ಬೆಂಗಳೂರು: ಟಿ20 ವಿಶ್ವಕಪ್ ವಿಜೇತ ಭಾರತ ತಂಡದ ಕೋಚ್, ಕನ್ನಡಿಗ ರಾಹುಲ್ ದ್ರಾವಿಡ್(Rahul Dravid) ಅವರಿಗೆ ಅಭಿನಂದಿಸುವ ನಿರ್ಣಯವನ್ನು ವಿಧಾನಸಭೆ ತೆಗೆದುಕೊಳ್ಳಬೇಕೆಂದು ರಾಜಾಜಿನಗರದ ಬಿಜೆಪಿ ಶಾಸಕ ಸುರೇಶ್ ಕುಮಾರ್(S. Suresh Kumar) ಆಗ್ರಹಿಸಿದ್ದಾರೆ. ಇದಕ್ಕೆ ಸ್ಪೀಕರ್ ಯು.ಟಿ. ಖಾದರ್(U. T. Khader) ಸಹಮತ ವ್ಯಕ್ತಪಡಿಸಿ ಈ ನಿರ್ಣಯವನ್ನು ಅಂಗೀಕರಿಸಿದ್ದಾರೆ.
ಭಾರತ ತಂಡ 17 ವರ್ಷಗಳ ಬಳಿಕ 2ನೇ ಟಿ20 ವಿಶ್ವಕಪ್ ಗೆಲ್ಲುವಂತಾಗಲು ಕೋಚ್ ರಾಹುಲ್ ದ್ರಾವಿಡ್ ಅವರ ತರಬೇತಿ ಹಾಗೂ ಮಾರ್ಗದರ್ಶನವೂ ಮಹತ್ವದ ಪಾತ್ರ ವಹಿಸಿದೆ. ಹೀಗಾಗಿ ಈ ಸದನ ಒಕ್ಕೊರಲಿನಿಂದ ಅವರನ್ನು ಅಭಿನಂದಿಸುವ ನಿರ್ಣಯ ತೆಗೆದುಕೊಳ್ಳಬೇಕು ಎಂದು ಸುರೇಶ್ ಕುಮಾರ್ ಹೇಳಿದರು. ಇದಕ್ಕೆ ಸಹಮತ ವ್ಯಕ್ತಪಡಿಸಿದ ಸ್ಪೀಕರ್ ಯು.ಟಿ. ಖಾದರ್, “ಈ ಬಗ್ಗೆ ಈಗಾಗಲೇ ಚರ್ಚಿಸಲಾಗಿದೆ. ದ್ರಾವಿಡ್ ಅವರನ್ನು ಅಭಿನಂದಿಸುವ ನಿರ್ಣಯವನ್ನು ತಕ್ಷಣ ಮಂಡಿಸುವುದಕ್ಕೆ ಸೂಚನೆ ನೀಡಲಾಗುವುದು’ ಎಂದರು.
ಕಳೆದ ವಾರ ಬೆಂಗಳೂರಿನ(Bengaluru) ಕ್ರಿಕೆಟ್ ಅಕಾಡೆಮಿಯ ವಿದ್ಯಾರ್ಥಿಗಳು ಗಾರ್ಡ್ ಆಫ್ ಹಾನರ್ (ಗೌರವ ವಂದನೆ) ಮೂಲಕ(guard of honour) ದ್ರಾವಿಡ್ಗೆ ಅಭಿನಂದಿಸಿದ್ದರು.
ರಾಹುಲ್ ದ್ರಾವಿಡ್ ಅವರು ಎನ್ಸಿಎ ಕ್ರಿಕೆಟ್ ಅಕಾಡೆಮಿಗೆ(cricket academy in Bengaluru) ಆಗಮಿಸುತ್ತಿದ್ದಂತೆ ಅಧಿಕಾರಿಗಳು ಮತ್ತು ಇಲ್ಲಿ ಕ್ರಿಕೆಟ್ ಅಭ್ಯಾಸ ನಡೆಸುತ್ತಿರುವ ವಿದ್ಯಾರ್ಥಿಗಳು ಬ್ಯಾಟ್ ಎತ್ತಿ ಗಾರ್ಡ್ ಆಫ್ ಹಾನರ್ ಮೂಲಕ ಗೌರವ ಸಲ್ಲಿಸಿದರು. ದ್ರಾವಿಡ್ ಕೂಡ ಸಂತಸದಿಂದಲೇ ಎಲ್ಲರ ಕೈ ಕುಲುಕಿ ಧನ್ಯವಾದ ತಿಳಿಸಿದ್ದರು.
ದ್ರಾವಿಡ್ಗೆ ಭಾರತ ರತ್ನ ನೀಡುವಂತೆ ಕೇಂದ್ರಕ್ಕೆ ಒತ್ತಾಯಿಸಿದ ಗವಾಸ್ಕರ್
ಪ್ರಧಾನ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಅವರಿಗೆ “ಭಾರತ ರತ್ನ” ಪ್ರಶಸ್ತಿಯಿಂದ ಗೌರವಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸುನೀಲ್ ಗವಾಸ್ಕರ್ ಒತ್ತಾಯಿಸಿದ್ದರು. “ಭಾರತ ಸರಕಾರವು ದ್ರಾವಿಡ್ಗೆ ಭಾರತ ರತ್ನ ಪ್ರಶಸ್ತಿಯಿಂದ ಗೌರವಿಸಿದರೆ ಅದು ಅವರಿಗೆ ಸಲ್ಲುವ ಸೂಕ್ತ ಗೌರವವಾಗುತ್ತದೆ. ಈ ಗೌರವಕ್ಕೆ ಅವರು ಸಂಪೂರ್ಣವಾಗಿ ಅರ್ಹರಾಗಿದ್ದಾರೆ ಎಂದು ಕೇಳಿದ್ದರು.
