ಮುಂಬಯಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಭಾನುವಾರ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮುಂದಿನೆರಡು ಪಂದ್ಯಗಳಿಗೆ ತಂಡ ಪ್ರಕಟಿಸಿದೆ. ಈ ವೇಳೆ ಕೆ. ಎಲ್ ರಾಹುಲ್ ಅವರಿಗೆ ನೀಡಲಾಗಿದ್ದ ಉಪನಾಯಕನ ಸ್ಥಾನವನ್ನು ತೆಗೆಯಲಾಗಿದೆ. ಅದು ಯಾಕೆ ಎಂಬುದಾಗಿ ಭಾರತ ತಂಡದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ವಿವರಣೆ ನೀಡಿದ್ದಾರೆ. ಮಾರ್ಚ್ 1ರಿಂದ ಇಂದೋರ್ನಲ್ಲಿ ಮೂರನೇ ಪಂದ್ಯ ನಡೆಯಲಿದ್ದು, ಆ ಪಂದ್ಯದ ವೇಳೆ ಕೆ. ಎಲ್ ರಾಹುಲ್ ಭವಿಷ್ಯ ನಿರ್ಧಾರವಾಗಲಿದೆ ಎಂಬುದಾಗಿ ಅವರು ಹೇಳಿದ್ದಾರೆ. ಫಾರ್ಮ್ ಕಳೆದುಕೊಂಡಿರುವ ಕೆ. ಎಲ್ ರಾಹುಲ್ ಅವರನ್ನು ತಂಡದಲ್ಲಿ ಉಳಿಸುವುದೇ, ಕಳುಹಿಸುವುದೇ ಎಂಬ ತೀರ್ಮಾನಕ್ಕೆ ಬಿಸಿಸಿಐ ಬರಲಿದೆ ಎಂಬುದಾಗಿಯೂ ಅವರು ಹೇಳಿದ್ದಾರೆ.
ತಂಡ ಆಯ್ಕೆ ಕುರಿತು ಇಂಡಿಯಾ ಟಿವಿ ಜತೆ ಮಾತನಾಡಿದ ಹರ್ಭಜನ್ ಸಿಂಗ್, ಬಿಸಿಸಿಐ ಉದ್ದೇಶಪೂರ್ವಕವಾಗಿ ಕೆ. ಎಲ್ ರಾಹುಲ್ ಅವರನ್ನು ಉಪನಾಯಕನ ಪಟ್ಟದಿಂದ ಕೆಳಕ್ಕೆ ಇಳಿಸಿದೆ. ಯಾಕೆಂದರೆ, ಆ ಸ್ಥಾನದಿಂದ ತೆಗೆದು ಹಾಕಿದರೆ ಟೀಮ್ ಮ್ಯಾನೇಜ್ಮೆಂಟ್ಗೆ ಅವರನ್ನು ಮುಂದಿನ ಪಂದ್ಯದಲ್ಲಿ ಆಡುವ 11ರ ಬಳಗಕ್ಕೆ ಆಯ್ಕೆ ಮಾಡದೇ ಇರಲು ಸಾಧ್ಯ. ಉಪನಾಯಕರಾಗಿರುವ ಹೊತ್ತು ಅವರನ್ನು ತಂಡದಿಂದ ಇಳಿಸುವುದು ಸುಲಭವಲ್ಲ ಹರ್ಭಜನ್ ಸಿಂಗ್ ಹೇಳಿಕೊಂಡಿದ್ದಾರೆ.
ಕೆ ಎಲ್ ರಾಹುಲ್ ಅತ್ಯಂತ ಗುಣಮಟ್ಟದ ಬ್ಯಾಟರ್. ಆದರೆ ಈಗ ಫಾರ್ಮ್ ಕಳೆದುಕೊಂಡಿದ್ದಾರೆ. ಹೀಗಾಗಿ ಸ್ಕೋರ್ ಬಾರಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಒಂದಲ್ಲ ಒಂದು ದಿನ ಅವರು ಉತ್ತಮ ಪ್ರದರ್ಶನದೊಂದಿಗೆ ತಂಡಕ್ಕೆ ವಾಪಸಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ಆದರೀಗ ಅವರಿಗೆ ಉಪನಾಯಕತ್ವದ ಟ್ಯಾಗ್ ಇಲ್ಲ. ಹೀಗಾಗಿ ಶುಭ್ಮನ್ ಗಿಲ್ಗೆ ಮುಂದಿನ ಪಂದ್ಯದಲ್ಲಿ ಅವಕಾಶ ಸಿಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂಬುದಾಗಿ ಅವರು ಹೇಳಿದ್ದಾರೆ.
ಇದನ್ನೂ ಓದಿ : KL Rahul | ಅವರೊಬ್ಬ ಆಲ್‌ರೌಂಡರ್; ಕೆ ಎಲ್ ರಾಹುಲ್ ಮೌಲ್ಯಯುತ ಆಟಗಾರ ಎಂದ ಮಾಜಿ ನಾಯಕ
ಶುಭ್ಮನ್ ಗಿಲ್ ಸದ್ಯ ಅತ್ಯುತ್ತಮ ಫಾರ್ಮ್ನಲ್ಲಿ ಇದ್ದಾರೆ. ಆದಾಗ್ಯೂ ಅವರನ್ನು ಬೆಂಚು ಕಾಯಿಸುವಂತೆ ಮಾಡಿದ ಕೆ ಎಲ್ ರಾಹುಲ್ಗೆ ಮೊದಲೆರಡು ಟೆಸ್ಟ್ಗಳಲ್ಲಿ ಅವಕಾಶ ನೀಡಲಾಗಿತ್ತು. ಅದರೆ, ಮೊದಲ ಟೆಸ್ಟ್ನಲ್ಲಿ 22 ರನ್ಗಳಿಗೆ ಔಟಾಗಿದ್ದ ಅವರು ಎರಡನೇ ಟೆಸ್ಟ್ನಲ್ಲಿ 10 ಮತ್ತು 2 ರನ್ ಬಾರಿಸಿದ್ದರು. ಭಾರತ ತಂಡಕ್ಕೆ ಅಗತ್ಯ ಸಂದರ್ಭದಲ್ಲಿ ಅವರು ನೆರವಾಗಿರಲಿಲ್ಲ.