ಮುಂಬಯಿ: ಕಾರು ಅಪಘಾತದಲ್ಲಿ ಗಾಯಗೊಂಡಿರುವ ಟೀಮ್ ಇಂಡಿಯಾ(team india) ಆಟಗಾರ ರಿಷಭ್ ಪಂತ್(Rishabh Pant) ಸಂಪೂರ್ಣವಾಗಿ ಚೇತರಿಕೆ ಕಂಡ ಬಳಿಕ ಅವರಿಗೆ ಕಪಾಳಮೋಕ್ಷ ಮಾಡುವುದಾಗಿ ಟೀಮ್ ಇಂಡಿಯಾದ ಮಾಜಿ ದಿಗ್ಗಜ ಕಪಿಲ್ ದೇವ್(Kapil Dev) ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಕಪಿಲ್ ದೇವ್, ‘ಪಂತ್ ಅನುಪಸ್ಥಿತಿಯು ಭಾರತ ಕ್ರಿಕೆಟ್ ತಂಡವನ್ನು ಕಾಡುತ್ತಿದೆ. ಆಸೀಸ್ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಅವರ ಅಲಭ್ಯತೆ ಭಾರತಕ್ಕೆ ತುಂಬಲಾರದ ನಷ್ಟವಾಗಿದೆ. ಮಕ್ಕಳು ತಪ್ಪು ಮಾಡಿದಾಗ ಕಪಾಳಮೋಕ್ಷ ಮಾಡುವ ಹಕ್ಕು ಪೋಷಕರಿಗೆ ಇರುವಂತೆಯೇ ಗಾಯದಿಂದ ಚೇತರಿಸಿಕೊಂಡ ಬಳಿಕ ಪಂತ್‌ಗೆ ನಾನು ಕಪಾಳ ಮೋಕ್ಷ ಮಾಡುವೆ” ಎಂದು ಅವರು ಹೇಳಿದ್ದಾರೆ.
ಪಂತ್ ಎಂದರೆ ನನಗೆ ಪ್ರೀತಿ
ರಿಷಭ್ ಪಂತ್ ಮೇಲೆ ನನಗೆ ತುಂಬಾ ಪ್ರೀತಿ ಇದೆ. ಅವನು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ನಾನು ಬಯಸುತ್ತೇನೆ. ಚೇತರಿಕೆ ಕಂಡ ಬಳಿ ಅವನನ್ನು ಭೇಟಿಯಾಗಿ ಕಪಾಳಮೋಕ್ಷ ಮಾಡುವ ಮೂಲಕ ನಿನ್ನನ್ನು ನೀನು ಚೆನ್ನಾಗಿ ನೋಡಿಕೊ ಎಂದು ಬುದ್ದಿವಾದ ಹೇಳುತ್ತೇನೆ ಎಂದು ಕಪಿಲ್ ಹೇಳಿದರು.
ಪಂತ್ ಕಾರು ಅಪಘಾತ ಸುದ್ದಿ ತಿಳಿದ ತಕ್ಷಣ ಒಂದು ಕ್ಷಣ ನಾನು ನಲುಗಿದೆ. ನಾನು ಅವನನ್ನು ಪ್ರೀತಿಸುತ್ತೇನೆ. ಆದರೆ ನನಗೂ ಕೂಡ ಅವನ ಮೇಲೆ ಕೋಪವಿದೆ. ಇಂದಿನ ಯುವಕರು ಯಾಕೆ ಇಂತಹ ತಪ್ಪುಗಳನ್ನು ಮಾಡುತ್ತಾರೆ? ಇಂತಹ ತಪ್ಪು ಮಾಡಿರುವುದಕ್ಕೆ ಕಪಾಳಮೋಕ್ಷ ಮಾಡಬೇಕು ಎಂದು ಕಪಿಲ್ ಹೇಳಿದರು.
ಇದನ್ನೂ ಓದಿ Rishabh Pant: ಆರೋಗ್ಯದಲ್ಲಿ ಮತ್ತಷ್ಟು ಚೇತರಿಕೆ; ಇನ್ಸ್ಟಾಗ್ರಾಮ್ನಲ್ಲಿ ಹೊಸ ಅಪ್ಡೇಟ್ ಕೊಟ್ಟ ರಿಷಭ್ ಪಂತ್
ಪಂತ್ ಅಪಘಾತದ ಬಳಿಕ ಕಪಿಲ್ ದೇವ್ ಎಲ್ಲ ಯುವ ಕ್ರಿಕೆಟ್ ಆಟಗಾರರು ವಾಹನವನ್ನು ಚಲಾಯಿಸುವಾಗ ಜಾಗರೂಕರಾಗಿರ ಬೇಕು, ಅತಿ ವೇಗದ ಚಾಲನೆ ಮಾಡಬಾರದೆಂದು ಕಿವಿ ಮಾತು ಹೇಳಿದ್ದರು. ಸದ್ಯ ಪಂತ್ ಅವರು ಮುಂಬಯಿಯ ಖಾಸಗಿ ಆಸ್ಪತ್ರೆಯಲ್ಲಿ ಕಾಲಿನ ಶಸ್ತ್ರಚಿಕಿತ್ಸೆಗೆ ಒಳಪಟ್ಟು ಚಿಕಿತ್ಸೆ ಪಡೆಯುತ್ತಿದ್ದಾರೆ.