ಬೆಂಗಳೂರು: ಬಹುನಿರೀಕ್ಷಿತ ಕನ್ನಡ ಚಲನಚಿತ್ರ ಕಪ್ನ (KCC 2024) ನಾಲ್ಕನೇ ಆವೃತ್ತಿಗೆ ಆಟಗಾರರ ಹರಾಜು ಪ್ರಕ್ರಿಯೆ ನವೆಂಬರ್ 26ರಂದು ನಡೆಯಲಿದೆ ಎಂಬುದಾಗಿ ಕಿಚ್ಚ ಸುದೀಪ್ ಮಾಹಿತಿ ನೀಡಿದ್ದಾರೆ. ಅಂದು ಟೂರ್ನಿಯ ಕುರಿತು ಸ್ಪಷ್ಟ ಮಾಹಿತಿ ದೊರೆಯಲಿದೆ. ಪಾಲ್ಗೊಳ್ಳಲಿರುವ ಅಂತಾರಾಷ್ಡ್ರೀಯ ಮಟ್ಟದ ಕ್ರಿಕೆಟಿಗರು ಸೇರಿದಂತೆ ಎಲ್ಲ ಮಾಹಿತಿಗಳು ದೊರೆಯಲಿವೆ ಸುದೀಪ್ ಮಾಹಿತಿ ನೀಡಿದ್ದಾರೆ.
ನವೆಂಬರ್ 26 ರಂದು ನಡೆಯುವ ಹರಾಜಿನ ವೇಳೆ ಇಂಟರ್ ನ್ಯಾಷನಲ್ ಪ್ಲೇಯರ್ಸ್ ಯಾರ್ಯಾರು ಎಂಬುದು ಗೊತ್ತಾಗಲಿದೆ. ಕಳೆದ ಬಾರಿ ಆಡಿದ ಆಟಗಾರರು ಈ ಬಾರಿಯೂ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಆದರೆ ಕೆಲವೊಂದು ಬದಲಾವಣೆಗಳು ನಡೆಯಲಿವೆ. ಕೆಲವು ಸದಸ್ಯರು ಶೂಟಿಂಗ್ನಲ್ಲಿ ಬ್ಯುಸಿಯಾಗಿರುವ ಕಾರಣ ಅವರು ಪಾಲ್ಗೊಳ್ಳುವುದಿಲ್ಲ. ಅದೇ ರೀತಿ ಇನ್ನೂ ಕೆಲವರು ಅನಾರೋಗ್ಯದ ಕಾರಣಕ್ಕೆ ಈ ಬಾರಿ ಪಾಲ್ಗೊಳ್ಳುತ್ತಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.
ಟಿವಿ ಕಲಾವಿದರು ಭಾಗಿ
ಕನ್ನಡ ಚಲನಚಿತ್ರ ಕಪ್ನಲ್ಲಿ ಇದೇ ಮೊದಲ ಬಾರಿಗೆ ಕಿರು ತೆರೆ ಕಲಾವಿದರು ಭಾಗಿಯಾಗಲಿದ್ದಾರೆ. ಈಗಾಗಲೇ ಕಪ್ನಲ್ಲಿ ಆಡುವುದಕ್ಕಾಗಿ ಎಲ್ಲರೂ ಅಭ್ಯಾಸ ಆರಂಭಿಸಿದ್ದಾರೆ ಎಂದು ಸುದೀಪ್ ಹೇಳಿಕೊಂಡರು. ನಟ ಗಣೇಶ್ ಟೂರ್ನಿಗಾಗಿ ಸತತವಾಗಿ ಅಭ್ಯಾಸ ಮಾಡುತ್ತಿದ್ದಾರೆ. ಅವರು ಶೂಟಿಂಗ್ನಷ್ಟೇ ಕ್ರಿಕೆಟ್ಗೂ ಆದ್ಯತೆ ನೀಡಿದ್ದಾರೆ ಎಂಬುದಾಗಿ ಸುದೀಪ್ ಇದೇ ವೇಳೆ ನುಡಿದರು.
ಇದನ್ನೂ ಓದಿ: Bangalore Kambala : ಕಂಬಳ ನೋಡಲು ಹೋಗ್ತೀರಾ? ಹಾಗಿದ್ದರೆ ಈ ಸಂಗತಿಗಳನ್ನು ತಿಳಿದುಕೊಳ್ಳಿ
ಒಟ್ಟು ಆರು ತಂಡಗಳು ಈ ಆವೃತ್ತಿಯಲ್ಲೂ ಪಾಲ್ಗೊಳ್ಳಲಿದೆ. ಒಂದೊಂದು ತಂಡ ತಲಾ ಐದು ಪಂದ್ಯಗಳಲ್ಲಿ ಆಡಬೇಕಾಗುತ್ತದೆ. ಅತ್ಯುತ್ತಮ ಎರಡು ತಂಡಗಳು ಟ್ರೋಫಿಗಾಗಿ ಫೈನಲ್ನಲ್ಲಿ ಸೆಣಸಲಿವೆ ಎಂಬುದಾಗಿ ಸುದೀಪ್ ಮಾಹಿತಿ ನೀಡಿದ್ದಾರೆ.
ತಂಡಗಳಲ್ಲಿ ಯಾರ್ಯಾರು ಇರುತ್ತಾರೆ ಎಂಬ ಮಾಹಿತಿ ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ. ಡಿಸೆಂಬರ್ ಡಿಸೆಂಬರ್ 23,24, 25ರಂದು ಅದ್ಧೂರಿಯಾಗಿ ಟೂರ್ನಮೆಂಟ್ ನಡೆಯಲಿದೆ. ಎಲ್ಲರಿಗೂ ವೀಕ್ಷಣೆಗ ಅವಕಾಶ ಸಿಗುವಂತೆ ಕಡಿಮೆ ದರದಲ್ಲಿ ಟಿಕೆಟ್ ನೀಡುತ್ತಿದ್ದೇವೆ. ಡಾಲಿ ಧನಂಜಯ್ .ಶಿವಣ್ಣ. ದುನಿಯಾ ವಿಜಯ್ ಸೇರಿದಂತೆ ಹಲವು ಸ್ಟಾರ್ಸ್ ಭಾಗಿಯಾಗಲಿದ್ದಾರೆ ಎಂದು ಸುದೀಪ್ ವಿವರಣೆ ನೀಡಿದರು.