Site icon Vistara News

BCCI Women’s | ನಿವೃತ್ತಿ ಸೂಚನೆ ಕೊಟ್ಟ ಹಿರಿಯ ಆಟಗಾರ್ತಿ, ಲಾರ್ಡ್ಸ್‌ನಲ್ಲಿ ಕೊನೇ ಪಂದ್ಯ

BCCI WOMEN'S

ನವ ದೆಹಲಿ : ಭಾರತ ಕ್ರಿಕೆಟ್‌ ಕ್ಷೇತ್ರದ ದಿಗ್ಗಜೆ ಹಾಗೂ ವೇಗದ ಬೌಲರ್‌ ಜೂಲನ್‌ ಗೋಸ್ವಾಮಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳುವ ಸೂಚನೆ ನೀಡಿದ್ದಾರೆ. ಸದ್ಯದ (BCCI Women’s) ಮಾಹಿತಿ ಪ್ರಕಾರ ಸೆಪ್ಟೆಂಬರ್‌ ೨೪ರಂದು ಅವರು ವಿದಾಯ ಹೇಳಲಿದ್ದು, ಇಂಗ್ಲೆಂಡ್‌ ಪ್ರವಾಸದಲ್ಲಿನ ಕೊನೇ ಏಕ ದಿನ ಪಂದ್ಯ ಅವರ ಕೊನೆಯ ಆಟವಾಗಿದೆ. ಆ ಹಣಾಹಣಿ ಕ್ರಿಕೆಟ್ ಕಾಶಿ ಎಂದು ಕರೆಯಲಾಗುವ ಲಾರ್ಡ್ಸ್‌ ಮೈದಾನದಲ್ಲಿ ಆಯೋಜನೆಗೊಂಡಿದೆ.

ಆಗಸ್ಟ್‌ ೧೯ರಂದು ಇಂಗ್ಲೆಂಡ್‌ ವಿರುದ್ಧ ಮೂರು ಪಂದ್ಯಗಳ ಏಕ ದಿನ ಸರಣಿಗೆ ಭಾರತ ತಂಡ ಪ್ರಕಟಗೊಂಡಿತ್ತು. ಆ ಬಳಗದಲ್ಲಿ ಜೂಲನ್‌ ಅವರು ಅವಕಾಶ ಪಡೆದುಕೊಂಡಿದ್ದರು. ಇದೇ ವೇಳೆ ಅವರು ನಿವೃತ್ತಿಯ ಸುಳಿವು ಕೂಡ ನೀಡಿದ್ದಾರೆ.

ಹಿರಿಯ ಆಟಗಾರ್ತಿ ಜೂಲನ್‌ ಅವರಿಗೆ ಗೌರವಯತ ವಿದಾಯ ಹೇಳುವುದು ಬಿಸಿಸಿಐ ಯೋಜನೆಯಾಗಿದೆ. ಹೀಗಾಗಿ ಅವರನ್ನು ಇಂಗ್ಲೆಂಡ್‌ ಟೂರ್‌ಗೆ ಆಯ್ಕೆ ಮಾಡಲಾಗಿದೆ. ಫಿಟ್ನೆಸ್‌ ಸಮಸ್ಯೆ ಎದುರಿಸುತ್ತಿರುವ ಜೂಲನ್ ಅವರು ಕಳೆದ ಶ್ರೀಲಂಕಾ ಪ್ರವಾಸದಿಂದ ಹೊರಗುಳಿದಿದ್ದರು. ಇದೀಗ ಮತ್ತೆ ಇಂಗ್ಲೆಂಡ್‌ ಪ್ರವಾಸಕ್ಕೆ ಆಯ್ಕೆ ಮಾಡಲಾಗಿದೆ. ನಿವೃತ್ತಿಯ ಹೊರತಾಗಿಯೂ ಅವರು ಮುಂದಿನ ವರ್ಷ ಆರಂಭವಾಗಲಿರುವ ಮಹಿಳೆಯರ ಐಪಿಎಲ್‌ನಲ್ಲಿ ಆಡಲಿದ್ದಾರೆ.

2002ರ ಜನವರಿಯಲ್ಲಿ ತಮ್ಮ ೧೯ನೇ ವರ್ಷದಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದ ಜೂಲನ್‌ ಗೋಸ್ವಾಮಿ ೨೦ ವರ್ಷಗಳ ಕಾಲ ಭಾರತ ತಂಡದ ವೇಗದ ಬೌಲಿಂಗ್‌ ವಿಭಾಗದ ನೇತೃತ್ವ ವಹಿಸಿದ್ದರು. ೧೨ ಟೆಸ್ಟ್‌, ೬೮ ಟಿ೨೦ ಹಾಗೂ  201 ಏಕದಿನ ಪಂದ್ಯಗಳಲ್ಲಿ ಆಡಿದ್ದು, ಅನುಕ್ರಮವಾಗಿ 44, 56 ಮತ್ತು 252 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಇಂಗ್ಲೆಂಡ್‌ ಪ್ರವಾಸ ಮಾಡಲಿರುವ ಭಾರತ ತಂಡ ಸೆಪ್ಟೆಂಬರ್‌ ೧೦, ೧೩ ಹಾಗೂ ೧೫ರಂದು ಟಿ೨೦ ಪಂದ್ಯಗಳನ್ನು ಆಡಲಿದ್ದರೆ, ೧೮, ೨೧ ಹಾಗೂ ೨೪ರಂದು ಐಸಿಸಿ ವಿಮೆನ್ಸ್‌ ಚಾಂಪಿಯನ್‌ಷಿಪ್‌ನ ಭಾಗವಾಗಿರವ ಮೂರು ಏಕ ದಿನ ಪಂದ್ಯಗಳ ಸರಣಿಯಲ್ಲಿ ಪಾಲ್ಗೊಳ್ಳಲಿದೆ.

ಭಾರತ ತಂಡ : ಹರ್ಮನ್‌ಪ್ರೀತ್‌ ಕೌರ್‌ (ನಾಯಕಿ), ಸ್ಮೃತಿ ಮಂಧಾನಾ (ಉಪನಾಯಕಿ), ಶಫಾಲಿ ವರ್ಮ, ಎಸ್‌ ಮೇಘನಾ, ದೀಪ್ತಿ ಶರ್ಮ, ತಾನಿಯಾ ಭಾಟಿಯಾ, ಯಸ್ತಿಕಾ ಭಾಟಿಯಾ, ಪೂಜಾ ವಸ್ತ್ರಾಕರ್‌, ಸ್ನೇಹ್‌ ರಾಣಾ, ರೇಣುಕಾ ಸಿಂಗ್‌, ಮೇಘಣಾ ಸಿಂಗ್‌, ರಾಜೇಶ್ವರಿ ಗಾಯಕ್ವಾಡ್‌, ಹರ್ಲಿನ್ ದೇವಲ್‌, ದಯಾಲನ್‌ ಹೇಮಲತಾ, ಸಿಮ್ರಾನ್‌ ದಿಲ್‌ ಬಹಾದ್ದೂರ್‌, ಜೂಲನ್‌ ಗೋಸ್ವಾಮಿ, ಜೆಮಿಮಾ ರೋಡ್ರಿಗಸ್‌.

Exit mobile version