ನವ ದೆಹಲಿ: ಭಾರತ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ (INDvsAUS) ತಂಡದ ಎರಡು ಪಂದ್ಯಗಳ ಸೋಲಿನ ಕಹಿಯನ್ನು ಉಂಡಿದ್ದು, ಮುಂದಿನ ಎರಡು ಪಂದ್ಯದಲ್ಲಾದರೂ ಗೆದ್ದು ಮರ್ಯಾದೆ ಉಳಿಸಿಕೊಳ್ಳಬೇಕು ಎಂಬ ಏಕೈಕ ಗುರಿಯೊಂದಿಗೆ ಅಭ್ಯಾಸ ನಡೆಸುತ್ತಿದೆ. ಆದರೆ, ಬಲಿಷ್ಠ ಭಾರತ ತಂಡದ ಸ್ಪಿನ್ ವಿಭಾಗವನ್ನು ಎದುರಿಸಲು ಆ ತಂಡದ ಆಟಗಾರರಿಗೆ ಸಾಧ್ಯವಾಗುತ್ತಿಲ್ಲ. ಏತನ್ಯಧ್ಮೆ ಪ್ರವಾಸಿ ತಂಡಕ್ಕೆ ಗಾಯದ ಸಮಸ್ಯೆ ಬಿಡದೇ ಕಾಡುತ್ತಿದ್ದು, ವೇಗದ ಬೌಲರ್ ಜೋಶ್ ಹೇಜಲ್ವುಡ್ ಟೂರ್ನಿಯಂದ ಸಂಪೂರ್ಣ ಹೊರಕ್ಕೆ ನಡೆದಿದ್ದಾರೆ.
ಹೇಜಲ್ವುಡ್ ಹಿಂಗಾಲಿನ ನೋವಿನ ಕಾರಣಕ್ಕೆ ಮೊದಲ ಎರಡು ಟೆಸ್ಟ್ಗಳಲ್ಲಿ ಪಾಲ್ಗೊಂಡಿರಲಿಲ್ಲ. ಆದಾಗ್ಯೂ ಇನ್ನೆರಡು ಪಂದ್ಯಗಳಿಗೆ ಅವರು ವಾಪಸಾಗಿದ್ದರೆ ಪ್ರತಿರೋಧ ಒಡ್ಡಲು ಸಾಧ್ಯವಾಗುತ್ತಿತ್ತು. ಆದರೆ ಇನ್ನೂ ಸಂಪೂರ್ಣ ಫಿಟ್ ಎನಿಸಿಕೊಳ್ಳದ ಕಾರಣ ಮುಂದಿನ ಪಂದ್ಯಗಳಿಗೂ ಅವರು ಅಲಭ್ಯರಾಗುತ್ತಿದ್ದಾರೆ ಎಂದು ಹೇಳಲಾಗಿದೆ. ಆಸ್ಟ್ರೇಲಿಯಾ ತಂಡದ ಕೋಚ್ ಆಂಡ್ರ್ಯೂ ಮೆಕ್ಡೊನಾಲ್ಡ್ ಅವರು ಈ ಮಾಹಿತಿಯನ್ನು ನೀಡಿದ್ದಾರೆ.
ಇದನ್ನೂ ಓದಿ : IPL 2023 | ಐಪಿಎಲ್ನಲ್ಲಿ ನನಗೆ ಸಿಕ್ಕಿದ ದುಡ್ಡು ಜಾಸ್ತಿಯಾಯಿತು ಎಂದ ಕ್ಯಾಮೆರಾನ್ ಗ್ರೀನ್!
ನಾಗ್ಪುರ ಹಾಗೂ ನವ ದೆಹಲಿಯಲ್ಲಿ ನಡೆದ ಮೊದಲ ಎರಡು ಟೆಸ್ಟ್ ಪಂದ್ಯಗಳಿಗೆ ಜೋಶ್ ಹೇಜಲ್ವುಡ್ ಪಾಲ್ಗೊಂಡಿರಲಿಲ್ಲ. ಅದೇ ರೀತಿ ಮಾರಕ ವೇಗಿ ಮಿಚೆಲ್ ಸ್ಟಾರ್ಕ್ ಕೂಡ ಅಲಭ್ಯರಾಗಿದ್ದರು. ಜತೆಗೆ ಆಲ್ರೌಂಡರ್ ಕ್ಯಾಮೆರೂನ್ ಗ್ರೀನ್ ಕೂಡ ಇರಲಿಲ್ಲ. ಇದು ಪ್ಯಾಟ್ ಕಮಿನ್ಸ್ ಬಳಗದ ಪ್ರದರ್ಶನದ ಮೇಲೆ ಪರಿಣಾಮ ಬೀರಿತ್ತು. ಗ್ರೀನ್ ಹಾಗೂ ಮಿಚೆಲ್ ಸ್ಟಾರ್ಕ್ ಮುಂದಿನ ಪಂದ್ಯಗಳಲ್ಲಿ ಆಡುವ ಸಾಧ್ಯತೆಗಳಿವೆ.