Site icon Vistara News

Ashes 2023: ಹಕ್ಕಿಯಂತೆ ಹಾರಿ ಕ್ಯಾಚ್​ ಪಡೆದ ಜೋ ರೂಟ್; ಇಂಗ್ಲೆಂಡ್​ ಪರ ನೂತನ ದಾಖಲೆ​

Joe Root takes the catch as Travis Head

ಲಾರ್ಡ್ಸ್​: ಇಂಗ್ಲೆಂಡ್​ ತಂಡದ ಮಾಜಿ ನಾಯಕ ಜೋ ರೂಟ್ (Joe Root) ಅವರು ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಆ್ಯಶಸ್​ ಟೆಸ್ಟ್(Ashes 2023)​ ಸರಣಿಯಲ್ಲಿ ಕ್ಯಾಚ್​ವೊಂದನ್ನು ಹಿಡಿಯುವ ಮೂಲಕ ನೂತನ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದಿದ್ದಾರೆ. ಇಂಗ್ಲೆಂಡ್ ಪರ ಅತಿ ಹೆಚ್ಚು ಕ್ಯಾಚ್ ಹಿಡಿದ ಫೀಲ್ಡರ್ ಎಂಬ ಹಿರಿಮೆ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಅಲಿಸ್ಟರ್‌ ಕುಕ್‌(Alastair Cook) ಹೆಸರಿನಲ್ಲಿತ್ತು.

ಸ್ಟುವರ್ಟ್ ಬ್ರಾಡ್ ಎಸೆತದಲ್ಲಿ ಹಕ್ಕಿಯಂತೆ ಹಾರಿ ಟ್ರಾವಿಸ್ ಹೆಡ್ ಕ್ಯಾಚ್​ ಹಿಡಿಯುವ ಮೂಲಕ ರೂಟ್​ ಅವರು ಟೆಸ್ಟ್ ಕ್ರಿಕೆಟ್​ನಲ್ಲಿ ಇಂಗ್ಲೆಂಡ್ ಪರ ಅತಿ ಹೆಚ್ಚು ಕ್ಯಾಚ್ ಹಿಡಿದ ಫೀಲ್ಡರ್ ಎಂಬ ದಾಖಲೆ ಬರೆದರು. ಕುಕ್ ಅವರು 300 ಇನಿಂಗ್ಸ್​ಗಳಲ್ಲಿ ಒಟ್ಟು 175 ಕ್ಯಾಚ್​ಗಳನ್ನು ಹಿಡಿದ್ದು ಇದುವರೆಗಿನ ದಾಖಲೆಯಾಗಿತ್ತು. ಇದೀಗ ಜೋ ರೂಟ್ 250 ಇನಿಂಗ್ಸ್​ಗಳಲ್ಲಿ ಒಟ್ಟು 176 ಕ್ಯಾಚ್​ಗಳನ್ನು ಹಿಡಿಯುವ ಕುಕ್​ ಅವರನ್ನು ಹಿಂದಿಕ್ಕಿ ಇಂಗ್ಲೆಂಡ್ ಪರ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಒಟ್ಟಾರೆಯಾಗಿ ರೂಟ್​ ಈ ಪಂದ್ಯದಲ್ಲಿ ಎರಡು ಕ್ಯಾಚ್​ ಹಿಡಿದು ಗಮನಸೆಳೆದರು. ರೂಟ್​ ಅವರು ಟ್ರಾವಿಸ್ ಹೆಡ್ ಕ್ಯಾಚ್​ ಪಡೆದ ವಿಡಿಯೊವನ್ನು ಇಂಗ್ಲೆಂಡ್​ ಕ್ರಿಕೆಟ್​ ಮಂಡಳಿ ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದೆ.

ಇದನ್ನೂ ಓದಿ ICC Test Rankings: ಕ್ರಿಕೆಟ್​ನಿಂದ ದೂರ ಉಳಿದರೂ ಟಾಪ್​ 10ನಲ್ಲಿ ಕಾಣಿಸಿಕೊಂಡ ಪಂತ್​; ಜೋ ರೂಟ್​ಗೆ ಅಗ್ರಸ್ಥಾನ