ಇದನ್ನೂ ಓದಿ Rahul Dravid : ತಮಗೆ ನೀಡಿದ 2.5 ಕೋಟಿ ರೂಪಾಯಿ ನಿರಾಕರಿಸಿ ಸಮಾನತೆ ತತ್ವ ಸಾರಿದ ರಾಹುಲ್ ದ್ರಾವಿಡ್
ದ್ರಾವಿಡ್ ಆಟಗಾರರಾಗಿ ಮತ್ತು ತಂಡದ ನಾಯಕರಾಗಿ ವಿದೇಶಗಳಲ್ಲಿ ಭಾರತಕ್ಕೆ ಗೆಲುವು ತಂದು ಕೊಟ್ಟಿದ್ದಾರೆ. ವೆಸ್ಟ್ ಇಂಡೀಸ್ನಲ್ಲಿ ಗೆಲ್ಲುವುದು ಅಸಾಧ್ಯ ಎಂಬ ಕಾಲದಲ್ಲಿ ಅವರು ಭಾರತಕ್ಕೆ ಸರಣಿ ಗೆಲುವನ್ನು ತಂದಿದ್ದಾರೆ. ಇಂಗ್ಲೆಂಡ್ನಲ್ಲಿ ಟೆಸ್ಟ್ ಸರಣಿಗಳನ್ನು ಗೆದ್ದಿರುವ ಕೇವಲ ಮೂರು ಭಾರತೀಯ ನಾಯಕರ ಪೈಕಿ ಅವರು ಕೂಡ ಒಬ್ಬರಾಗಿದ್ದಾರೆ. ಈ ಹಿಂದೆ, ಅವರು ನ್ಯಾಶನಲ್ ಕ್ರಿಕೆಟ್ ಅಕಾಡೆಮಿಯ ಅಧ್ಯಕ್ಷರಾಗಿ ಅತ್ಯುತ್ತಮ ಕ್ರಿಕೆಟ್ ಪ್ರತಿಭೆಗಳನ್ನು ಹೊರತಂದಿದ್ದಾರೆ. ಬಳಿಕ ಭಾರತೀಯ ಹಿರಿಯರ ಕ್ರಿಕೆಟ್ ತಂಡದ ಕೋಚ್ ಆಗಿ ಉತ್ತಮ ನಿರ್ವಹಣೆ ನೀಡಿದ್ದಾರೆ ಎಂದು ಗವಾಸ್ಕರ್ ಬರೆದುಕೊಂಡಿದ್ದಾರೆ.
1996ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ರಾಹುಲ್ ದ್ರಾವಿಡ್ 2012ರ ವರೆಗೆ ಭಾರತ ತಂಡದ ಪರವಾಗಿ ಆಡಿದ್ದರು. ಆದರೆ ವಿಶ್ವಕಪ್ ಎನ್ನುವುದು ಅವರಿಗೆ ಕನಸಾಗಿತ್ತು. ಈ ಕೊರಗು ಕೂಡ ಅವರಲ್ಲಿತ್ತು. ನಾಯಕನಾಗಿ, ಆಟಗಾರನಾಗಿ ಗೆಲ್ಲಲಾಗದ ವಿಶ್ವಕಪ್ ಅನ್ನು ತರಬೇತುದಾರನಾಗಿ ಗಳಿಸಿಕೊಂಡಿದ್ದಾರೆ. ಅದು ಕೂಡ ತಮ್ಮ ಕೊನೆಯ ಮಾರ್ಗದರ್ಶನದಲ್ಲಿ ಎನ್ನುವುದು ವಿಶೇಷ.
2007ರಲ್ಲಿ ವೆಸ್ಟ್ ಇಂಡೀಸ್ನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ರಾಹುಲ್ ದ್ರಾವಿಡ್ ಅವರ ನಾಯಕತ್ವದಲ್ಲಿ ಭಾರತ ಅತ್ಯಂತ ಕಳಪೆ ಪ್ರದರ್ಶನ ತೋರುವ ಮೂಲಕ ಲೀಗ್ ಹಂತದಿಂದಲೇ ನಿರ್ಗಮಿಸಿತ್ತು. ದುರ್ಬಲ ಬಾಂಗ್ಲಾದೇಶ ವಿರುದ್ದವೂ ಕೂಡ ಗೆಲುವು ಸಾಧಿಸಲು ಸಾಧ್ಯವಾಗ ಅವಮಾನಕ್ಕೆ ಸಿಲುಕಿತ್ತು. ಅಂದು ಅವಮಾನ ಎದುರಿಸಿದ ವಿಂಡೀಸ್ ನೆಲದಲ್ಲೇ ಇದೀಗ ದ್ರಾವಿಡ್ ತರಬೇತುದಾರನಾಗಿ ವಿಶ್ವಕಪ್ ಕಪ್ ಗೆದ್ದು ಸಂಭ್ರಮಿಸಿ ತಮ್ಮ ಎಲ್ಲ ಹಿಂದಿನ ನೋವನ್ನು ಮರೆತಿದ್ದಾರೆ. ಸದ್ಯ ಕೋಚ್ ಹುದ್ದೆಯಿಂದ ಕೆಳಗಿಳಿದಿರುವ ದ್ರಾವಿಡ್ ತಮ್ಮ ಇಬ್ಬರು ಮಕ್ಕಳ ಕ್ರಿಕೆಟ್ ಭವಿಷ್ಯ ರೂಪಿಸುವಲ್ಲಿ ಹೆಚ್ಚಿನ ಕಾಳಜಿ ವಹಿಸಿಕೊಳ್ಳಬಹುದು.