Site icon Vistara News

Jos Buttler: ಟಿ20 ಕ್ರಿಕೆಟ್​ನಲ್ಲಿ 10 ಸಾವಿರ ರನ್​ ಪೂರೈಸಿದ ಬಟ್ಲರ್​; ಈ ಸಾಧಕರ ಪಟ್ಟಿಯಲ್ಲಿ ಕೊಹ್ಲಿಗೆ ಎಷ್ಟನೇ ಸ್ಥಾನ?

jos buttler england cricket captain

ಲಂಡನ್​: ಟಿ20 ವಿಶ್ವ ಕಪ್​ ವಿಜೇತ ಇಂಗ್ಲೆಂಡ್‌ ತಂಡದ ನಾಯಕ ಜಾಸ್​ ಬಟ್ಲರ್(Jos Buttler) ಅವರು ಟಿ20 ಕ್ರಿಕೆಟ್​ನಲ್ಲಿ ಹೊಸ ಮೈಲುಗಲ್ಲೊಂದನ್ನು ತಲುಪಿದ್ದಾರೆ. ಚುಟುಕು ಮಾದರಿಯ ಕ್ರಿಕೆಟ್​ನಲ್ಲಿ ಅವರು​ 10 ಸಾವಿರ ರನ್​​ಗಳ ಗಡಿ ದಾಟಿದ್ದಾರೆ. ಈ ಮೂಲಕ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮ ಅವರನ್ನೊಳಗೊಂಡ ಎಲೈಟ್​ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ವಿಟಾಲಿಟಿ ಬ್ಲಾಸ್ಟ್‌ ಟಿ20 ಟೂರ್ನಿಯಲ್ಲಿ ಲ್ಯಾಂಕಾಷೈರ್‌ ಲೈಟನಿಂಗ್‌ ಪರ ಆಡುತ್ತಿರುವ ಬಟ್ಲರ್‌ ಡರ್ಬಿಷೈರ್‌ ಫಾಲ್ಕನ್ಸ್ ವಿರುದ್ಧದ ಪಂದ್ಯದಲ್ಲಿ 36 ಎಸೆತಗಳಲ್ಲಿ 83 ರನ್‌ ಸಿಡಿಸುವ ಮೂಲಕ ಟಿ20 ಕ್ರಿಕೆಟ್​ನಲ್ಲಿ 10 ಸಾವಿರ ರನ್​ ಪೂರೈಸಿದ ಸಾಧನೆ ಮಾಡಿದರು. ಅವರ ಈ ಬ್ಯಾಟಿಂಗ್​ ನೆರವಿನಿಂದ ಲ್ಯಾಂಕಾಷೈರ್‌ ತಂಡ 27 ರನ್​ಗಳಿಂದ ಗೆಲುವು ದಾಖಲಿಸಿತು.

ಈ ಬಾರಿಯ ಐಪಿಎಲ್​ನ ಆರಂಭಿಕ ಪಂದ್ಯಗಳಲ್ಲಿ ಸ್ಫೋಟಕ ಬ್ಯಾಟಿಂಗ್​ ನಡೆಸಿದ್ದ ಬಟ್ಲರ್​ ಬಳಿಕ ಹಲವು ಪಂದ್ಯಗಳಲ್ಲಿ ಶೂನ್ಯ ಸುತ್ತಿ ತೀರಾ ಕಳಪೆ ಮಟ್ಟದ ಬ್ಯಾಟಿಂಗ್​ ಪ್ರದರ್ಶನ ತೋರಿದ್ದರು. ಇದೀಗ ಮತ್ತೆ ಪ್ರಚಂಡ ಬ್ಯಾಟಿಂಗ್​ ಫಾರ್ಮ್​ಗೆ ಮರಳಿರುವ ಅವರು ವಿಟಾಲಿಟಿ ಬ್ಲಾಸ್ಟ್‌ ಟೂರ್ನಿಯಲ್ಲಿ ಪ್ರಚಂಡ ಬ್ಯಾಟಿಂಗ್​ ನಡೆಸುತ್ತಿದ್ದಾರೆ.

ಇದನ್ನೂ ಓದಿ IPL 2023: ಶೂನ್ಯ ಸುತ್ತಿ ದಾಖಲೆ ಬರೆದ ಬಟ್ಲರ್​

ಟಿ20 ಕ್ರಿಕೆಟ್​ನಲ್ಲಿ 10 ಸಾವಿರ ರನ್​ ಪೂರೈಸಿದ ಸಾಧಕರ ಪಟ್ಟಿಯಲ್ಲಿ ಬಟ್ಲರ್​ಗೆ 9ನೇ ಸ್ಥಾನ. 14,562 ರನ್‌ಗಳನ್ನು ಕಲೆ ಹಾಕಿರುವ ವೆಸ್ಟ್ ಇಂಡೀಸ್‌ನ ಕ್ರಿಸ್‌ ಗೇಲ್(Chris Gayle)​ ಅವರು ಅಗ್ರಸ್ಥಾನ ಪಡೆದಿದ್ದಾರೆ. ಆ ಬಳಿಕ ಕ್ರಮಾವಾಗಿ ಶೋಯೆಬ್‌ ಮಲಿಕ್‌(12,528 ರನ್‌), ಕೈರನ್​ ಪೊಲಾರ್ಡ್‌(Kieron Pollard) (12,175 ರನ್‌) ಎರಡನೇ ಮತ್ತು ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಭಾರತ ತಂಡದ ವಿರಾಟ್​ ಕೊಹ್ಲಿ(Virat Kohli) ಅವರು (11,965 ರನ್​) ನಾಲ್ಕನೇ ಸ್ಥಾನದಲ್ಲಿದ್ದಾರೆ.

ಐಪಿಎಲ್​ನಲ್ಲಿ ಶೂನ್ಯ ಸುತ್ತಿ ದಾಖಲೆ ಬರೆದಿದ್ಧ ಬಟ್ಲರ್​

ಜಾಸ್​ ಬಟ್ಲರ್​ ಅವರು ಈ ಬಾರಿ ಐಪಿಎಲ್​ನಲ್ಲಿ ಕೆಟ್ಟ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದಿದ್ದರು. ಒಂದೇ ಆವೃತ್ತಿಯ ಐಪಿಎಲ್​ ಟೂರ್ನಿಯಲ್ಲಿ ಅತ್ಯಧಿಕ ಶೂನ್ಯ ಸಂಪಾದನೆ ಮಾಡಿದ ಆಟಗಾರ ಎನಿಸಿಕೊಂಡಿದ್ದರು. 5ನೇ ಬಾರಿಗೆ ಶೂನ್ಯಕ್ಕೆ ಔಟಾದ ಆಟಗಾರ ಎಂಬ ಹಣೆಪಟ್ಟಿ ಕಟ್ಟಿಕೊಂಡು ಈ ಕಳಪೆ ಸಾಧನೆ ಮಾಡಿದವರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದರು.

Exit mobile version