ಕ್ರೈಸ್ಟ್ ಚರ್ಚ್: ಫಾರ್ಮ್ ಕಳೆದುಕೊಂಡಿದ್ದ ನ್ಯೂಜಿಲ್ಯಾಂಡ್ ತಂಡದ ಸ್ಟಾರ್ ಆಟಗಾರ ಕೇನ್ ವಿಲಿಯಮ್ಸನ್ ದಿಢೀರ್ ಬೆಳವಣಿಗೆ ಎಂಬಂತೆ ಟೆಸ್ಟ್ ತಂಡದ ನಾಯಕತ್ವ ತ್ಯಜಿಸಿದ್ದಾರೆ. ನೂತನ ನಾಯಕನಾಗಿ ಟಿಮ್ ಸೌಥಿ ಅವರನ್ನು ನೇಮಿಸಲಾಗಿದೆ. ಆದರೆ ವಿಲಿಯಮ್ಸನ್ ಸೀಮಿತ ಓವರ್ನಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ.
“ನಾಯಕತ್ವದಿಂದಾಗಿ ಮೈದಾನದ ಒಳಗೆ ಮತ್ತು ಹೊರಗೆ ಕೆಲಸದ ಒತ್ತಡ ಹೆಚ್ಚುತ್ತಿದೆ. ನನ್ನ ವೃತ್ತಿಜೀವನದ ಈ ಹಂತದಲ್ಲಿ ಈ ನಿರ್ಧಾರಕ್ಕೆ ಸರಿಯಾದ ಸಮಯ ಎಂದು ನಾನು ಭಾವಿಸುತ್ತೇನೆ. ಆದರೆ ನ್ಯೂಜಿಲ್ಯಾಂಡ್ ತಂಡಕ್ಕಾಗಿ ಆಡುವುದು ಮತ್ತು ಮೂರು ಮಾದರಿಯಲ್ಲಿ ಆಡುವುದು ಎಂದಿಗೂ ನನ್ನ ಮೊದಲ ಆದ್ಯತೆಯಾಗಿದೆ” ಎಂದು ಟೆಸ್ಟ್ ನಾಯಕತ್ವದಿಂದ ಕೆಳಗಿಳಿದ ಬಳಿಕ ಕೇನ್ ವಿಲಿಯಮ್ಸನ್ ಹೇಳಿದ್ದಾರೆ.
ಮುಂದಿನ ಎರಡು ವಿಶ್ವ ಕಪ್ ಮುಖ್ಯ
ನ್ಯೂಜಿಲ್ಯಾಂಡ್ ಕ್ರಿಕೆಟ್ ಮಂಡಳಿಯೊಂದಿಗೆ ಚರ್ಚಿಸಿದ ಬಳಿಕ ಮುಂದಿನ ಎರಡು ವರ್ಷಗಳಲ್ಲಿ ಎರಡು ವಿಶ್ವಕಪ್ ಇರುವ ಕಾರಣ ವೈಟ್ ಬಾಲ್ ಮಾದರಿಯಲ್ಲಿ ನಾಯಕನಾಗಿ ಮುಂದುವರಿಯುವುದು ಉತ್ತಮ ಎಂದು ತೀರ್ಮಾನಿಸಿದ್ದೇನೆ. ಮೂರೂ ಮಾದರಿಯ ನಾಯಕತ್ವದಲ್ಲಿ ಮುಂದುವರಿದರೆ ಕೆಲಸದ ಒತ್ತಡ ಅಧಿಕವಾಗಿ ವಿಶ್ವ ಕಪ್ಗೆ ಗಮನಹರಿಸಲು ಅಸಾಧ್ಯ. ಆದ್ದರಿಂದ ಈ ನಿರ್ಧಾರ ಕೈಗೊಂಡಿದ್ದೇನೆ” ಎಂದು ವಿಲಿಯಮ್ಸ್ ತಿಳಿಸಿದರು.
ವಿಲಿಯಮ್ಸನ್ ಬದಲಿಗೆ ಇದೀಗ ನೂತನ ನಾಯಕನಾಗಿ, 22 ಟಿ20 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿರುವ ಹಿರಿಯ ವೇಗಿ ಟಿಮ್ ಸೌಥಿ ಮುಂದಿನ ದಿನಗಳಲ್ಲಿ ಟೆಸ್ಟ್ ತಂಡವನ್ನು ಮುನ್ನಡೆಸಲಿದ್ದಾರೆ. ಟಾಮ್ ಲ್ಯಾಥಂ ಉಪ ನಾಯಕನಾಗಿ ಮುಂದುವರಿಯಲಿದ್ದಾರೆ.
ಇದನ್ನೂ ಓದಿ | IND VS BAN | ಬೇಲ್ಸ್ ಕೃಪೆಯಿಂದ ಜೀವದಾನ ಪಡೆದ ಶ್ರೇಯಸ್ ಅಯ್ಯರ್: ವಿಡಿಯೊ ವೈರಲ್