ಪುದಚೆರಿ: ಇಲ್ಲಿ ನಡೆದ ದೇವಧರ್ ಟ್ರೋಫಿ(Deodhar Trophy 2023) ಲಿಸ್ಟ್ ‘ಎ’ ಕ್ರಿಕೆಟ್ ಟೂರ್ನಿಯಲ್ಲಿ ದಕ್ಷಿಣ ವಲಯ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೈನಲ್ ಪಂದ್ಯದಲ್ಲಿ ಅಗರ್ವಾಲ್(Mayank Agarwal) ಸಾರಥ್ಯದ ದಕ್ಷಿಣ ವಲಯ ತಂಡ ಪೂರ್ವ ವಲಯ(South Zone vs East Zone, Final) ಎದುರು 45 ರನ್ಗಳ ಅಮೋಘ ಗೆಲುವು ಸಾಧಿಸಿ ಟ್ರೋಫಿ ತನ್ನದಾಗಿಸಿಕೊಂಡಿತು. ಈ ಮೂಲಕ 9ನೇ ಬಾರಿ ಕಪ್ ಗೆದ್ದ ಹಿರಿಮೆಗೂ ಪಾತ್ರವಾಯಿತು.
4 ವರ್ಷಗಳ ಬಳಿಕ ನಡೆದ ಈ ಟೂರ್ನಿಯಲ್ಲಿ ಅಜೇಯ ಸಾಧನೆಯೊಂದಿಗೆ ಫೈನಲ್ ತಲುಪಿದ ದಕ್ಷಿಣ ವಲಯ ಪ್ರಶಸ್ತಿ ಸುತ್ತಿನಲ್ಲೂ ಶ್ರೇಷ್ಠ ಮಟ್ಟದ ಪ್ರದರ್ಶನ ತೋರುವ ಮೂಲಕ ಅಧಿಕಾರಯುತ ಗೆಲುವು ಸಾಧಿಸಿತು. ಮೊದಲು ಬ್ಯಾಟಿಂಗ್ ನಡೆಸಿದ ದಕ್ಷಿಣ ವಲಯ ರೋಹನ್ ಕುನ್ನುಮಲ್‌ರ ಅವರ ಆಕರ್ಷಕ ಶತಕ ಹಾಗೂ ನಾಯಕ ಮಯಾಂಕ್ ಅಗರ್ವಾಲ್ ಅವರ ಅರ್ಧಶತಕದ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 328 ರನ್ ಕಲೆಹಾಕಿತು.
ಬೃಹತ್ ಮೊತ್ತವನ್ನು ಬೆನ್ನಟ್ಟಿದ ಪೂರ್ವ ವಲಯಕ್ಕೆ ವಾಸುಕಿ ಕೌಶಿಕ್ ಹಾಗೂ ವಿದ್ವತ್ ಕಾವೇರಪ್ಪ ಆರಂಭದಲ್ಲೇ ಆಘಾತವಿಕ್ಕಿದರು. ತಂಡ ಮೊತ್ತ 14 ರನ್ ಆಗುವಷ್ಟರಲ್ಲಿ ಮೂರು ವಿಕೆಟ್ ಕಿತ್ತು ಎದುರಾಳಿಗಳಿಗೆ ಒತ್ತಡ ಹೇರಿದರು. ಆರಂಭಿಕ ಆಘಾತಕ್ಕೆ ಒಳಗಾಗ ಪೂರ್ವ ವಲಯಕ್ಕೆ 4ನೇ ವಿಕೆಟ್‌ಗೆ ಜತೆಯಾದ ಸುದೀಪ್ ಘರಾಮಿ ಹಾಗೂ ನಾಯಕ ಸೌರಭ್ ತಿವಾರಿ 58 ರನ್ ಜತೆಯಾಟವಾಡಿ ತಂಡಕ್ಕೆ ಆಸರೆಯಾದರು. ಸೌರಭ್(28) ಹಾಗೂ ಸುದೀಪ್(41) ರನ್ ಬಾರಿಸಿದರು. ಆರನೇ ಕ್ರಮಾಂಕದಲ್ಲಿ ಸ್ಫೋಟಕ ಬಾಟಿಂಗ್ ನಡೆಸಿದ ರಿಯಾನ್ ಪರಾಗ್ ಅವರು ಒಂದು ಹಂತದಲ್ಲಿ ತಂಡಕ್ಕೆ ಗೆಲುವು ತಂದುಕೊಡುವ ಸೂಚನೆ ನೀಡಿದರು. ಇವರಿಗೆ ಮತ್ತೊಂದು ತುದಿಯಲ್ಲಿ ಕುಶಾಗ್ರ ಕೂಡ ಉತ್ತಮ ಸಾಥ್ ನೀಡಿದರು. ಆದರೆ ಉಭಯ ಆಟಗಾರರ ವಿಕೆಟ್ ಬೀಳುತ್ತಿದ್ದಂತೆ ತಂಡದ ಸೋಲು ಕೂಡ ಖಚಿತವಾಯಿತು.
ಇದನ್ನೂ ಓದಿ Viral Video: ಜಡಿ ಮಳೆಯಲ್ಲೂ ಬ್ಯಾಟಿಂಗ್ ಅಭ್ಯಾಸ ನಡೆಸಿದ ಮಯಾಂಕ್ ಅಗರ್ವಾಲ್; ವಿಡಿಯೊ ವೈರಲ್
ರಿಯಾನ್ ಪರಾಗ್ 65 ಎಸೆತಗಳಲ್ಲಿ 8 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 95 ರನ್ ಬಾರಿಸಿದರು. 58 ಎಸೆತಗಳಲ್ಲಿ 68 ರನ್ ಸಿಡಿಸಿ ಕುಶಾಗ್ರ ಕೂಡ ವಿಕೆಟ್ ಕೈಚೆಲ್ಲಿದರು. ಉಭಯ ಆಟಗಾರ ವಿಕೆಟ್ ಕೂಡ ಆಫ್‌ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಕಡೆವಿದರು. ಅಂತಿಮವಾಗಿ ತಂಡ 46 ಓವರ್‌ಗಳಲ್ಲಿ 283 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಸೋಲು ಕಂಡಿತು.
ದಕ್ಷಿಣ ವಲಯ ಪರ ಕೇರಳ ಬ್ಯಾಟರ್ ರೋಹನ್ 75 ಎಸತೆಗಳಲ್ಲಿ 107 ರನ್ ಸಿಡಿಸಿದರು. ಅವರ ಈ ಶತಕ ಇನಿಂಗ್ಸ್ನಲ್ಲಿ 11 ಬೌಂಡರಿ ಹಾಗೂ 4 ಸಿಕ್ಸರ್ ದಾಖಲಾಯಿತು. ನಾಯಕ ಮಯಾಂಕ್ ಅಗರ್ವಾಲ್ 63 ರನ್ ಬಾರಿಸಿದರು. ಅಂತಿಮ ಹಂತದಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದ ಜಗದೀಶನ್ 54 ರನ್ ಬಾರಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು.