ಬರ್ಮಿಂಗ್‌ಹ್ಯಾಮ್: ಪ್ರವಾಸಿ ಭಾರತ ತಂಡ (England Tour) ಇಂಗ್ಲೆಂಡ್ ವಿರುದ್ಧ ಮರುನಿಗದಿಯಾಗಿರುವ ಐದನೇ ಟೆಸ್ಟ್ ಪಂದ್ಯದಲ್ಲಿ ಸೋಲಿನ ಸುಳಿಗೆ ಸಿಲುಕಿದೆ. ಪಂದ್ಯದ ನಾಲ್ಕನೇ ದಿನವಾದ ಸೋಮವಾರದ ಅಂತ್ಯಕ್ಕೆ ದಾಖಲೆಯ ೩೭೮ ರನ್‌ಗಳ ಗುರಿ ಬೆನ್ನಟ್ಟಲು ಆರಂಭಿಸಿರುವ ಆತಿಥೇಯ ತಂಡ ೩ ವಿಕೆಟ್ ಕಳೆದುಕೊಂಡು 259 ರನ್ ಬಾರಿಸಿದೆ.
ಮಂಗಳವಾರ ಆಟದ ಕೊನೇ ದಿನವಾಗಿದ್ದು, ಇಂಗ್ಲೆಂಡ್ ತಂಡದ ಗೆಲುವಿಗೆ ೧೧೯ ರನ್‌ಗಳು ಮಾತ್ರ ಸಾಕು. ಜೋ ರೂಟ್ (೭೬) ಹಾಗೂ ಜಾನಿ ಬೈರ್‌ಸ್ಟೋವ್ (೭೨) ನಾಲ್ಕನೆ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಈ ಜೋಡಿ ನಾಲ್ಕನೇ ವಿಕೆಟ್‌ಗೆ ಮುರಿಯದ ೧೫೦ ರನ್‌ಗಳ ಜತೆಯಾಟ ನೀಡಿದ್ದು, ಪ್ರವಾಸಿ ತಂಡದ ಗೆಲುವು ಕಸಿಯುವ ಯತ್ನ ಮುಂದುವರಿಸಬಹುದು. ಅಂತೆಯೇ ಬೆನ್ ಸ್ಟೋಕ್ಸ್ ಹಾಗೂ ಸ್ಯಾಮ್ ಬಿಲ್ಲಿಂಗ್ಸ್ ಇನ್ನೂ ಬ್ಯಾಟಿಂಗ್‌ಗೆ ಇಳಿಯಬೇಕಾಗಿದ್ದು, ಭಾರತ ತಂಡ ಗೆಲ್ಲಬೇಕಾದರೆ ಪವಾಡ ನಡೆಯಬೇಕು. ಇಂಗ್ಲೆಂಡ್ ತಂಡ ಗೆದ್ದರೆ ಎಜ್‌ಬಾಸ್ಟನ್‌ನಲ್ಲಿ ೩೭೮ ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ದಾಖಲೆ ಸೃಷ್ಟಿಸಲಿದೆ. ಇದೇ ವೇಳೆ ಭಾರತ ತಂಡಕ್ಕೆ ೧೫ ವರ್ಷಗಳ ಬಳಿಕ ಇಂಗ್ಲೆಂಡ್‌ನಲ್ಲಿ ಸರಣಿಗೆ ಗೆಲ್ಲುವ ಅವಕಾಶ ನಷ್ಟವಾಗಲಿದೆ.
ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಸೋಮವಾರ ತನ್ನ ಎರಡನೇ ಇನಿಂಗ್ಸ್ ಬ್ಯಾಟಿಂಗ್ ಮುಂದುವರಿಸಿದ ಭಾರತ ೨೪೫ ರನ್‌ಗಳಿಗೆ ಆಲ್‌ಔಟ್ ಆಯಿತು. ಭಾನುವಾರ ೧೨೫ ರನ್‌ಗಳಿಗೆ ೩ ವಿಕೆಟ್ ಕಳೆದುಕೊಂಡಿದ್ದ ಭಾರತ ನಾಲ್ಕನೇ ದಿನ ಬ್ಯಾಟಿಂಗ್ ವೈಫಲ್ಯಕ್ಕೆ ಒಳಗಾಯಿತು. ಚೇತೇಶ್ವರ್ ಪೂಜಾರ ೬೬ ರನ್‌ಗಳಿಗೆ ವಿಕೆಟ್ ಒಪ್ಪಿಸಿದರೆ, ಶ್ರೇಯಸ್ ಅಯ್ಯರ್ ೧೯ ರನ್ ಸೀಮಿತಗೊಂಡರು. ರವೀಂದ್ರ ಜಡೇಜಾ ೨೩ ರನ್‌ಗಳಿಗೆ ಔಟಾದರು. ಮೊದಲ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದ ರಿಷಭ್ ಪಂತ್ (೫೭) ಅರ್ಧ ಶತಕ ಬಾರಿಸಿ ತಂಡಕ್ಕೆ ಆಧಾರವಾಗಲು ಯತ್ನಿಸಿದರೂ ದೊಡ್ಡ ಇನಿಂಗ್ಸ್ ಕಟ್ಟಲು ಅವರಿಗೆ ಸಾಧ್ಯವಾಗಲಿಲ್ಲ.
ಭಾರತ ಬ್ಯಾಟರ್‌ಗಳು ಬೇಗನೆ ವಿಕೆಟ್ ಒಪ್ಪಿಸಿದ ಕಾರಣ ಮೊದಲ ಇನಿಂಗ್ಸ್‌ನಲ್ಲಿ ಪಡೆದಿದ್ದ ಮುನ್ನಡೆಯ ಲಾಭವನ್ನು ಪಡೆಯಲು ಭಾರತ ತಂಡಕ್ಕೆ ಸಾಧ್ಯವಾಗಲಿಲ್ಲ. ಭೋಜನ ವಿರಾಮಕ್ಕೆ ಮೊದಲೇ ಸರ್ವಪತನ ಕಂಡ ಕಾರಣ ಆತಿಥೇಯ ತಂಡಕ್ಕೆ ಗುರಿ ಬೆನ್ನಟ್ಟಲು ಸಾಕಷ್ಟು ಅವಕಾಶ ಲಭಿಸಿತು.
ಇಂಗ್ಲೆಂಡ್ ಪಾರಮ್ಯ
ದೊಡ್ಡ ಗುರಿ ಬೆನ್ನಟ್ಟಲು ಆರಂಭಿಸಿದ ಇಂಗ್ಲೆಂಡ್ ತಂಡ ಆರಂಭದಲ್ಲೇ ವೇಗದ ರನ್ ಗಳಿಕೆಯ ಮೊರೆ ಹೋಯಿತು. ಆರಂಭಿಕರಾದ ಅಲೆಕ್ಸ್ ಲೀಸ್ (೫೬) ಹಾಗೂ ಜಾಕ್ ಕ್ರಾವ್ಲಿ (೪೬) ಮೊದಲ ವಿಕೆಟ್‌ಗೆ ೧೦೭ ರನ್‌ಗಳ ಜತೆಯಾಟ ನೀಡಿದರು. ಲೀಸ್ ರನ್‌ಔಟ್‌ಗೆ ಬಲಿಯಾದರೆ, ಕ್ರಾವ್ಲಿ ಬುಮ್ರಾ ಎಸೆತಕ್ಕೆ ಬೌಲ್ಡ್ ಆದರು. ಅದೇ ರೀತಿ ಬೌಲಿಂಗ್ ಚಮತ್ಕಾರ ಮುಂದುವರಿಸಿದ ಬುಮ್ರಾ ಒಲಿ ಪೋಪ್ ಶೂನ್ಯ ರನ್‌ಗೆ ವಾಪಸಾಗುವಂತೆ ಮಾಡಿದರು. ಆ ಬಳಿಕ ನೆಲಕ್ಕಚ್ಚಿ ಆಡಿದ ರೂಟ್ ಹಾಗೂ ಬೈರ್‌ಸ್ಟೋವ್ ಭಾರತದ ಬೌಲರ್‌ಗಳನ್ನು ದಂಡಿಸಿದರು. ಹನುಮ ವಿಹಾರಿ ಕ್ಯಾಚ್ ಬಿಡುವ ಮೂಲಕ ತಾವು ೧೪ ರನ್ ಗಳಿಸಿದ್ದ ವೇಳೆ ಜೀವದಾನ ಪಡೆದ ಬೈರ್‌ಸ್ಟೋವ್ ತಮ್ಮ ಜೀವನ ಶ್ರೇಷ್ಠ ಬ್ಯಾಟಿಂಗ್ ಪ್ರದರ್ಶನ ಮುಂದುವರಿಸಿದರು.
ಸ್ಕೋರ್ ವಿವರ
ಭಾರತ ಮೊದಲ ಇನಿಂಗ್ಸ್: ೪೧೬
ಇಂಗ್ಲೆಂಡ್ ಮೊದಲ ಇನಿಂಗ್ಸ್: ೨೮೪
ಭಾರತ ಎರಡನೇ ಇನಿಂಗ್ಸ್: ೮೧.೫ ಓವರ್‌ಗಳಲ್ಲಿ ೨೪೫ (ಚೇತೇಶ್ವರ್ ಪೂಜಾರ ೬೬, ರಿಷಭ್ ಪಂತ್ ೫೭, ರವೀಂದ್ರ ಜಡೇಜಾ ೨೩; ಬೆನ್‌ಸ್ಟೋಕ್ಸ್ ೩೩ಕ್ಕೆ೪, ಸ್ಟುವರ್ಟ್ ಬ್ರಾಡ್ ೫೮ಕ್ಕೆ೨, ಮ್ಯಾಥ್ಯೂ ಪಾಟ್ಸ್ ೫೦ಕ್ಕೆ೨).
ಇಂಗ್ಲೆಂಡ್ ಎರಡನೇ ಇನಿಂಗ್ಸ್: ೫೭ ಓವರ್‌ಗಳಲ್ಲಿ ೩ ವಿಕೆಟ್‌ಗೆ ೨೫೯ ( ಅಲೆಕ್ಸ್ ಲೀಸ್ ೫೬, ಜಾಕ್ ಕ್ರಾವ್ಲಿ ೪೬, ಜೋ ರೂಟ್ ೭೬*, ಜಾನಿ ಬೈರ್‌ಸ್ಟೋವ್ ೭೨*; ಜಸ್‌ಪ್ರಿತ್ ಬುಮ್ರಾ ೫೩ಕ್ಕೆ೨).
ಇದನ್ನೂ ಓದಿ:covid-19 ಐಸೋಲೇಷನ್‌ನಿಂದ ಹೊರ ಬಂದ ರೋಹಿತ್ ಶರ್ಮ