ಅಬುಧಾಬಿ : ಯುಎಇ ಕ್ರಿಕೆಟ್ ಲೀಗ್‌ನಲ್ಲಿ ರಿಲಯನ್ಸ್ ಒಡೆತನದ ಫ್ರಾಂಚೈಸಿ ಎಮ್‌ಐ ಎಮಿರೇಟ್ಸ್ ತನ್ನ ತಂಡದ ಕೋಚ್‌ಗಳ ಪಟ್ಟಿಯನ್ನು ಶನಿವಾರ ಪ್ರಕಟಿಸಿದ್ದು, ಕನ್ನಡಿಗ ವಿನಯ್ ಕುಮಾರ್ ಅವರು ಬೌಲಿಂಗ್ ಕೋಚ್ ಆಗಿ ಅಯ್ಕೆಯಾಗಿದ್ದಾರೆ. ನ್ಯೂಜಿಲೆಂಡ್‌ನ ಮಾಜಿ ಕ್ರಿಕೆಟಿಗ ಶೇನ್ ಬಾಂಡ್ ಅವರು ಹೆಡ್ ಕೋಚ್ ಆಗಿ ಆಯ್ಕೆಯಾಗಿದ್ದು, ಮುಂಬಯಿ ಇಂಡಿಯನ್ಸ್ ಮಾಜಿ ಆಲ್‌ರೌಂಡರ್ ಜೇಮ್ಸ್ ಫ್ರಾಂಕ್ಲಿನ್ ಫೀಲ್ಡಿಂಗ್ ಕೋಚ್ ಹಾಗೂ ಐಪಿಎಲ್‌ನಲ್ಲಿ ಅನುಭವ ಹೊಂದಿರುವ ರಾಬಿನ್ ಸಿಂಗ್ ಅವರನ್ನು ವ್ಯವಸ್ಥಾಪಕರನ್ನಾಗಿ ಆಯ್ಕೆ ಮಾಡಲಾಗಿದೆ. ಪಾರ್ಥಿವ್ ಪಟೇಲ್ ಕೂಡ ಕೋಚಿಂಗ್ ವಿಭಾಗದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ.
ಉತ್ತಮ ಕೋಚ್‌ಗಳ ಆಯ್ಕೆ
ಶೇನ್ ಬಾಂಡ್ 2015ರಲ್ಲಿ ಮುಂಬೈ ಇಂಡಿಯನ್ಸ್‌ಗೆ ಕೋಚಿಂಗ್ ವಿಭಾಗ ಸೇರಿದ್ದರು. ಅಂದಿನಿಂದಲೂ ಅವರು 4 ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ರಾಬಿನ್ ಸಿಂಗ್ 2010 ರಲ್ಲಿ ಮುಂಬೈ ಇಂಡಿಯನ್ಸ್ ಕೋಚಿಂಗ್ ತಂಡ ಸೇರಿಕೊಂಡು, 5 ಐಪಿಎಲ್ ಮತ್ತು 2 ಚಾಂಪಿಯನ್ಸ್ ಲೀಗ್‌ನಲ್ಲಿ ಮ್ಯಾನೇಜರ್ ಜವಾಬ್ದಾರಿಯನ್ನು ನೋಡಿಕೊಂಡಿದ್ದರು.
ಪಾರ್ಥಿವ್ ಪಟೇಲ್ ಈ ಹಿಂದೆ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಆಡಿದ್ದರು. ಅಲ್ಲದೆ, 2020ರಿಂದ ಟ್ಯಾಲೆಂಟ್ ಸ್ಕೌಟಿಂಗ್ ವಿಭಾಗದಲ್ಲಿದ್ದರು. ಮುಂಬಯಿ ಇಂಡಿಯನ್ಸ್ ತಂಡದ ಮಾಜಿ ಸದಸ್ಯ ವಿನಯ್ ಕುಮಾರ್ ಅವರು 2021 ರಲ್ಲಿ ಸ್ಕೌಟಿಂಗ್ ವಿಭಾಗ ಸೇರಿಕೊಂಡಿದ್ದರು. ಪಾರ್ಥಿವ್ ಮತ್ತು ವಿನಯ್ 2015 ಮತ್ತು 2017ರಲ್ಲಿ ಮುಂಬಯಿ ಇಂಡಿಯನ್ಸ್ ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾಗ ತಂಡದ ಭಾಗವಾಗಿದ್ದರು.
ಎಂಐ ಎಮಿರೇಟ್ಸ್‌ನ ಮುಖ್ಯ ತರಬೇತುದಾರ ಶೇನ್ ಬಾಂಡ್ “ಎಂಐ ಎಮಿರೇಟ್ಸ್‌ನ ಮುಖ್ಯ ತರಬೇತುದಾರರಾಗಿ ನೇಮಕಗೊಂಡಿರುವುದು ನನಗೆ ಸಂತಸ ತಂದಿದೆ. ಹೊಸ ತಂಡ ರಚಿಸುವುದು ಉತ್ತೇಜಕಾರಿ ಕೆಲಸ. ಎಂಐ ಪರಂಪರೆ ಮುಂದುವರಿಸಲು ಮತ್ತು ಕ್ರಿಕೆಟ್ ಅನ್ನು ಹೊಸ ಉತ್ತುಂಗಕ್ಕೆ ಕೊಂಡೊಯ್ಯಲು ಸದವಕಾಶ,” ಎಂದು ತಮ್ಮ ಆಯ್ಕೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಇನ್ನೂ ಓದಿ | MI Cape Town | ಎಂಐ ಕೇಪ್‌ಟೌನ್‌ನ ಮುಖ್ಯ ಕೋಚ್ ಸೈಮನ್ ಕ್ಯಾಟಿಚ್, ಆಮ್ಲಾ ಬ್ಯಾಟಿಂಗ್ ತರಬೇತುದಾರ