ಬೆಂಗಳೂರು : ಟೀಮ್ ಇಂಡಿಯಾದ ವಿಕೆಟ್ಕೀಪರ್ಗಳ ಪಾಲಿಗೆ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಆದರ್ಶ. ಧೋನಿ ಭಾರತ ತಂಡದಲ್ಲಿ ಆಡಿದ ಬಳಿಕ ವಿಕೆಟ್ಕೀಪಿಂಗ್ ಜವಾಬ್ದಾರಿಗೆ ಹೆಚ್ಚಿನ ಗೌರವ ಬಂದಿದೆ. ಅಲ್ಲದೆ, ವಿಕೆಟ್ ಹಿಂದೆ ನಿಂತೂ ಎದುರಾಳಿ ತಂಡಕ್ಕೆ ಸೆಡ್ಡು ಹೊಡೆಯಬಹುದು ಎಂದು ಜಗತ್ತಿಗೆ ತೋರಿಸಿಕೊಟ್ಟವರ ಸಾಲಿನಲ್ಲೂ ಧೋನಿಗೆ ಮುಂಚೂಣಿ ಸ್ಥಾನವಿದೆ. ಈ ಎಲ್ಲ ಕಾರಣಗಳಿಂದ ಆ ಬಳಿಕ ಟೀಮ್ ಇಂಡಿಯಾಗೆ ಸೇರ್ಪಡೆಗೊಂಡ ವಿಕೆಟ್ಕೀಪರ್ಗಳು ಧೋನಿಯ ತಂತ್ರಗಳನ್ನು ಪಾಲಿಸುತ್ತಿದ್ದಾರೆ.
ಈ ಸಾಲಿಗೆ ಹೊಸ ಸೇರ್ಪಡೆ ಜಿತೇಶ್ ಶರ್ಮಾ. ವಿದರ್ಭ ತಂಡದ ಈ ಆಟಗಾರ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಹೊಡೆಬಡಿಯ ಬ್ಯಾಟರ್ ಆಗಿರುವ ಅವರು ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪರವಾಗಿ ಮಿಂಚಿದವರು. ವಿಕೆಟ್ಕೀಪಿಂಗ್ನಲ್ಲಿ ಚಾಕಚಕ್ಯತೆಯನ್ನು ತೋರಿಸಿರುವ ಅವರು ಬ್ಯಾಟಿಂಗ್ ಮೂಲಕವೂ ಅಬ್ಬರ ತೋರಿದ್ದಾರೆ. ಈ ಗುಣಮಟ್ಟದಿಂದ ಅವರು ಟೀಮ್ ಇಂಡಿಯಾದೊಳಗೆ ಸೇರಿಕೊಂಡಿದ್ದಾರೆ. ಅವರೂ ತಮಗೆ ಧೋನಿಯೇ ಆದರ್ಶ ಎಂದು ಹೇಳಿದ್ದಾರೆ.
ವಿಕೆಟ್ಕೀಪಿಂಗ್ ವಿಚಾರಕ್ಕೆ ಬಂದಾಗ ನನಗೆ ಮಹೇಂದ್ರ ಸಿಂಗ್ ಧೋನಿಯೇ ಗಾಡ್ಫಾದರ್. ಅವರ ತಂತ್ರಗಳನ್ನು ನಾನು ನೋಡಿ ಕಲಿತಿದ್ದೇನೆ. ಅವರ ವಿಡಿಯೊಗಳನ್ನು ನೋಡುವ ಮೂಲಕ ವಿಕೆಟ್ಕೀಪಿಂಗ್ ಕೌಶಗಳನ್ನು ವೃದ್ಧಿಸಿಕೊಂಡಿದ್ದೇನೆ, ಎಂದು ಜಿತೇಶ್ ಹೇಳಿದ್ದಾರೆ.
ಕೇರಳದ ವಿಕೆಟ್ ಕೀಪಿಂಗ್ ಬ್ಯಾಟರ್ ಸಂಜು ಸ್ಯಾಮ್ಸನ್ ಗಾಯಗೊಂಡ ಹಿನ್ನೆಲೆಯಲ್ಲಿ ಎರಡನೇ ಪಂದ್ಯದಿಂದ ಜಿತೇಶ್ ಶರ್ಮಗೆ ಅವಕಾಶ ನೀಡಲಾಗಿದೆ. ಆದರೆ, ಅವರು ಆಡುವ 11ರ ಬಳಗದಲ್ಲಿ ಅವಕಾಶ ಪಡೆಯುತ್ತಾರೋ ಎಂದು ಕಾದು ನೋಡಬೇಕಾಗಿದೆ.
ಇದನ್ನೂ ಓದಿ | IND VS SL | ಸಂಜು ಬದಲು ಟೀಮ್ ಇಂಡಿಯಾಕ್ಕೆ ಎಂಟ್ರಿಕೊಟ್ಟ ಜಿತೇಶ್ ಶರ್ಮಾ ಯಾರು? ಅವರ ಕ್ರಿಕೆಟ್ ಸಾಧನೆ ಏನು?