ಬೆಂಗಳೂರು: ಶ್ರೀಂಕಾ ವಿರುದ್ಧ 5 ವಿಕೆಟ್ಗಳ ಗೆಲುವು ಸಾಧಿಸಿರುವ ನ್ಯೂಜಿಲ್ಯಾಂಡ್ ತಂಡ ಬಹುತೇಕ ಸೆಮಿಫೈನಲ್(World Cup semis) ಪ್ರವೇಶ ಪಡೆದಿದೆ. ಆದರೂ ಇದು ಅಧಿಕೃತಗೊಳ್ಳಬೇಕಿದ್ದರೆ. ಶನಿವಾರವರೆಗೆ ಕಾಯಬೇಕು. ಇದಕ್ಕೂ ಮುನ್ನವೇ ನ್ಯೂಜಿಲ್ಯಾಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್(Kane Williamson) ಭಾರತವನ್ನು(Team India) ಎದುರಿಸುವುದು ಸವಾಲಿನಿಂದ ಕೂಡಿರಲಿದೆ ಎಂದು ಹೇಳಿದ್ದಾರೆ.
ಲಂಕಾ ವಿರುದ್ಧದ ಪಂದ್ಯ ಬಳಿಕ ಮಾತನಾಡಿದ ಕೇನ್ ವಿಲಿಯಮ್ಸನ್, ‘ಒಂದೊಮ್ಮೆ ನಮ್ಮ ತಂಡ ವಿಶ್ವಕಪ್‌ನ ಸೆಮಿಫೈನಲ್ ಹಂತಕ್ಕೇರಿದರೆ. ಭಾರತ ವಿರುದ್ಧ ಆಡಬೇಕಿದೆ. ರೋಹಿತ್ ಪಡೆಯನ್ನು ಎದುರಿಸುವುದು ನಮ್ಮ ಪಾಲಿಗೆ ದೊಡ್ಡ ಸವಾಲು” ಎಂದು ಹೇಳಿದ್ದಾರೆ.
“ಸೆಮಿಫೈನಲ್‌ನಲ್ಲಿ ಆಡುವುದು ಯಾವಾಗಲೂ ವಿಶೇಷವಾಗಿರುತ್ತದೆ. ಆದರೆ, ಈ ಬಾರಿ ಆತಿಥೇಯ ಭಾರತ ತಂಡವನ್ನು ಎದುರಿಸುವುದು ದೊಡ್ಡ ಸವಾಲು. ಮೊದಲು ನಾವು ಸೆಮಿಫೈನಲಿಗೇರುವುದನ್ನು ಎದುರು ನೋಡುತ್ತಿದ್ದೇವೆ” ಎಂದರು.
ಇದನ್ನೂ ಓದಿ ಬೆಂಗಳೂರಿನಲ್ಲಿ ಮೊಮ್ಮಗ ರಚಿನ್ ರವೀಂದ್ರಗೆ ದೃಷ್ಟಿ ತೆಗೆದ ಅಜ್ಜಿ; ವಿಡಿಯೊ ವೈರಲ್
ಪಂದ್ಯ ಗೆದ್ದ ನ್ಯೂಜಿಲ್ಯಾಂಡ್
ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ನ್ಯೂಜಿಲ್ಯಾಂಡ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಲಂಕಾ ತಂಡ 46.4 ಓವರ್ಗಳಲ್ಲಿ 171 ರನ್‌ಗಳಿಗೆ ಆಲ್‌ಔಟ್ ಆಯಿತು. ಗುರಿ ಬೆನ್ನಟ್ಟಿದ ನ್ಯೂಜಿಲ್ಯಾಂಡ್ ಇನ್ನೂ 160 ಬಾಕಿ ಇರುವಂತೆಯೇ 5 ವಿಕೆಟ್ ಕಳೆದುಕೊಂಡು 172 ರನ್ ಬಾರಿಸಿ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಕಿವೀಸ್ ಸೆಮಿಫೈನಲ್ ಪ್ರವೇಶವನ್ನು ಬಹುತೇಕ ಖಚಿತಪಡಿಸಿಕೊಡಿದೆ. ಆದರೆ, ಶನಿವಾರ ನಡೆಯಲಿರುವ ಇಂಗ್ಲೆಂಡ್ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಪಂದ್ಯದ ಫಲಿತಾಂಶದ ಬಳಿಕ ಈ ಬಗ್ಗೆ ಸ್ಪಷ್ಟತೆ ಸಿಗಲಿದೆ.
ಪಾಕಿಸ್ತಾನದ ಪರಿಸ್ಥಿತಿ ಏನು?
