ಲಂಡನ್: ಇಂಗ್ಲೆಂಡ್ ತಂಡದ ಬ್ಯಾಟರ್ ಜೋ ರೂಟ್ ಟೆಸ್ಟ್ ತಂಡದ ನಾಯಕತ್ವ ತೊರೆಯುವ ಘೋಷಣೆ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಈಚೆಗೆ ಮುಕ್ತಾಯವಾದ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿ ಸೋಲಿನ ಬಳಿಕ ರೂಟ್ ನಾಯಕತ್ವವನ್ನು ಬಿಡುವ ನಿರ್ಧಾರಕ್ಕೆ ಬಂದಿದ್ದಾರೆ.
ಕೆರಿಬಿಯನ್ ಪ್ರವಾಸ ಮುಗಿಸಿ ಸ್ವದೇಶಕ್ಕೆ ವಾಪಸ್ ಆದ ಬಳಿಕ ಈ ಕುರಿತು ಪ್ರತಿಕ್ರಿಯಿಸಿದ ಅವರು, ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕತ್ವ ಸ್ಥಾನದಿಂದ ಕೆಳಗಿಳಿಯುವ ನಿರ್ಧಾರ ಮಾಡಿದ್ದೇನೆ. ನನ್ನ ಜೀವಮಾನದಲ್ಲಿ ಇದೊಂದು ಅತ್ಯಂತ ಸವಾಲಿನ ನಿರ್ಧಾರವಾಗಿದೆ. ಕುಟುಂಬದವರು ಹಾಗೂ ಆಪ್ತರೊಂದಿಗೆ ಚರ್ಚಿಸಿದ ಬಳಿಕ ಟೆಸ್ಟ್ ತಂಡದ ನಾಯಕ ಸ್ಥಾನ ತೊರೆಯುವ ನಿರ್ಧಾರಕ್ಕೆ ಬಂದಿದ್ದು, ಇದು ಸರಿಯಾದ ಸಮಯವಾಗಿದೆ ಎಂದು ಹೇಳಿದ್ದಾರೆ.
ನನ್ನ ದೇಶವನ್ನು ಪ್ರತಿನಿಧಿಸುವ ತಂಡಕ್ಕೆ ನಾಯಕನಾಗಿ ಸೇವೆ ಸಲ್ಲಿಸಿದ್ದು ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಹಿಂತಿರುಗಿ ನೋಡಿದರೆ ಕಳೆದ ಐದು ವರ್ಷಗಳ ಸೇವೆಗೆ ಆಗಾದ ಹೆಮ್ಮೆ ಎನಿಸುತ್ತದೆ. ಅತ್ಯಂತ ಗೌರವದಿಂದ ಇಂಗ್ಲೆಂಡ್ ಕ್ರಿಕೆಟ್ ಗೆ ನನ್ನ ಕೊಡುಗೆಯನ್ನು ನೀಡಿದ್ದೇನೆ. ದೇಶವನ್ನು ಪ್ರೀತಿಯಿಂದ ಪ್ರತಿನಿಧಿಸಿದ್ದೇನೆ. ನಾಯಕತ್ವದ ಅವಧಿಯಲ್ಲಿ ಬೆಂಬಲವಾಗಿ ನಿಂತ ಕುಟುಂದವರು, ಎಲ್ಲಾ ಸಹ ಆಟಗಾರರು, ತರಬೇತುದಾರರು ಹಾಗೂ ಸಪೋರ್ಟ್ ಸ್ಟಾಫ್ ಗೆ ಧನ್ಯವಾದಗಳು ಎಂದಿದ್ದಾರೆ.
ಇಂಗ್ಲೆಂಡ್ ಗೆ ಹೆಚ್ಚು ಟೆಸ್ಟ್ ಪಂದ್ಯ ಗೆಲ್ಲಿಸಿಕೊಟ್ಟ ನಾಯಕ
ಜೋ ರೂಟ್ ಇಂಗ್ಲೆಂಡ್ ತಂಡದ ನಾಯಕನ ಪಟ್ಟ ಸ್ವೀಕರಿಸಿದ ಬಳಿಕ ಸಾಕಷ್ಟು ದಾಖಲೆಗಳನ್ನು ಬರೆದಿದ್ದಾರೆ. ಆಂಗ್ಲನ್ನರ ತಂಡಕ್ಕೆ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಗೆಲ್ಲಿಸಿಕೊಟ್ಟ ನಾಯಕ ಎಂಬ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ. ರೂಟ್ ಒಟ್ಟು 27 ಟೆಸ್ಟ್ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ನಂತರದ ಸ್ಥಾನದಲ್ಲಿ
ಮೈಕಲ್ ವಾನ್ (26), ಅಲಿಸ್ಟೇರ್ ಕುಕ್ ಹಾಗೂ ಆ್ಯಂಡ್ರೋ ಸ್ಟಾರ್ಸ್ ತಲಾ 24 ಪಂದ್ಯಗಳನ್ನು ಗೆಲ್ಲಿಸಿದ್ದಾರೆ.
2017ರಲ್ಲಿ ಕುಕ್ ರಾಜೀನಾಮೆ ಬಳಿಕ ರೂಟ್ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕನಾಗಿ ಆಯ್ಕೆಯಾಗಿದ್ದರು. 2018ರಲ್ಲಿ ಟೀಂ ಇಂಡಿಯಾ ವಿರುದ್ಧ 4-1 ಅಂತರದಿಂದ, 2020ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 3-1 ಅಂತರದ ಗೆಲುವು ಸೇರಿ ಹಲವು ಸರಣಿಗಳಲ್ಲಿ ಜಯಭೇರಿ ಬಾರಿಸುವಲ್ಲಿ ರೂಟ್ ನಾಯಕತ್ವ ಪ್ರಮುಖ ಪಾತ್ರ ವಹಿಸಿದೆ.
ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿ ಗೆದ್ದ ಮೊದಲ ಇಂಗ್ಲೆಂಡ್ ನಾಯಕ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ. 2021ರಲ್ಲಿ ಈ ಸಾಧನೆ ಮಾಡಿದ್ದರು. ಮರು ವರ್ಷ ಅಂದರೆ 2021ರಲ್ಲೂ ಲಂಕಾ ವಿರುದ್ಧ 2-0 ಅಂತರದ ಮತ್ತೊಂದು ಟೆಸ್ಟ್ ಸರಣಿಯನ್ನು ತಮ್ಮದಾಗಿಸಿಕೊಂಡಿದ್ದರು.