ವೆಲ್ಲಿಂಗ್ಟನ್: ಹಾಲಿ ಆವೃತ್ತಿಯ ಟಿ20 ವಿಶ್ವಕಪ್ನಲ್ಲಿ(T20 World Cup 2024) ನ್ಯೂಜಿಲ್ಯಾಂಡ್ ತಂಡ ಅತ್ಯಂತ ಕಳಪೆ ಪ್ರದರ್ಶನ ತೋರಿ ಲೀಗ್ ಹಂತದಿಂದಲೇ ಹೊರ ಬಿದ್ದಿತ್ತು. ಈ ಸೋಲಿನಿಂದ ಹತಾಶರಾದ ಕೇನ್ ವಿಲಿಯಮ್ಸನ್(Kane Williamson) ಅವರು ನಾಯಕ್ವದಿಂದ ಕೆಳಗಿಳಿದಿದ್ದಾರೆ. ಜತೆಗೆ 2024-25 ಋತುವಿಗಾಗಿ ಮಂಡಳಿಯಿಂದ ಕೇಂದ್ರೀಯ ಒಪ್ಪಂದವನ್ನು ನಿರಾಕರಿಸಿದ್ದಾರೆ. ನ್ಯೂಜಿಲ್ಯಾಂಡ್ ಕ್ರಿಕೆಟ್ ಮಂಡಳಿಯು ತಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ವಿಲಿಯಮ್ಸನ್ ತೆಗೆದುಕೊಂಡ ನಿರ್ಧಾರವನ್ನು ಪ್ರಕಟಿಸಿದೆ. ನಾಯಕತ್ವದಿಂದ ಕೆಳಗಿಳಿದರೂ ಕೂಡ ತಂಡದ ಪರ ಕೆಲ ಕಾಲ ಆಡುವುದಾಗಿ ವಿಲಿಯಮ್ಸನ್ ಖಚಿತಪಡಿಸಿದ್ದಾರೆ.
33 ವರ್ಷದ ಕೇನ್ ವಿಲಿಯಮ್ಸನ್ ಈ ಬೇಸಿಗೆಯಲ್ಲಿ ಒಂದು ವಿಶ್ರಾಂತಿ ಪಡೆಯಲು ಬಯಸಿದ್ದಾರೆ. 2024-25ರ ಸಾಲಿನಲ್ಲಿ ನ್ಯೂಜಿಲ್ಯಾಂಡ್ ತಂಡ ಕಡಿಮೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತದೆ. ಇದೇ ಕಾರಣದಿಂದ ಅವರು ಮೂರು ಮಾದರಿ ಕ್ರಿಕೆಟ್ನ ಕೇಂದ್ರೀಯ ಒಪ್ಪಂದವನ್ನು ನಿರಾಕರಿಸಿದ್ದಾರೆ ಎಂದು ನ್ಯೂಜಿಲ್ಯಾಂಡ್ ಕ್ರಿಕೆಟ್ ಮಂಡಳಿ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.
“ವಿಲಿಯಮ್ಸನ್ ಅವರು ಕೇಂದ್ರ ಒಪ್ಪಂದವನ್ನು ನಿರಾಕರಿಸಿದ್ದಾರೆ ಎಂದ ಮಾತ್ರಕ್ಕೆ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಸಕ್ತಿ ಕಳೆದುಕೊಂಡಿದ್ದಾರೆ ಎಂದರ್ಥವಲ್ಲ ಭವಿಷ್ಯದಲ್ಲಿ ಅವರು ಮತ್ತೆ ಕೇಂದ್ರ ಒಪ್ಪಂದವನ್ನು ಸ್ವೀಕರಿಸಲು ಸಿದ್ಧರಿದ್ದಾರೆ” ಎಂದು ಕ್ರಿಕೆಟ್ ಮಂಡಳಿ ತಿಳಿಸಿದೆ.
