸ ಸಮಿತಿಯಲ್ಲಿ ಸೇರಿಕೊಂಡಿದ್ದಾರೆ. ಇಂಗ್ಲೆಂಡ್ ತಂಡದ ಮಾಜಿ ನಾಯಕ ಅಲೆಸ್ಟರ್ ಕುಕ್ ಕೌಂಟಿ ಕ್ರಿಕೆಟ್‌ನಲ್ಲಿ ಆಡಲು ಮುಂದಾದ ಕಾರಣ ಅವರು ಸಮಿತಿಯನ್ನು ತ್ಯಜಿಸಿದ್ದಾರೆ.

ಜೂಲನ್, ಹೇದರ್ ಮತ್ತು ಇಯಾನ್ ಅವರನ್ನು ವಿಶ್ವ ಕ್ರಿಕೆಟ್ ಸಮಿತಿಗೆ ಸ್ವಾಗತಿಸಲು ನಾವು ರೋಮಾಂಚನಗೊಂಡಿದ್ದೇವೆ. ಈ ಮೂವರು ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯುನ್ನತ ಸಾಧನೆ ಮಾಡಿದ್ದಾರೆ. ಕ್ರಿಕೆಟ್‌ ಕ್ಷೇತ್ರವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಬಗ್ಗೆ ಅವರಿಗಿರು ಜ್ಞಾನವು ಸಮಿತಿಗೆ ಪೂರಕವಾಗಿದೆ ಎಂದು ಸಮಿತಿಯ ಅಧ್ಯಕ್ಷ ಮೈಕ್ ಗ್ಯಾಟಿಂಗ್ ಈ ಕುರಿತು ಹೇಳಿಕೆ ಪ್ರಕಟಿಸಿದ್ದಾರೆ.

ಎಂಸಿಸಿ ವಿಶ್ವ ಕ್ರಿಕೆಟ್ ಸಮಿತಿ

ಮೈಕ್ ಗ್ಯಾಟಿಂಗ್ (ನಾಯಕ), ಜೇಮಿ ಕಾಕ್ಸ್, ಸುಜಿ ಬೇಟ್ಸ್, ಕ್ಲೇರ್ ಕಾನರ್, ಕುಮಾರ್ ಧರ್ಮಸೇನಾ, ಸೌರವ್ ಗಂಗೂಲಿ, ಜೂಲನ್ ಗೋಸ್ವಾಮಿ, ಹೇದರ್ ನೈಟ್, ಜಸ್ಟಿನ್ ಲ್ಯಾಂಗರ್, ಇಯಾನ್ ಮಾರ್ಗನ್, ರಮೀಜ್ ರಾಜಾ, ಕುಮಾರ್ ಸಂಗಕ್ಕಾರ, ಗ್ರೇಮ್ ಸ್ಮಿತ್, ರಿಕಿ ಸ್ಕೆರಿಟ್.

ಇದನ್ನೂ ಓದಿ : World Cup 2023 : ಪಾಕ್​​ ತಂಡದ ಮನವಿಯನ್ನು ತಿರಸ್ಕರಿಸಿದ ಬಿಸಿಸಿಐ, ಐಸಿಸಿ!

ಜೂಲನ್ ಗೋಸ್ವಾಮಿ ಕಳೆದ ವರ್ಷ ಅಂತರರಾಷ್ಟ್ರೀಯ ಆಟದಿಂದ ನಿವೃತ್ತರಾಗಿದ್ದರು. ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯವೇ ಅವರಿಗೆ ಕೊನೇ ಅಂತಾರಾಷ್ಟ್ರೀಯ ಹಣಾಹಣಿಯಾಗಿತ್ತು. ಅಲ್ಲಿ ಅವರು ಬ್ಯಾಟಿಂಗ್ ಮಾಡಲು ಹೊರಟಾಗ ಗಾರ್ಡ್‌ ಆಫ್‌ ಹಾನರ್‌ ನೀಡಲಾಗಿತ್ತು.

