ಇಂದೋರ್ : ಭಾರತ ತಂಡದ ಸ್ಪಿನ್ ಬೌಲರ್ ಆರ್. ಅಶ್ವಿನ್ ಭಾರತ ಕ್ರಿಕೆಟ್ ತಂಡದ ಪರ ಹೊಸ ದಾಖಲೆ ಮಾಡಿದ್ದಾರೆ. ಅವರೀಗ ಭಾರತ ತಂಡದ ಪರ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ವಿಕೆಟ್ ಕಬಳಿಸಿದ ಭಾರತೀಯ ಬೌಲರ್ಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ. ಈ ವೇಳೆ 1983ರ ವಿಶ್ವ ಕಪ್ ವಿಜೇತ ಭಾರತ ತಂಡದ ನಾಯಕ ಕಪಿಲ್ದೇವ್ ಅವರನ್ನು ಹಿಂದಿಕ್ಕಿದ್ದಾರೆ. ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ (INDvsAUS) ವೇಳೆ ಅಶ್ವಿನ್ ಈ ಸಾಧನೆ ಮಾಡಿದ್ದಾರೆ. ಇಂದೋರ್ ಟೆಸ್ಟ್ನ ಮೂರನೇ ಪಂದ್ಯದ ಎರಡನೇ ಇನಿಂಗ್ಸ್ನಲ್ಲಿ ಅವರು 3 ವಿಕೆಟ್ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಕಪಿಲ್ದೇವ್ ಅವರು 356 ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ಒಟ್ಟು 687 ವಿಕೆಟ್ ಉರುಳಿಸಿದ್ದರು. ಅವರು 401 ಪಂದ್ಯಗಳಲ್ಲಿ 953 ವಿಕೆಟ್ ಕಬಳಿಸಿದ್ದು, ಅವರು ಈ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಅದೇ ರೀತಿ 365 ಪಂದ್ಯಗಳಲ್ಲಿ 707 ವಿಕೆಟ್ಗಳನ್ನು ಪಡೆದಿರುವ ಹರ್ಭಜನ್ ಸಿಂಗ್ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಅವರು ಆರ್. ಆಶ್ವಿನ್ಗಿಂತ 18 ವಿಕೆಟ್ ಮುಂದಿದ್ದಾರೆ. ಹೀಗಾಗಿ ಹರ್ಭಜನ್ ದಾಖಲೆ ಮುರಿಯುವ ಅವಕಾಶ ಅಶ್ವಿನ್ಗೆ ಇದೆ.
ಇದನ್ನೂ ಓದಿ : INDvsAUS : ತವರು ನೆಲದಲ್ಲಿ ವಿಶೇಷ ಬೌಲಿಂಗ್ ಸಾಧನೆ ಮಾಡಿದ ಉಮೇಶ್ ಯಾದವ್; ಏನದು ದಾಖಲೆ?
ಒಟ್ಟು ವಿಕೆಟ್ಗಳ ಪೈಕಿ ಆರ್. ಅಶ್ವಿನ್ ಅವರ ಟೆಸ್ಟ್ ವಿಕೆಟ್ಗಳ ಸಂಖ್ಯೆ 466. ಇಲ್ಲಿ ಅವರಿಗೆ ಎರಡನೇ ಸ್ಥಾನವಿದೆ. 619 ವಿಕೆಟ್ ಪಡೆದಿರುವ ಅನಿಲ್ ಕುಂಬ್ಳೆ ಮೊದಲ ಸ್ಥಾನ ಪಡೆದುಕೊಂಡಿದ್ದರೆ ಕಪಿಲ್ ದೇವ್ 434 ವಿಕೆಟ್ಗಳೊಂದಿಗೆ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ಗಳು
- ಅನಿಲ್ ಕುಂಬ್ಳೆ 953 (499 ಇನಿಂಗ್ಸ್)
- ಹರ್ಭಜನ್ ಸಿಂಗ್ 707 (442 ಇನಿಂಗ್ಸ್)
- ಆರ್ ಅಶ್ವಿನ್ 689 (347 ಇನಿಂಗ್ಸ್)
- ಕಪಿಲ್ ದೇವ್ 687 (356 ಇನಿಂಗ್ಸ್)
- ಜಹೀರ್ ಖಾನ್ 597 (373 ಇನಿಂಗ್ಸ್)