ಇದನ್ನೂ ಓದಿ USA vs SA: ಇಂದು ದಕ್ಷಿಣ ಆಫ್ರಿಕಾ-ಅಮೆರಿಕ ನಡುವೆ ಸೂಪರ್-8 ಕದನ
“ಕ್ರಿಕೆಟ್ ಹೊರಗಿನ ನನ್ನ ಜೀವನವು ಬದಲಾಗಿದೆ. ನನ್ನ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುವುದು ಮತ್ತು ಮನೆಯಲ್ಲಿ ಅಥವಾ ವಿದೇಶದಲ್ಲಿ ಅವರೊಂದಿಗೆ ಅನುಭವಗಳನ್ನು ಆನಂದಿಸುವುದು ನನಗೆ ಇನ್ನೂ ಹೆಚ್ಚು ಮುಖ್ಯವಾದ ವಿಷಯವಾಗಿದೆ” ಎಂದು ಹೇಳುವ ಮೂಲಕ ಕೇನ್ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಕೇನ್ ವಿಲಿಯಮ್ಸನ್ ನಾಯಕತ್ವದಲ್ಲಿ ನ್ಯೂಜಿಲ್ಯಾಂಡ್ ತಂಡ ಚೊಚ್ಚಲ ಟೆಸ್ಟ್ ವಿಶ್ವಕಪ್ ಗೆದ್ದ ಸಾಧನೆ ಮಾಡಿದೆ. 2019ರಲ್ಲಿ ಏಕದಿನ ವಿಶ್ವಕಪ್ ಫೈನಲ್, 2023ರ ಏಕದಿನ ವಿಶ್ವಕಪ್ನಲ್ಲಿ ಸೆಮಿಫೈನಲ್ 2016 ಮತ್ತು 2022ರ ಟಿ20 ವಿಶ್ವಕಪ್ನಲ್ಲಿ ತಂಡ ಸೆಮಿಫೈನಲ್ ಪ್ರವೇಶಿಸಿದ ಸಾಧನೆ ಮಾಡಿದೆ.
ವಿಲಿಯಮ್ಸನ್ ಟೆಸ್ಟ್ ಕ್ರಿಕೆಟ್‌ನಲ್ಲಿ 40 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿ 22 ಪಂದ್ಯಗಳನ್ನು ಗೆದ್ದಿದ್ದಾರೆ. 8 ಪಂದ್ಯ ಡ್ರಾ ಮತ್ತು 10 ಪಂದ್ಯಗಳಲ್ಲಿ ಸೋಲನುಭವಿಸಿದೆ. 91 ಏಕದಿನ ಪಂದ್ಯಗಳಲ್ಲಿ 46 ಜಯ, 40 ಸೋಲು ಕಂಡಿವೆ. ಟಿ20 ಕ್ರಿಕೆಟ್‌ನಲ್ಲಿ 75 ಪಂದ್ಯಗಳಲ್ಲಿ ಮುನ್ನಡೆಸಿ 39 ಜಯ, 34 ಸೋಲು ಕಂಡಿದ್ದಾರೆ. ಒಟ್ಟಾರೆಯಾಗಿ ನ್ಯೂಜಿಲ್ಯಾಂಡ್ ತಂಡ ಕೇನ್ ವಿಲಿಯಮ್ಸನ್ ನಾಯಕತ್ವದಲ್ಲಿ ಶೇ.50 ಕ್ಕಿಂತ ಹೆಚ್ಚು ಪಂದ್ಯಗಳಲ್ಲಿ ಗೆಲುವು ಕಂಡಿದೆ. 2019ರಲ್ಲಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಚೊಚ್ಚಲ ವಿಶ್ವಕಪ್ ಗೆಲ್ಲಲಿದೆ ಎನ್ನುವಷ್ಟರಲ್ಲಿ ಅಂಪೈರ್ ಧರ್ಮಶೇನ ನೀಡಿದ ತೀರ್ಪು ಮತ್ತು ಆ ಬಳಿಕ ಬೌಂಡರಿ ಲೆಕ್ಕಾಚಾರದ ಫಲಿತಾಂಶದಿಂದ ನ್ಯೂಜಿಲ್ಯಾಂಡ್ ಕಪ್ ಎತ್ತುವ ಅವಕಾಶವನ್ನು ಕಳೆದುಕೊಂಡಿತ್ತು.