272 ಸೀಮಿತ ಓವರ್‌ಗಳ ಪಂದ್ಯದಲ್ಲಿ 300ಕ್ಕೂ ಹೆಚ್ಚು ವಿಕೆಟ್‌ಗಳು ಮತ್ತು 12 ಟೆಸ್ಟ್ ಪಂದ್ಯಗಳಲ್ಲಿ 44 ವಿಕೆಟ್‌ಗಳನ್ನು ಪಡೆದ ವೇಗದ ಬೌಲರ್ ಜೂಲನ್‌ ಅವರು ಎರಡು ದಶಕಗಳ ಕಾಲ ಭಾರತ ತಂಡಕ್ಕಾಗಿ ಆಡಿದ್ದರು. ಈ ವರ್ಷದ ಏಪ್ರಿಲ್‌ನಲ್ಲಿ ಅವರನ್ನು ಎಂಸಿಸಿಯ ಗೌರವ ಆಜೀವ ಸದಸ್ಯರನ್ನಾಗಿ ನೇಮಕ ಮಾಡಲಾಗಿತ್ತು.

ಹೇದರ್‌ ನೈಟ್ 2016 ರಿಂದ ಇಂಗ್ಲೆಂಡ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಲಾರ್ಡ್ಸ್‌ನಲ್ಲಿ ನಡೆದ ಐಸಿಸಿ ಮಹಿಳಾ ವಿಶ್ವಕಪ್ ಅನ್ನು ಎತ್ತಿಹಿಡಿದ ಆಟಗಾರ್ತಿ ಅವರು . ಈ ಆಲ್ ರೌಂಡರ್ ಇಂಗ್ಲೆಂಡ್‌ ತಂಡ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ವೈಟ್‌ಬಾಲ್‌ ಕ್ರಿಕೆಟ್‌ನಲ್ಲಿ 5,000 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ರನ್‌ಗಳು ಹಾಗೂ 10 ಟೆಸ್ಟ್ ಪಂದ್ಯಗಳಲ್ಲಿ 705 ರನ್ ಪೇರಿಸಿದ್ದಾರೆ.

ಇಯಾನ್ ಮಾರ್ಗನ್ ಏಕದಿನ ಕ್ರಿಕೆಟ್‌ನಲ್ಲಿ ಸಾರ್ವಕಾಲಿಕ ಅತಿ ಹೆಚ್ಚು ರನ್ ಗಳಿಸಿದ ಇಂಗ್ಲೆಂಡ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು ಏಕದಿನ ಮತ್ತು ಟಿ20 ಕ್ರಿಕೆಟ್ ಎರಡರಲ್ಲೂ ಇಂಗ್ಲೆಂಡ್ ತಂಡವನ್ನು ವಿಶಿಷ್ಟವಾಗಿ ಮುನ್ನಡೆಸಿದ್ದರು. ಆಧುನಿಕ ಯುಗದ ಯಶಸ್ವಿ ಅಂತಾರಾಷ್ಟ್ರೀಯ ನಾಯಕರಲ್ಲಿ ಅವರೂ ಒಬ್ಬರು

ಅವರು 17 ವರ್ಷಗಳ ಕಾಲ ಮಿಡ್ಲ್‌ಸೆಕ್ಸ್‌ ತಂಡವನ್ನು ಪ್ರತಿನಿಧಿಸಿದ್ದರು. , 2019ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಏಕ ದಿನ ವಿಶ್ವ ಕಪ್‌ನ ಅವಿಸ್ಮರಣೀಯ ಫೈನಲ್‌ನಲ್ಲಿ ಗೆದ್ದು ವಿಶ್ವ ಕಪ್ ಟ್ರೋಫಿಯನ್ನು ಎತ್ತಿದ್ದರು ಈ ವರ್ಷದ ಆರಂಭದಲ್ಲಿ ಅವರನ್ನು ಎಂಸಿಸಿಯ ಗೌರವ ಆಜೀವ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿತ್ತು. ಅವರು ದಿ ಹಂಡ್ರೆಡ್ ಲೀಗ್‌ನಲ್ಲಿ ಲಂಡನ್ ಸ್ಪಿರಿಟ್ ನ ನಾಯಕರಾಗಿದ್ದರು.

Exit mobile version