ಇಂಗ್ಲೆಂಡ್​ ಗೆಲುವಿಗೆ ಬೇಕು 257 ರನ್

ಆ್ಯಶಸ್​ ಸರಣಿ (Ashesh 2023) ಎರಡನೇ ಪಂದ್ಯವೂ ಕುತೂಹಲಕಾರಿ ಹಂತಕ್ಕೆ ತಲುಪಿದೆ. ಪಂದ್ಯದ ಕೊನೇ ದಿನದಲ್ಲಿ ಆತಿಥೇಯ ಇಂಗ್ಲೆಂಡ್​ ತಂಡ ಗೆಲುವಿಗೆ 257 ರನ್​ ಬೇಕಾಗಿದೆ. ಈಗಾಗಲೇ ನಾಲ್ಕು ವಿಕೆಟ್​ಗಳು ಉರುಳಿರುವ ಕಾರಣ ಇನ್ನುಳಿದ ಆರು ವಿಕೆಟ್​ಗಳಲ್ಲಿ ಗುರಿಯನ್ನು ಸಾಧಿಸುವ ಸವಾಲು ಬೆನ್​ಸ್ಟೋಕ್ಸ್​ ಪಡೆಗೆ ಎದುರಾಗಿದೆ. ಅತ್ತ ಆಸ್ಟ್ಟ್ರೇಲಿಯಾ ತಂಡದ ಬೌಲರ್​ಗಳು ಕೂಡ ಗೆಲುವಿಗಾಗಿ ಸಾಹಸ ಮಾಡುತ್ತಿದ್ದು, ಕೊನೇ ದಿನ ಮತ್ತಷ್ಟು ಪ್ರಖರ ದಾಳಿ ನಡೆಸುವ ಮುನ್ಸೂಚನೆ ಕೊಟ್ಟಿದ್ದಾರೆ.

ಇಲ್ಲಿನ ಐತಿಹಾಸಿಕ ಲಾರ್ಡ್ಸ್​ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆಯುತ್ತಿರುವ ಹಣಾಹಣಿಯ ನಾಲ್ಕನೇ ದಿನವಾದ ಶನಿವಾರ ಎರಡನೇ ಇನಿಂಗ್ಸ್​ನಲ್ಲಿ 279 ರನ್​ ಗಳಿಸಿ ಆಲ್​ಔಟ್​ ಆದ ಆಸ್ಟ್ರೇಲಿಯಾ ತಂಡ 371 ರನ್​ಗಳ ಗುರಿಯನ್ನು ಆತಿಥೇಯ ತಂಡಕ್ಕೆ ಒಡ್ಡಿತು. ಅಂತೆಯೇ ದಿನದಾಟ ಮುಕ್ತಾಯದ ವೇಳೆಗೆ ಇಂಗ್ಲೆಂಡ್​ ತಂಡ 4 ವಿಕೆಟ್​ ಕಳೆದುಕೊಂಡು 114 ರನ್ ಬಾರಿಸಿದೆ. ಜಾಕ್ ಕ್ರಾವ್ಲಿ (3), ಒಲಿ ಪೋಪ್​ (3) ಹಾಗೂ ಜೋ ರೂಟ್​ (18) ಬೇಗನೆ ವಿಕೆಟ್ ಒಪ್ಪಿಸಿದ್ದಾರೆ. ಹಿಂದಿನ ಇನಿಂಗ್ಸ್​ನಲ್ಲಿ ಅರ್ಧ ಶತಕ ಬಾರಿಸಿದ್ದ ಹ್ಯಾರಿ ಬ್ರೂಕ್​ (4) ಕೂಡ ಔಟಾಗಿದ್ದಾರೆ. ಕೊನೇ ದಿನ ಪಿಚ್​ ಇನ್ನಷ್ಟು ಬೌಲಿಂಗ್​ಗೆ ನೆರವಾಗುವ ಸಾಧ್ಯತೆಗಳಿವೆ. ಹೀಗಾಗಿ ಆಸ್ಟ್ತೇಲಿಯಾ ತಂಡಕ್ಕೆ ಗುರಿ ಮುಟ್ಟುವುದು ದೊಡ್ಡ ಸವಾಲೆನಿಸಿದೆ.

ಮಿಚೆಲ್​ ಸ್ಟಾರ್ಕ್​ ಹಾಗೂ ಪ್ಯಾಟ್​ ಕಮಿನ್ಸ್ ತಲಾ ಎರಡು ವಿಕೆಟ್​ಗಳನ್ನು ಕಬಳಿಸುವ ಮೂಲಕ ಇಂಗ್ಲೆಂಡ್ ಹಿನ್ನಡೆಗೆ ಕಾರಣರಾಗಿದ್ದಾರೆ. ಏತನ್ಮಧ್ಯೆ, ಬೆನ್​ ಡಕೆಟ್​ (50) ಹಾಗೂ ನಾಯಕ ಬೆನ್​ ಸ್ಟೋಕ್ಸ್​ (17) ಐದನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

Exit mobile version