ಪಾಕಿಸ್ತಾನ ತಂಡ ಶನಿವಾರ ನಡೆಯುವ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್(England vs Pakistan) ವಿರುದ್ಧ ಕಣಕ್ಕಿಳಿಯಲಿದೆ. ಸದ್ಯ ಪಾಕ್ ತಂಡ ಆಡಿದ 8 ಪಂದ್ಯಗಳಲ್ಲಿ ತಲಾ 4 ಗೆಲುವು ಮತ್ತು ಸೋಲು ಕಾಣುವ ಮೂಲಕ 8 ಅಂಕ ಪಡೆದಿದೆ. +0.036 ರನ್ ರೇಟ್ ಹೊಂದಿದೆ. ಅಂಕಪಟ್ಟಿಯಲ್ಲಿ 5ನೇ ಸ್ಥಾನವನ್ನು ಅಲಂಕರಿಸಿದೆ. ಶ್ರೀಲಂಕಾ ವಿರುದ್ಧ ಗೆದ್ದ ನ್ಯೂಜಿಲ್ಯಾಂಡ್ 10 ಅಂಕದೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ನ್ಯೂಜಿಲ್ಯಾಂಡ್ ತಂಡ ಲಂಕಾ ವಿರುದ್ಧ ಸೋಲು ಕಾಣುತ್ತಿದ್ದರೆ, ಆಗ ಪಾಕಿಸ್ತಾನಕ್ಕೆ ಯಾವುದೇ ಚಿಂತೆ ಇರುತ್ತಿರಲಿಲ್ಲ. ಜಸ್ಟ್ ಪಂದ್ಯ ಗೆದ್ದರೆ ಸಾಕಿತ್ತು. ಆದರೆ ಈಗ ಪವಾಡ ನಡೆದಂತೆ ಗೆಲ್ಲಬೇಕಾದ ಸ್ಥಿತಿ ಎದುರಾಗಿದೆ.
ಬ್ಯಾಟಿಂಗ್ ಆಯ್ದುಕೊಂಡರೆ ಏನು ಮಾಡಬೇಕು?
ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಬಾಬರ್ ಅಜಂ ಪಡೆ ಮೊದಲು ಬ್ಯಾಟಿಂಗ್ ನಡೆಸಿ ಮಾಡಿ 300 ರನ್ ಗಳಿಸಿದರೆ, ಇಂಗ್ಲೆಂಡ್ ತಂಡವನ್ನು ಕೇವಲ 13 ರನ್‌ಗಳಿಗೆ ಆಲ್‌ಔಟ್ ಮಾಡಬೇಕು. ಆ ಮೂಲಕ ಪಾಕಿಸ್ತಾನ 287 ರನ್‌ಗಳ ಭಾರಿ ಅಂತರದಲ್ಲಿ ಗೆಲುವು ಪಡೆಯಬೇಕು. ಆಗ ಮಾತ್ರ ಪಾಕಿಸ್ತಾನ ಉತ್ತಮ ರನ್ ರೇಟ್ ಸಾಧಿಸಿ ಕಿವೀಸ್ ತಂಡವನ್ನು ಹಿಂದಿಕ್ಕಿ ಸೆಮಿಫೈನಲ್‌ಗೆ ಅರ್ಹತೆ ಪಡೆಯಬಹುದು.
ಬೌಲಿಂಗ್ ನಡೆಸಿದರೆ?
ಒಂದೊಮ್ಮೆ ಪಾಕಿಸ್ತಾನ ಈ ಪಂದ್ಯದಲ್ಲಿ ಮೊದಲು ಬೌಲಿಂಗ್ ನಡಸುವ ಸನ್ನಿವೇಶ ಎದುರಾದರೆ ಇಂಗ್ಲೆಂಡ್ ತಂಡವನ್ನು ಕೇವಲ 100 ರನ್‌ಗಳಿಗೆ ಆಲ್‌ಔಟ್ ಮಾಡಬೇಕು. ಬಳಿಕ ಪಾಕ್ ಈ ಮೊತ್ತವನ್ನು ಕೇವಲ 2.5 ಓವರ್‌ಗಳಿಗೆ ಚೇಸ್ ಮಾಡಬೇಕು. ಆ ಮೂಲಕ 283 ಎಸೆತಗಳು ಬಾಕಿ ಇರುವಾಗಲೇ ಪಾಕ್ ಪಂದ್ಯವನ್ನು ಗೆಲ್ಲಬೇಕು. ಇದು ಸಾಧ್ಯವಾಗದೇ ಇದ್ದರೆ ಪಾಕ್ ವಿಶ್ವಕಪ್ ಅಭಿಯಾನ ಕೊನೆಗೊಳ್ಳುತ್ತದೆ. ಮತ್ತೊಂದೆಡೆ, -0.338 ರನ್‌ರೇಟ್ ಹೊಂದಿರುವ ಅಫ್ಘಾನಿಸ್ತಾನವು ಸೆಮಿಸ್‌ಗೆ ಅರ್ಹತೆ ಪಡೆಯಲು ಇಂದು ನಡೆಯುವ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯವನ್ನು ಕನಿಷ್ಠ 438 ರನ್‌ಗಳಿಂದ ಗೆಲ್ಲಬೇಕಾಗಿದೆ. ಇದಕ್ಕಿಂತ ಕಡಿಮೆ ರನ್ನಿಂದ ಗೆದ್ದರೆ ಅಫಘಾನಿಸ್ತಾನವೂ ಟೂರ್ನಿಯಿಂದ ಹೊರಬೀಳಲಿದೆ.