ದುಬೈ: ಫ್ರಾನ್ಸ್ ತಂಡದ ಸ್ಟ್ರೈಕರ್ ಕರೀಂ ಬೆಂಜೆಮಾ(Karim Benzema) ಅವರು ರಿಯಲ್ ಮ್ಯಾಡ್ರಿಡ್ ತಂಡ ತೊರೆದ ಕೆಲವೇ ದಿನಗಳಲ್ಲಿ ಸೌದಿ ಅರೇಬಿಯಾದ ಫುಟ್ಬಾಲ್ ಕ್ಲಬ್ ಸೇರಿಕೊಂಡಿದ್ದಾರೆ. ಹಾಲಿ ಸೌದಿ ಪ್ರೊ ಲೀಗ್‌ನಲ್ಲಿ ಚಾಂಪಿಯನ್ ಆಗಿರುವ ಅಲ್ ಇತ್ತಿಹಾದ್ (Al Ittihad) ಕ್ಲಬ್ ಜತೆ ಒಪ್ಪಂದ ಮಾಡಿಕೊಂಡಿದ್ದಾರೆ. ಈ ವಿಚಾರವನ್ನು ಕ್ಲಬ್ ಖಚಿತಪಡಿಸಿದ್ದು, ಬೆಂಜೆಮಾ ಅವರ ಸೇರ್ಪಡೆಯೊಂದಿಗೆ ಕ್ಲಬ್ ಮತ್ತಷ್ಟು ಬಲಶಾಲಿಯಾಗಿ ಗೋಚರಿಸಲಿದೆ ಎಂದು ತಿಳಿಸಿದೆ.
ರಿಯಲ್ ಮ್ಯಾಡ್ರಿಡ್ ಕ್ಲಬ್ ಪರ 14 ವರ್ಷಗಳ ಕಾಲ ಆಡಿದ ಬೆಂಜೆಮಾ ಅವರು ಕಳೆದ ವಾರ ಈ ತಂಡವನ್ನು ತೊರಿದಿದ್ದರು. ಇದೀಗ ಮುಂದಿನ ಮೂರು ವರ್ಷಗಳ ಒಪ್ಪಂದದಡಿ ಸೌದಿ ಅರೇಬಿಯಾದ ಅಲ್ ಇತ್ತಿಹಾದ್ ತಂಡದ ಪರ ಆಡಲಿದ್ದಾರೆ.
“ಏಷ್ಯಾದಲ್ಲಿ ಫುಟ್ಬಾಲ್ ಲೀಗ್ ಆಡಲು ನಾನು ಉತ್ಸುಕನಾಗಿದ್ದೇನೆ. ನನ್ನ ವೃತ್ತಿಜೀವನದಲ್ಲಿ ಕೆಲವೊಂದು ಅದ್ಭುತ ವಿಷಯಗಳನ್ನು ಸಾಧಿಸಲು ಖುಷಿಯಾಗುತ್ತಿದೆ. ತಂಡಕ್ಕೆ ಬೇಕಾದ ಎಲ್ಲ ಸಹಕಾರವನ್ನು ನಾನು ನೀಡಲು ಸಿದ್ಧನಿದ್ದೇನೆ. ಹೊಸ ಸವಾಲು ಮತ್ತು ಯೋಜನೆಗೆ ಇದು ಸರಿಯಾದ ಸಮಯ ಎಂದು ಭಾವಿಸುತ್ತೇನೆ” ಎಂದು ಕರೀಂ ಬೆಂಜೆಮಾ ಹೇಳಿದರು. 35 ವರ್ಷದ ಬೆಂಜೆಮಾ ಅವರು ಕಳೆದ ವರ್ಷ ವಿಶ್ವದ ಅತ್ಯುತ್ತಮ ಪುರುಷರ ಆಟಗಾರರಿಗಾಗಿ ಬ್ಯಾಲನ್ ಡಿ ಓರ್ ಪ್ರಶಸ್ತಿ ಗೆದ್ದುಕೊಂಡಿದ್ದರು.
ಇದನ್ನೂ ಓದಿ Lionel Messi: ಮತ್ತೆ ಬಾರ್ಸಿಲೋನಾ ಪರ ಆಡಲಿದ್ದಾರೆ ಲಿಯೋನೆಲ್ ಮೆಸ್ಸಿ!
Benzema is here 🤩✍️
— Ittihad Club (@ittihad_en) June 6, 2023
A new tiger will roar 🐅
Welcome to Ittihad!#Benzema2Ittihad#here2inspireKSA pic.twitter.com/I3GEm90fRB
ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ಫುಟ್ಬಾಲ್ ದಿಗ್ಗಜ ಕ್ರಿಸ್ಟಿಯಾನೋ ರೊನಾಲ್ಡೊ ಅವರು, ಸೌದಿ ಅರೇಬಿಯಾದ ಅಲ್ ನಾಸರ್ ಕ್ಲಬ್ ಸೇರಿಕೊಂಡಿದ್ದರು. ಇದೀಗ ಬೆಂಜೆಮಾ ಕೂಡ ರಿಯಲ್ ಮ್ಯಾಡ್ರಿಡ್ ತಂಡ ತೊರೆದು ರೊನಾಲ್ಡೊ ಅವರ ದಾರಿಯನ್ನೇ ಅನುಸರಿಸಿದ್ದಾರೆ. ಪಿಎಸ್ಜಿ ತಂಡದಿಂದ ಹೊರಬಂದ್ದಿರುವ ಲಿಯೋನೆಲ್ ಮೆಸ್ಸಿ ಕೂಡ ಸೌದಿ ಅರೇಬಿಯಾದ ತಂಡವೊಂದಕ್ಕೆ ಸೇರಲಿದ್ದಾರೆ ಎಂದು ವರದಿಯಾಗಿದೆ.